ದೇವನಹಳ್ಳಿ: ಪ್ರತಿ ಗ್ರಾಮದಲ್ಲಿ ಕೃಷಿಕರು ಇದ್ದೇ ಇರುತ್ತಾರೆ. ಹಾಗೆಯೇ ಇಲ್ಲೊಂದು ಗ್ರಾಮದಲ್ಲಿನ ದಂಪತಿಗಳು ಇರುವ ಪಾಲಿಹೌಸ್‌ನಲ್ಲಿ ಕ್ಯಾಪ್ಸಿಕಂ ಬೆಳೆಯನ್ನಿಟ್ಟು ಉತ್ತಮ ಇಳುವರಿ ಪಡೆದು ಖುಷಿಯಾಗಿದ್ದಾರೆ.
ಬೆಂ.ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಯಂಬ್ರಹಳ್ಳಿ ಗ್ರಾಮದಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿದ ಮಾರೇಗೌಡ ಮತ್ತು ಪತ್ನಿ ಪುಷ್ಪ ಎಂಬುವವರು ಕಳೆದ 2010ರಿಂದ 8 ವರ್ಷ ಡಚ್‌ರೋಜ್ (ಅಲಂಕಾರಿಕ ಹೂ) ಬೆಳೆ ಬೆಳೆಯಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಒಂದು ಎಕರೆ ಪ್ರದೇಶದಲ್ಲಿ ಕ್ಯಾಪ್ಸಿಕಂ ಬೆಳೆ ಬೆಳೆಯಲಾಗುತ್ತಿದೆ. ಇಳುವರಿ ಸಹ ಮೊದಲ ಕ್ರಾಪ್ ನಲ್ಲಿ ಚೆನ್ನಾಗಿ ಬಂದಿದೆ. ರಿಜ್ವನ್ ಕ್ವಾಲಿಟಿಯ ಗಿಡಗಳನ್ನು ಬೆಳೆಯಲಾಗುತ್ತಿದೆ. ಹಳದಿ ಮತ್ತು ಕೆಂಪು ಬೆಳೆಗೆ ಹೆಚ್ಚು ಗಮನಹರಿಸಲಾಗುತ್ತಿದೆ. ಗುಣಮಟ್ಟದ ಇಳುವರಿ ಪಡೆಯುವುದರ ಮೂಲಕ ಹೆಚ್ಚಿನ ಲಾಭವನ್ನು ಪಡೆಯುತ್ತಿದ್ದಾರೆ.
ದಂಪತಿಗೆ ಕೃಷಿ ಬಗ್ಗೆ ಒಲವು, ಆಸಕ್ತಿ: ದಂಪತಿಗೆ ಕೃಷಿ ಬಗ್ಗೆ ಒಲವು ಮತ್ತು ಆಸಕ್ತಿಯಿದೆ. ಹೀಗಾಗಿ, ಇತರರಿಗೆ ಮಾದರಿಯಾಗುವುದರ ಮೂಲಕ ಬೆಳೆಯನ್ನು ಉತ್ತಮ ವಾಗಿ ಬೆಳೆದು ಮಾರುಕಟ್ಟೆಗಳಿಗೆ ಕಳುಹಿಸಿ ಕೊಡುವ ಕಾಯಕವನ್ನು ಇತರೆ ಕೆಲಸಗಳಲ್ಲಿ ಒಂದಾಗಿ ಮಾಡುತ್ತಿದ್ದಾರೆ. ಇರುವ ಒಂದು ಎಕರೆ ಪ್ರದೇಶದ ಪಾಲಿಹೌಸಿನಲ್ಲಿ ಹೈನುಗಾರಿಕೆ ಜೊತೆ ಕೃಷಿಯಲ್ಲಿ ತೊಡಗಿಕೊಂಡು ಆರ್ಥಿಕವಾಗಿ ಸದೃಢಗೊಳ್ಳುತ್ತಿರು ವುದು ಇತರರಿಗೆ ಮಾದರಿ ಎನಿಸಿಕೊಂಡಿದ್ದಾರೆ.
ಬೆಳೆಗೆ ನುಸಿ ರೋಗ ಕಂಟಕ: ಟ್ರಿಪ್ಸ್ ರೋಗ ಅಂದರೆ ನುಸಿ ರೋಗ ಎಂದರ್ಥ. ಇದರಿಂದ ಕ್ಯಾಪ್ಸಿಕಂ ಬೆಳೆಯ ಎಲೆಗಳಿಗೆ ರೋಗ ತಗುಲಿ ಎಲೆಗಳೆಲ್ಲವೂ ಮುದುಡಿಕೊಂಡು ಗಿಡ ನಾಶವಾಗುತ್ತದೆ. ಇದರಿಂದ ಹಲವು ಕ್ಯಾಪ್ಸಿಕಂ ಬೆಳೆಗಾರರು ಕಂಗಾಲಾಗಿದ್ದಾರೆ. ಸಕಾಲದಲ್ಲಿ ಔಷಧ ಒದಗಿಸಿದರೂ ರೋಗ ನಿಯಂತ್ರಣಕ್ಕೆ ಬರುವುದೇ ಕಷ್ಟವಾಗುತ್ತದೆ. ಇವುಗಳನ್ನು ಬಹಳ ಸೂಕ್ಷ್ಮವಾಗಿ ಗಮನಹರಿಸಿಕೊಂಡು, ಗಿಡಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳ ಬೇಕಾಗುತ್ತದೆ. ಟ್ರಿಪ್ಸ್ ಕಾಯಿಲೆಗೆ ಮುಂಜಾಗೃತವಾಗಿ ಏನೇ ಕ್ರಮ ಮತ್ತು ಔಷಧಿಗಳನ್ನು ಸಿಂಪಡಿಸಿದರೂ, ಸಹ ರೋಗವನ್ನು ಬುಡಸಮೇತ ತಡೆಗಟ್ಟಲು ರೈತರು ಸಾಕಷ್ಟು ಶ್ರಮಿಸುತ್ತಿದ್ದಾರೆ.
