Advertisement

ಕೋರ್ಟ್‌ ನಿರ್ಧಾರ ಸ್ವಾಗತಾರ್ಹ

12:25 AM Apr 13, 2019 | mahesh |

ಚುನಾವಣಾ ಬಾಂಡ್‌ ವಿಚಾರ ಇನ್ನಷ್ಟು ಜಟಿಲವಾಗುತ್ತಿದೆ. ಇದೀಗ ಸುಪ್ರೀಂ ಕೋರ್ಟ್‌ ಚುನಾವಣಾ ಬಾಂಡ್‌ ಕುರಿತಾಗಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯೊಂದರ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ತಮಗೆ ಸಿಕ್ಕಿರುವ ಚುನಾವಣಾ ಬಾಂಡ್‌ ರಸೀದಿಗಳನ್ನು ಮುಚ್ಚಿದ ಲಕೋಟೆಯಲ್ಲಿಟ್ಟು ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಆದೇಶಿಸಿರುವುದು ಬಾಂಡ್‌ಗಳ ಕುರಿತಾಗಿ ಸಾರ್ವಜನಿಕರಿಗೆ ಇರುವ ಅನುಮಾನವನ್ನು ನಿವಾರಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಾಗಿದೆ. ರಾಜಕೀಯ ಪಕ್ಷಗಳಿಗೆ ದೇಣಿಗೆ ಸಂಗ್ರಹಿಸಲು 2017ರಲ್ಲಿ ಸರಕಾರ ಜಾರಿಗೊಳಿಸಿದ ಚುನಾವಣಾ ಬಾಂಡ್‌ ಪದ್ಧತಿಯಿಂದ ಒಳಿತಿಗಿಂತ ಹೆಚ್ಚು ಕೆಡುಕು ಸಂಭವಿಸುವ ಸಾಧ್ಯತೆಯಿದೆ ಎಂಬ ವಾದದಲ್ಲಿ ಹುರುಳಿದೆ ಎನ್ನುವುದನ್ನು ಈ ಮೂಲಕ ನ್ಯಾಯಾಲಯವೂ ಒಪ್ಪಿಕೊಂಡಂತಾಗಿದೆ.

Advertisement

ರಾಜಕೀಯ ಕ್ಷೇತ್ರದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಸಲುವಾಗಿ ಚುನಾವಣಾ ಬಾಂಡ್‌ನ್ನು ಪರಿಚಯಿಸಲಾಗುತ್ತಿದೆ ಎಂದು ಸರಕಾರ ಹೇಳಿತ್ತು. ಆದರೆ ಬಾಂಡ್‌ಗಳು ಪ್ರಸ್ತುತ ರೂಪದಲ್ಲಿ ಭ್ರಷ್ಟಾಚಾರಕ್ಕೆ ಹೆಚ್ಚು ಕುಮ್ಮಕ್ಕು ಕೊಡುತ್ತಿವೆ ಎನ್ನುವುದು ಅದರ ಮೇಲಿರುವ ಪ್ರಮುಖ ಆರೋಪ. ಬಾಂಡ್‌ ಮೂಲಕ ದೇಣಿಗೆ ನೀಡುವವರ ಹೆಸರನ್ನು ಬಹಿರಂಗಪಡಿಸುವ ಅಗತ್ಯವಿಲ್ಲ ಎನ್ನುವುದು ಬಾಂಡ್‌ನ‌ ಪ್ರಮುಖ ನಿಯಮಗಳಲ್ಲಿ ಒಂದು. ಜನರಿಗೆ ದೇಣಿಗೆ ನೀಡಿದವರ ಹೆಸರು ಅರಿತು ಆಗಬೇಕಾದ್ದೇನೂ ಇಲ್ಲ ಎನ್ನುವುದು ಸರಕಾರದ ವಾದ. ತಾವು ಮತ ನೀಡುವ ಪಕ್ಷಕ್ಕೆ ಹಣದ ಮೂಲ ಯಾವುದು ಎಂದು ತಿಳಿಯುವ ಹಕ್ಕು ಮತದಾರನಿಗೆ ಇಲ್ಲ ಎನ್ನುವುದು ವಿತಂಡ ವಾದದಂತೆ ಕಾಣಿಸುತ್ತದೆ.

