ಹುಬ್ಬಳ್ಳಿ: ಶಿಕ್ಷಕರು ಅಕ್ಷರಜ್ಞಾನ ನೀಡುವುದನ್ನಷ್ಟೆ ಮಾಡದೆ ಸಮಾಜದ ಓರೆ-ಕೋರೆಗಳನ್ನು ತಿದ್ದುವವರಾಗಿದ್ದಾರೆ ಎಂದು ಚಿಕ್ಕೋಡಿಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಜಿ. ದಾಸರ ಹೇಳಿದರು. ಗೋಕುಲ ರಸ್ತೆ ಬಸವೇಶ್ವರ ನಗರ ಬಳಿಯ ಡಾ| ಕೆ.ಎಸ್. ಶರ್ಮಾ ಶೈಕ್ಷಣಿಕ ಸಂಕೀರ್ಣ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿಕ್ಷಣ ಜ್ಞಾನ ಮಾಸಪತ್ರಿಕೆಯ 16ನೇ ವಾರ್ಷಿಕೋತ್ಸವ, ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರ ಜ್ಞಾನ ಹೆಚ್ಚಿದಂತೆ ದೇಶ ಅಭಿವೃದ್ಧಿಯಾಗುತ್ತದೆ. ಶಿಕ್ಷಕರು ವೃತ್ತಿ ಮತ್ತು ಬೋಧಿಸುವ ವಿಷಯ ಪ್ರೀತಿಸಬೇಕು. ಮೂರು ಲೋಕದ ಜ್ಞಾನ ನೀಡುವುದೆ ಶಿಕ್ಷಣ ಎಂದರು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಶಿಕ್ಷಕರು ಹೊಸ ಹೊಸ ವ್ಯವಸ್ಥೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.
ಕವಿವಿ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ| ಆರ್ .ಟಿ. ಜಂತ್ಲಿ ಮಾತನಾಡಿ, ಉನ್ನತ ಶಿಕ್ಷಣದಲ್ಲಿ ಸವಾಲುಗಳು ಹೆಚ್ಚಾಗಿವೆ. ಬಡವರು, ಜನಸಾಮಾನ್ಯರು ಉನ್ನತ ಶಿಕ್ಷಣ ಪಡೆಯುವುದು ಗಗನ ಕುಸುಮವಾಗುತ್ತಿದೆ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆತಾಗ ಮಾತ್ರ ದೇಶ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ ಎಂದು ಹೇಳಿದರು.
ಧಾರವಾಡದ ಸಾಶಿಇ ನಿವೃತ್ತ ಉಪನಿರ್ದೇಶಕ ಶಿವಶಂಕರ ಹಿರೇಮಠ ಮಾತನಾಡಿ, ಭ್ರಷ್ಟಾಚಾರ, ಜಾತೀಯತೆ ಹೋಗಲಾಡಿಸುವ ನಿಟ್ಟಿನಲ್ಲಿ ಗಮನ ಹರಿಸುತ್ತಿಲ್ಲ. ನಮ್ಮ ಶಿಕ್ಷಣವು ಪ್ರಾಥಮಿಕ ಹಂತದಲ್ಲೆ ವಿಫಲವಾಗಿದೆ. ಸರಕಾರ ಮತ್ತು ಶಿಕ್ಷಣ ಸಂಸ್ಥೆಗಳಿಂದ ಶಿಕ್ಷಕರನ್ನು ನೈತಿಕತೆ ಮೌಲ್ಯದ ಮೇಲೆ ನಿರ್ಮಿಸುವ ಕಾರ್ಯ ಆಗುತ್ತಿಲ್ಲವೆಂದರು.
ನಿವೃತ್ತ ಅಧಿಕಾರಿ ವೆಂಕಟೇಶ ಮಾಚಕನೂರು ಮಾತನಾಡಿ, ಶಿಕ್ಷಣ ಗುಣಮಟ್ಟ ಕುರಿತು ಯಾರೂ ಪ್ರಾಮಾಣಿಕ ಕೆಲಸ ಮಾಡುತ್ತಿಲ್ಲ. ಶಿಕ್ಷಣ ಮತ್ತು ಆರೋಗ್ಯ ಹಾಳಾದರೆ ಸಮಾಜವೇ ಹಾಳಾದಂತೆ. ಉನ್ನತ ಶಿಕ್ಷಣ ಸಚಿವ ಸ್ಥಾನ ಬೇಡವೆಂದವರಿಗೇ ಸರಕಾರ ಆ ಸ್ಥಾನ ವಹಿಸುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಎಷ್ಟು ಮಹತ್ವ ಕೊಡುತ್ತಿದೆ ಎಂಬುದು ಗೊತ್ತಾಗುತ್ತದೆ ಎಂದರು.
ಕಾರ್ಮಿಕ ಮುಖಂಡ ಡಾ| ಕೆ.ಎಸ್. ಶರ್ಮಾ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಕೀಲ ಎಂ. ಶಿವಲಿಂಗಪ್ಪ, ಎಚ್. ರಾಮಚಂದ್ರಪ್ಪ, ಬಿ.ಸಿ. ಬಸವರಾಜಪ್ಪ, ಎಸ್. ನಿರಂಜನಮೂರ್ತಿ, ಎಸ್. ದೊಡ್ಡಮಲ್ಲಪ್ಪ, ಸುಮಂಗಲಾ ಕುಚಿನಾಡ ಮೊದಲಾದವರಿದ್ದರು.
ಗಣ್ಯರು ಶಿಕ್ಷಣ ಜ್ಞಾನ ದಿನದರ್ಶಿ ಹಾಗೂ ಪತ್ರಿಕೆ, ಜನರಕ್ಷಕ ಮಾಸಪತ್ರಿಕೆಯ ಪ್ರಥಮ ವಾರ್ಷಿಕೋತ್ಸವ ಸಂಚಿಕೆ ಲೋಕಾರ್ಪಣೆ ಮಾಡಿದರು. ಈರಣ್ಣ ಅಗಳಗಟ್ಟಿ ರಚಿತ ‘ಹಂಬಲ’ ಕವನ ಸಂಕಲನ ಬಿಡುಗಡೆಗೊಳಿಸಲಾಯಿತು. ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎ.ಎನ್. ಶೀಲಾ ಸ್ವಾಗತಿಸಿದರು. ಶಿಕ್ಷಣ ಜ್ಞಾನ ಪತ್ರಿಕೆ ಸಂಪಾದಕ ಎಸ್.ವಿ. ನಾಗರಾಜ ಪ್ರಾಸ್ತಾವಿಕ ಮಾತನಾಡಿದರು. ವಿನೋದಾ ಪಿ. ಭಟ್ಟ, ಎಂ. ವನಿತಾ ನಿರೂಪಿಸಿದರು. ಡಿ. ಹನುಮಂತಪ್ಪ ವಂದಿಸಿದರು.