Advertisement

ಜೀವಿಯ ಜಂಘಾಬಲವೇ ಧೈರ್ಯ

11:39 PM Sep 23, 2022 | Team Udayavani |

ಧೈರ್ಯಂ ಸರ್ವತ್ರ ಸಾಧನಂ’ ಎಂಬಂತೆ ವಿನಯ, ವಿವೇಕ, ಜ್ಞಾನ, ವಿಧೇಯತೆ ಇತ್ಯಾದಿ ಸಾಧನಗಳಿಗಿಂತಲೂ ಧೈರ್ಯವು ನಮ್ಮೆಲ್ಲ ಸಾಧನೆಗೆ ಪ್ರಾಥಮಿಕ ಆಕರ. ಹೌದು, ಹುಟ್ಟಿನಿಂದ ನಾವು ಗಳಿಸಿರುವ ಬಹುಪಾಲು ಆಸ್ತಿಗಳಲ್ಲಿ ಧೈರ್ಯವೂ ಒಂದು. ಮನುಷ್ಯನ ಜನನದಿಂದ ಅವನ ಕೊನೆಯವರೆಗೂ ವಿವಿಧ ಮುಖಗಳಲ್ಲಿ ಧೈರ್ಯ ತನ್ನ ಕುರುಹುಗಳನ್ನು ತೋರಿಸುತ್ತದೆ. ಸಾಧನೆಯ ಮೂಲಮಂತ್ರವೇ ಧೈರ್ಯ. ಧೈರ್ಯವೊಂದಿದ್ದರೆ ಎಂತಹ ಸಂದಿಗ್ಧ ಪರಿಸ್ಥಿತಿಯನ್ನು ಮೆಟ್ಟಿನಿಂತು ನಮ್ಮ ಜೀವನವನ್ನು ಮೇಲುಸ್ತರಕ್ಕೆ ಕೊಂಡೊಯ್ಯಬಹುದು. ಸಾಧಕರ ಜೀವನದ ಏಳುಬೀಳುಗಳನ್ನು ಒಮ್ಮೆ ನೋಡಿದಾಗ ಅವರ ಧೈರ್ಯ ಮೆಚ್ಚುವಂಥದ್ದು. ಇಂದಿನ ತಂತ್ರಜ್ಞಾನ ಯುಗದಲ್ಲಿ ನಿತ್ಯ ನೂತನ ಆವಿಷ್ಕಾರಗಳು ಧೈರ್ಯದ ಬಿಂದುವಿನಿಂದ ಸಾಧನೆಯ ಸಿಂಧುವಾಗಿದೆ. ಧೈರ್ಯವೊಂದಿಲ್ಲದಿದ್ದರೆ ಬಹುಶಃ ಮನುಷ್ಯ ಇಷ್ಟೊಂದು ಸಾಧಿಸುತ್ತಿರಲಿಲ್ಲವೇನೋ!

Advertisement

ಹಾಗಾದರೆ ಧೈರ್ಯ ಮತ್ತು ಸಾಧನೆಗೆ ಏನಾದರೂ ಸಂಬಂಧವಿದೆಯಾ? ಖಂಡಿತ ಇದೆ. ಇದು ತಾಯಿ ಮಗುವಿನ ಸಂಬಂಧವನ್ನು ಪುಷ್ಟೀಕರಿಸುತ್ತದೆ. “ಧೈರ್ಯ’ ಎಂಬ ಮಗುವಿಗೆ ಚಿಕ್ಕಂದಿನಿಂದಲೇ ಸಲಹಿ ಪೋಷಿಸಿದಾಗ ಅದು ನಮ್ಮನ್ನು “ಸಾಧನೆ’ ಎಂಬ ಮಹಾತಾಯಿಯ ಸ್ಥಾನಕ್ಕೇರಿಸುತ್ತದೆ. ಧೈರ್ಯದಿಂದ ಒಂದು ಕೆಲಸಕ್ಕೆ ಕೈಹಾಕಿದರೆ ಅರ್ಧ ಕೆಲಸ ಆದಂತೆಯೇ. ಇನ್ನುಳಿದ ಕೆಲಸವು ನಮ್ಮ ಮಾನಸಿಕ ಮತ್ತು ದೈಹಿಕ ಪರಿಶ್ರಮದಿಂದ ಪೂರ್ಣಗೊಳ್ಳುತ್ತದೆ.

ಧೈರ್ಯ ಇಲ್ಲದಿದ್ದರೆ ಮನದಲ್ಲಿ ಭಯ ಆವರಿಸಿ ಖನ್ನತೆಗೆ ಒಳಗಾಗಿ ಮನೋರೋಗಿಯಾಗುವ ಸಂಭವ ಹೆಚ್ಚು. ಎಲ್ಲ ಸಮಸ್ಯೆಗಳನ್ನು ಧೈರ್ಯ, ಸ್ಥೈರ್ಯದಿಂದ ಎದುರಿಸಿದರೆ ಮಾತ್ರ ಸಾಧನೆ ಎಂಬ ಸಿಹಿಫ‌ಲ ನಮ್ಮದಾಗುತ್ತದೆ.
ಇಂಗ್ಲೆಂಡಿನ ಇತಿಹಾಸಕಾರನಾದ ಎಡ್ವರ್ಡ್‌ ಗಿಬ್ಬನ್‌ ಪ್ರಕಾರ “ಗಾಳಿ ಮತ್ತು ಸಮುದ್ರದ ಅಲೆಗಳು ಯಾವತ್ತೂ ಧೈರ್ಯವಂತ ನಾಯಕನ ಪರವಾಗಿರುತ್ತದೆ. ಧೀರ, ಶೂರನಾದವನು ಧೈರ್ಯದ ಅಡಿಪಾಯದ ಮೇಲೆ ಸಾಧನೆಯ ಮಹಾಸೌಧವನ್ನು ಕಟ್ಟುತ್ತಾನೆ. ಆದರೆ ಹೇಡಿಯು ಬದುಕಿನಲ್ಲಿ ಹಿಂದೆ ಸರಿಯುತ್ತಾನೆ’ ಎಂದಿ¨ªಾನೆ. ಬಹುಶಃ ಸಮಸ್ಯೆಗಳಿಲ್ಲದ ಪ್ರಪಂಚದ ಸೃಷ್ಟಿಯೇ ಇಲ್ಲ. ಅದನ್ನು ಧೈರ್ಯದಿಂದ ಎದುರಿಸಿದರೆ ತಾನೇ ಜೀವನದಲ್ಲಿ ಸಫ‌ಲತೆಯನ್ನು ಕಾಣಬಹುದು.

ಮಗು ಪ್ರತಿಯೊಂದು ಹೆಜ್ಜೆಯನ್ನು ಧೈರ್ಯದೊಂದಿಗೆ ಇಟ್ಟು ಮುನ್ನಡೆಯುತ್ತದೆ. ನಾವು ಅದನ್ನು ಮಾಡಬೇಡ, ಅಲ್ಲಿ ಹೋಗಬೇಡ ಎಂದು ಹಿಂದೆಳೆದರೆ ಧೈರ್ಯಗೆಡಿಸಿದರೆ ಮುಂದೆ ಆ ಮಗುವಿನ ಪರಿಸ್ಥಿತಿ ಹೇಗಾಗಬೇಡ ನೀವೇ ಯೋಚಿಸಿ. ದಿಟ್ಟತನದಿಂದ ಒಂದಡಿ ಮುಂದಿಟ್ಟಾಗ ಹಿಂದೆಳೆಯುವವರೇ ಹೆಚ್ಚು . ಬಾವಿಯಲ್ಲಿನ ಕಪ್ಪೆ ರೀತಿಯಾಗುವುದು ನಮ್ಮ ಜೀವನ. ನಿಂದಕರನ್ನು ನಮ್ಮ ಹಿತೈಷಿಗಳೆಂದು ಭಾವಿಸಿ ನಿಂದನೆಯಮಾತುಗಳನ್ನು ಧನಾತ್ಮಕವಾಗಿ ಯೋಚಿಸಿ ಧೈರ್ಯದಿಂದ ಮುಂದಡಿ ಇಟ್ಟರೆ ಯಶಸ್ಸು ಖಂಡಿತ ನಮ್ಮದೇ.

ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದಲ್ಲಿ ಧೈರ್ಯದ ಬಗ್ಗೆ ಉಲ್ಲೇಖಗಳಿವೆ. ರಾಮಾಯಣದಲ್ಲಿ ರಾಮನು ತನಗೊದಗಿದ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ ಜೀವನದಲ್ಲಿ ಸಾರ್ಥಕ್ಯವನ್ನು ಹೊಂದುವನು. ಮಹಾಭಾರತದಲ್ಲಿ ಪಾಂಡವರು ತಮ್ಮ ಎಲ್ಲ ಕಷ್ಟಗಳನ್ನು ವಿನಯ, ವಿವೇಕ ಮಿಗಿಲಾಗಿ ಧೈರ್ಯದಿಂದ ಎದುರಿಸಿ ಮುಂದಿನ ಜನಾಂಗಕ್ಕೆ ದಾರಿದೀಪವಾದರು. ಧರ್ಮವೆಂಬ ಸಾಗರದಲ್ಲಿ ಧೈರ್ಯದ ಹುಟ್ಟನ್ನು ಹಿಡಿದು ಈಜಿ ಕೊನೆಗೆ ಜಯವನ್ನು ಸಾಧಿಸಿದರು. ಎಲ್ಲ ರೀತಿಯ ಅಪಾಯಗಳಿಂದಲೂ ನಮ್ಮನ್ನು ಪಾರುಮಾಡುವುದು ಯಾವುದು ಎಂದು ಯುಧಿಷ್ಠಿರನನ್ನು ಯಕ್ಷ ಕೇಳಿದಾಗ “ಧೈರ್ಯ’ ಎಂಬುದು ಯುಧಿಷ್ಠಿರನ ಉತ್ತರವಾಗಿತ್ತು. Arise, awake and stop not until the goal is reached ‘ ಎಂಬ ವಿವೇಕಾನಂದರ ದಿವ್ಯ ಸಂದೇಶದಂತೆ ನಾವು ನಿರ್ಭೀತರಾಗೋಣ. ದಿಟ್ಟತನದಿಂದ ಅಡಿ ಇಡೋಣ. ಧೈರ್ಯ ಎಂಬ ದಿವ್ಯ ಔಷಧವು ನಮ್ಮ ಮನ ಮನಸ್ಸನ್ನು ಬೆಳಗಲಿ. ಆ ಮೂಲಕ ಸಾಧನೆ ಎಂಬ ಅಮೃತವನ್ನು ಹೀರೋಣ.

Advertisement

-ಗಾಯತ್ರಿ ನಾರಾಯಣ ಅಡಿಗ, ಬೈಂದೂರು

 

Advertisement

Udayavani is now on Telegram. Click here to join our channel and stay updated with the latest news.

Next