ಚುನಾವಣೆ ಮತ್ತು ಭ್ರಷ್ಟಾಚಾರಕ್ಕೆ ನಿಕಟವಾದ ಸಂಬಂಧ ಇದೆ. ಚುನಾವಣೆ ಸಮಯದಲ್ಲಿ ದೊಡ್ಡ ಪ್ರಮಾಣದ ಕಪ್ಪು ಹಣ ದೇಣಿಗೆ ರೂಪದಲ್ಲಿ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುತ್ತದೆ. ಅನಂತರ ಈ ಕಪ್ಪುಕುಳಗಳೇ ಗೆದ್ದ ಪಕ್ಷಗಳನ್ನು ನಿಯಂತ್ರಿಸುತ್ತವೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ರಾಜಕೀಯದಿಂದ ಕಪ್ಪು ಹಣವನ್ನು ನಿವಾರಿಸುವುದು ಚುನಾವಣಾ ಬಾಂಡ್‌ನ‌ ಸದಾಶಯವೇ ಆಗಿದ್ದರೂ ಈ ಆಶಯಕ್ಕೆ ಪೂರಕವಾದ ನಿಯಮಗಳನ್ನು ರಚಿಸಬೇಕಿತ್ತು. ಈ ವಿಚಾರದಲ್ಲಿ ಸರಕಾರ ಲೋಪ ಎಸಗಿದೆ ಎಂದೇ ಹೇಳಬೇಕಾಗುತ್ತದೆ.

ಸಾರ್ವಜನಿಕ ಹಿತಾಸಕ್ತಿಯನ್ನು ರಕ್ಷಿಸುವ ದೃಷ್ಟಿಯಿಂದಲಾದರೂ ಬಾಂಡ್‌ ಮೂಲಕ ದೇಣಿಗೆ ನೀಡಿದವರ ಹೆಸರುಗಳನ್ನು ಬಹಿರಂಗಪಡಿಸಬೇಕೆಂದು ದಾವೆದಾರರು ಒತ್ತಾಯಿಸಿದ್ದಾರೆ. ಈ ಅರ್ಜಿಯನ್ನು ಪರಿಗಣಿಸಿರುವ ಸುಪ್ರೀಂ ಕೋರ್ಟ್‌ ಬಾಂಡ್‌ಗೆ ತಡೆಯಾಜ್ಞೆ ನೀಡುವ ಸಾಧ್ಯತೆಯನ್ನು ಪರಿಶೀಲಿಸುತ್ತಿದ್ದು, ಒಂದು ವೇಳೆ ತಡೆಯಾಜ್ಞೆ ಬಂದರೆ ರಾಜಕೀಯ ಪಾರದರ್ಶಕತೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಸಂದ ದೊಡ್ಡ ಗೆಲುವಾಗುತ್ತದೆ. ಬಾಂಡ್‌ ಬಗ್ಗೆ ಬಹಳಷ್ಟು ಹೇಳಿಕೊಳ್ಳಬಹುದು. ಆದರೆ ಒಂದು ವಿಚಾರ ಮಾತ್ರ ಸ್ಪಷ್ಟ, ಇದು ರಹಸ್ಯ ದೇಣಿಗೆಯನ್ನು ಸಕ್ರಮಗೊಳಿಸಿದೆ. ರಾಜಕೀಯ ಪಾರದರ್ಶಕತೆ ಬಯಸುವವರ ಆತಂಕವೂ ಇದೇ ಆಗಿದೆ. ರಾಜಕೀಯ ಕ್ಷೇತ್ರ ಪಾರದರ್ಶಕವಾಗಿರಬೇಕಾದರೆ ಅಲ್ಲಿ ನಡೆಯುವ ಪ್ರತಿ ಚಟುವಟಿಕೆಯೂ ಜನರ ನೋಟದ ನಿಲುಕಿನಲ್ಲಿರಬೇಕು. ಈ ಹಿನ್ನೆಲೆಯಲ್ಲಿ ದೇಣಿಗೆ ಕೊಟ್ಟವರ ಪಟ್ಟಿಯನ್ನು ಸಾರ್ವಜನಿಕರ ಅವಗಾಹನೆಗಾಗಿ ಬಿಡುಗಡೆಗೊಳಿಸುವುದು ಒಂದು ಅಪೇಕ್ಷಣೀಯ ಕ್ರಮ. ಆದರೆ ಯಾವ ಪಕ್ಷವೂ ಈ ದಿಟ್ಟತನವನ್ನು ತೋರಿಸಲು ತಯಾರಿಲ್ಲ ಎನ್ನುವುದೇ ಅವುಗಳ ದೇಣಿಗೆಯ ಮೂಲದ ಮೇಲೆ ಅನುಮಾನ ಮೂಡಲು ಕಾರಣ. ಚುನಾವಣ ಖರ್ಚಿಗೆ ಸರಕಾರ ಹಣ ಕೊಡುವ ಪದ್ಧತಿ ನಮ್ಮಲ್ಲಿಲ್ಲದಿರುವುದರಿಂದ ಸಾರ್ವಜನಿಕ ದೇಣಿಗೆ ಸಂಗ್ರಹಿಸುವುದು ಅನಿವಾರ್ಯ ಹೌದು. ಆದರೆ ದೇಣಿಗೆ ಕೊಟ್ಟವರು ಹೆಸರನ್ನು ರಹಸ್ಯವಾಗಿಡುವ ಅನಿವಾರ್ಯತೆ ಏನು ಎನ್ನುವುದನ್ನು ಸರಕಾರ ತಿಳಿಸಬೇಕು.

