ಬೆಂಗಳೂರು: ನಷ್ಟದಲ್ಲಿರುವ ರಾಜ್ಯದ ನಾಲ್ಕು ಸಾರಿಗೆ ನಿಗಮಗಳನ್ನು ಲಾಭದಾಯಕವಾಗಿ ಮಾಡಲು ಕೆಎಸ್‌ಆರ್‌ಟಿಸಿ ವತಿಯಿಂದ ವೋಲ್ವೋ, ಊಬರ್ ಟ್ಯಾಕ್ಸಿ ಸೇವೆ ಮಾದರಿಯಲ್ಲಿ ಟ್ಯಾಕ್ಸಿ ಸೇವೆ ಆರಂಭಿಸಲು ಯೋಜನೆ ರೂಪಿಸಲಾಗುತ್ತಿದೆ.
ಹೊಸದಿಲ್ಲಿಯಲ್ಲಿ ಸುದ್ದಿ ಗಾರರ ಜತೆ ಮಾತನಾಡಿದ ಸಾರಿಗೆ ಸಚಿವರೂ ಆಗಿರುವ ಡಿಸಿಎಂ ಲಕ್ಷ್ಮಣ ಸವದಿ ಅವರು, ಸಹಕಾರಿ ತತ್ವದ ಆಧಾರದಲ್ಲಿ ಸಹಕಾರಿ ಇಲಾಖೆಯಲ್ಲಿ ಟ್ಯಾಕ್ಸಿ ಸರ್ವಿಸ್ ಪ್ರಾರಂಭಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು.
ನಗದು ವಹಿವಾಟು ಕಡಿಮೆ ಮಾಡಲು ಕೆಎಸ್‌ಆರ್‌ಟಿಸಿ, ಮೆಟ್ರೋ, ಬಿಎಂಟಿಸಿ ಸಾರಿಗೆಯಲ್ಲಿ ಪ್ರಯಾಣಿಸಲು ಅನುಕೂಲವಾಗುವಂತೆ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಮಾದರಿಯನ್ನು ರಾಜ್ಯದಲ್ಲೂ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಸಾರಿಗೆ ನಿಗಮದ ನಷ್ಟ ಭರಿಸಲು “ನಮ್ಮ ಕೊರಿಯರ್’ ಹೆಸರಿನಲ್ಲಿ ನೂತನ ಸೇವೆ ಆರಂಭಿಸಲಾಗುವುದು. ಈ ಕುರಿತು ಟೆಂಡರ್ ಪ್ರಕ್ರಿಯೆ ಮುಗಿದಿದೆ. ಇದರಿಂದ ವಾರ್ಷಿಕ 100 ಕೋ. ರೂ. ಆದಾಯ ನಿರೀಕ್ಷಿಸಲಾಗಿದೆ ಎಂದು ಹೇಳಿದರು.
ನಾಲ್ಕು ನಿಗಮಗಳಲ್ಲಿ ವಾರ್ಷಿಕ 800ರಿಂದ 900 ಕೋ. ರೂ.ಗಳಷ್ಟು ಬಿಡಿ ಉಪಕರಣಗಳ ಖರೀದಿ ನಡೆಯುತ್ತಿದೆ. ಇದರಲ್ಲಿ ಸೋರಿಕೆ ಕಂಡು ಬಂದಿರುವುದರಿಂದ ಕೇಂದ್ರೀಕೃತ ಲೆಕ್ಕ ನಿರ್ವಹಣೆ ಕ್ರಮ ಜಾರಿಗೆ ತರಲಾಗುತ್ತಿದೆ. ಇದಕ್ಕೆ ಇಸ್ರೋದಿಂದ ಸಾಫ್ಟ್ವೇರ್ ಪಡೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಹೈ ಸೆಕ್ಯುರಿಟಿ ರಿಜಿಸ್ಟರ್ಡ್ ಪ್ಲೇಟ್ಸ್ ವ್ಯವಸ್ಥೆಯನ್ನು ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಜಾರಿಗೆ ತರಲಾಗುತ್ತಿದೆ. ಸ್ಪೀಡ್ ಗವರ್ನರ್ ಅಳವಡಿಸುವ ಯೋಜನೆ ಮರು ಜಾರಿಗೆ ತರುವ ಮೂಲಕ ರಸ್ತೆ ಸುರಕ್ಷತೆ ಹೆಚ್ಚಿಸಲಾಗುತ್ತಿದೆ. ಒನ್ ನೇಷನ್ ಒನ್ ಟ್ಯಾಕ್ಸ್ ಕೇಂದ್ರ ಸರಕಾರದ ಯೋಜನೆ ರಾಜ್ಯದಲ್ಲಿ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ.