ಜೈಪುರ: ಕೋಣೆಯಲ್ಲಿನ ಹೀಟರ್ ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ದಂಪತಿ ಹಾಗೂ ಅವರ ಪುಟ್ಟ ಮಗು ಸೇರಿದಂತೆ ಒಂದೇ ಕುಟುಂಬದ ಮೂವರು ಸಜೀವ ದಹನವಾಗಿರುವ ದಾರುಣ ಘಟನೆ ರಾಜಸ್ಥಾನದ ಅಲ್ವಾರ್‌ನಲ್ಲಿ ನಡೆದಿದೆ.
ಎರಡು ದಿನಗಳ ಹಿಂದೆ ಮಧ್ಯರಾತ್ರಿ ಸುಮಾರು 1:30 ರ ವೇಳೆಗೆ ತಮ್ಮ ಮನೆಯ ಕೋಣೆಯಲ್ಲಿ ಮೂವರು ಮಲಗಿದ್ದರು. ಈ ವೇಳೆ ಹೀಟರ್ ನ ಅತಿಯಾದ ಶಾಖದಿಂದ ಹೀಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಕೆಲವೇ ನಿಮಿಷದಲ್ಲಿ ಬೆಂಕಿ ಮನೆಯ ಸದಸ್ಯರ ಬಟ್ಟೆಗೆ ತಗುಲಿದೆ. ಸಹಾಯಕ್ಕಾಗಿ ಕೂಗಿದ ವೇಳೆ ಅಕ್ಕಪಕ್ಕದವರು ರಕ್ಷಣೆಗೆ ಧಾವಿಸಿದ್ದಾರೆ.
ಆದರೆ ನೆರೆಹೊರೆಯವರು ಎಷ್ಟೇ ಪ್ರಯತ್ನಿಸಿದರೂ ದೀಪಕ್ ಯಾದವ್ ಮತ್ತು ಅವರ ಮಗಳು ಸ್ಥಳದಲ್ಲೇ ಸಜೀವದಹನವಾಗಿದ್ದಾರೆ.
ಕೊಠಡಿಯಲ್ಲಿದ್ದ ಯಾದವ್ ಅವರ ಪತ್ನಿ ಸಂಜು ಅವರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ತುರ್ತು ಚಿಕಿತ್ಸೆಗಾಗಿ ಅಲ್ವಾರ್‌ನ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಬಹುತೇಕ ಸುಟ್ಟಗಾಯಗಳಿಂದ ಗಂಭೀರ ಸ್ಥಿತಿಯಲ್ಲಿದ್ದ ಅವರು ಭಾನುವಾರ(ಡಿ.24 ರಂದು) ಮೃತಪಟ್ಟಿದ್ದಾರೆ ಎಂದು ವರಿ ತಿಳಿಸಿದೆ.
ಸದ್ಯ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.