1,000-10,000-10 ಲಕ್ಷ ಮತ್ತು 1 ಕೋ. ರೂ. ಮೌಲ್ಯದ ಬಾಂಡ್‌ಗಳನ್ನು ಬಿಡುಗಡೆಗೊಳಿಸಲಾಗುತ್ತಿದ್ದರೂ ಈ ಪೈಕಿ ಹೆಚ್ಚು ಮಾರಾಟವಾಗುವುದು ಗರಿಷ್ಠ ಮೌಲ್ಯದ ಬಾಂಡ್‌ಗಳ ಎಂಬ ಅಂಶವನ್ನು ಇತ್ತೀಚೆಗೆ ಬ್ಯಾಂಕೊಂದು ಬಹಿರಂಗಪಡಿಸಿದೆ. ಅರ್ಥಾತ್‌ ಈ ಬಾಂಡ್‌ಗಳನ್ನು ಖರೀದಿಸಿ ಪಕ್ಷಗಳಿಗೆ ದೇಣಿಗೆಯಾಗಿ ನೀಡುತ್ತಿರುವ ಜನಸಾಮಾನ್ಯರಲ್ಲ ಬದಲಾಗಿ ದೊಡ್ಡ ದೊಡ್ಡ ಕಾರ್ಪೋರೇಟ್‌ ಕುಳಗಳು ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. 2019ರಲ್ಲಿ 1179 ಕೋ. ರೂ. ಮೌಲ್ಯದ ಬಾಂಡ್‌ಗಳನ್ನು ಬಿಡುಗಡೆಗೊಳಿಸಲಾಗಿದೆ. 2018ರಲ್ಲಿ 1056 ಕೋ. ರೂ. ಮೌಲ್ಯದ ಬಾಂಡ್‌ಗಳು ಬಿಡುಗಡೆಯಾಗಿತ್ತು. ವರ್ಷದಿಂದ ವರ್ಷಕ್ಕೆ ಬಾಂಡ್‌ಗಳ ಪ್ರಮಾಣ ಹೆಚ್ಚುತ್ತಿರುವುದು ಅವುಗಳ ತಥಾಕಥಿತ ಪಾರದರ್ಶಕತೆಯ ಮುಂದೆ ಪ್ರಶ್ನಾರ್ಥಕ ಚಿಹ್ನೆಯನ್ನು ಇಟ್ಟಿದೆ. ಚುನಾವಣ ಬಾಂಡ್‌ಗೆ ಬಾರೀ ವಿರೋಧ ಇರುವುದರಿಂದ ಸರಿಯಾದ ಸಮಯದಲ್ಲೇ ಸುಪ್ರೀಂ ಕೋರ್ಟ್‌ ಮಧ್ಯ ಪ್ರವೇಶಿಸಿರುವುದು ಸ್ವಾಗತನೀಯ. ಇದೇ ವೇಳೆ ಪಕ್ಷಗಳ ಚುನಾವಣ ವೆಚ್ಚವನ್ನು ಸರಕಾರವೇ ಭರಿಸುವ ಪದ್ಧತಿಯನ್ನು ಜಾರಿಗೆ ತರುವ ಕುರಿತಾದ ಚರ್ಚೆಗೂ ಇದು ಸರಿಯಾದ ಸಂದರ್ಭ.

Advertisement
Advertisement

Udayavani is now on Telegram. Click here to join our channel and stay updated with the latest news.

Next