ಅದರಲ್ಲೂ ಸಹ ಗಿಡಕ್ಕೆ ಬೇಕಾದಷ್ಟು ಪೋಷಕಾಂಶಗಳನ್ನು ನೀಡಿ, ಭೂಮಿಯ ತೇವಾಂಶ ಕಾಪಾಡಿಕೊಂಡು, ಗಿಡದಲ್ಲಿ ಹೂ, ಕಾಯಿಯಾದ 3 ತಿಂಗಳ ನಂತರ ಮೊದಲ ಬಾರಿಗೆ ಕ್ಯಾಪ್ಸಿಕಂ ಬೆಳೆ ಕೈ ಸೇರುತ್ತದೆ. ಮಾರುಕಟ್ಟೆಯಲ್ಲಿ ಪ್ರಸ್ತುತ ಕಲರ್ ಕ್ಯಾಪ್ಸಿಕಂ ಕೆ.ಜಿಗೆ 100 ರೂ., ಇದ್ದರೆ, ಹಸಿರು ಕ್ಯಾಪ್ಸಿಕಂ ಕೆ.ಜಿ 20 ರೂ. ಮಾರಾಟವಾಗುತ್ತಿದೆ. 100 ರೂ. ಬೆಲೆ ನಿರಂತರವಾಗಿದ್ದರೆ, ರೈತರು ಹೆಚ್ಚಿನ ಲಾಭವನ್ನು ಕಂಡುಕೊಳ್ಳಬಹುದು. ಬೆಲೆ ಇಳಿಮುಖವಾದರೆ, ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ದಿವಾಳಿಯನ್ನಾಗಿಸುತ್ತದೆ ಎಂದು ದಂಪತಿ ಅಭಿಪ್ರಾಯಪಟ್ಟಿದ್ದಾರೆ. ಈ ಮೊದಲು ಡಚ್‌ರೋಜ್ ಬೆಳೆಯಲಾಗುತ್ತಿತ್ತು. ಮೊದಲ ಬಾರಿಗೆ ಕ್ಯಾಪ್ಸಿಕಂ ಬೆಳೆ ಬೆಳೆಯಲಾಗುತ್ತಿದೆ. ಇರುವ 1 ಎಕರೆ ಪಾಲಿಹೌಸ್‌ನಲ್ಲಿ 3 ಲಕ್ಷ ರೂ. ಬಂಡ ವಾಳ ಹೂಡಿ ಕ್ಯಾಪ್ಸಿಕಂ ಬೆಳೆ ಇಡಲಾಗಿದೆ. ಈಗಾಗಲೇ 10 ಟನ್‌ನಷ್ಟು ಗುಣಮಟ್ಟದ ಕ್ಯಾಪ್ಸಿಕಂ ಪಡೆಯಲಾಗಿದೆ.
ಇನ್ನೂ 20 ಟನ್‌ನಷ್ಟು ಕಾಯಿ ಪಡೆಯಲು 3-4 ತಿಂಗಳು ಬೇಕು. ಹನಿ ನೀರಾವರಿ ಪದ್ಧತಿ ಮೂಲಕ ಗಿಡದ ಬುಡಕ್ಕೆ ಪ್ರತಿ ದಿನ ಅರ್ಧ ಗಂಟೆ ನೀರು ಹಾಯಿಸಲಾಗುತ್ತಿದೆ. ಕಾಯಿ ಗುಣಮಟ್ಟದಿಂದ ಕೂಡಿರುವುದರಿಂದ ಚಿಕ್ಕಬಳ್ಳಾಪುರ, ತಮಿಳುನಾಡಿನ ಖರೀದಿದಾ ರರು ತೋಟಕ್ಕೆ ಬಂದು ಖರೀದಿಸುತ್ತಿದ್ದಾರೆ.
– ಮಾರೇಗೌಡ, ಎಂಪಿಸಿಎಸ್ ಅಧ್ಯಕ್ಷ, ಯಂಬ್ರಹಳ್ಳಿ
ಮನೆಗೆಲಸದ ಜೊತೆಯಲ್ಲಿ ಕೃಷಿಯಲ್ಲಿ ತೊಡಗಿಕೊಂಡು ಕ್ಯಾಪ್ಸಿಕಂ ಬೆಳೆಯನ್ನು ನೋಡಿಕೊಂಡು ಬರಲಾಗಿದೆ. ಬೆಳೆಯಲ್ಲಿ ರೋಗ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಔಷಧಿ ಮತ್ತು ಬೇಸಿಗೆಗೆ ಅನುಗುಣವಾಗಿ ನೀರು ನೀಡಲಾಗುತ್ತಿದೆ. ಗಿಡಗಳ ಹಾರೈಕೆಗೆ ತಕ್ಕಂತೆ ಇಳುವರಿ ಪಡೆಯಲಾಗುತ್ತಿದೆ.
– ಪುಷ್ಪ, ಗೃಹಿಣಿ, ಯಂಬ್ರಹಳ್ಳಿ