ಕನಕಪುರ: ನರೇಂದ್ರ ಮೋದಿ ದೇಶವನ್ನೇ ತಮ್ಮ ಕುಟುಂಬವೆಂದು ಭಾವಿಸಿ, ದೇಶಕ್ಕಾಗಿ ದುಡಿಯುತ್ತಿದ್ದಾರೆ. ಪರಸ್ಪರ ವಿರೋಧಿಗಳಾಗಿದ್ದ ಜೆಡಿಎಸ್ -ಕಾಂಗ್ರೆಸ್ ದೇಶಕ್ಕಾಗಿ ಮೈತ್ರಿ ಮಾಡಿಕೊಂಡಿಲ್ಲ. ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಬೆಂ. ಗ್ರಾ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶ್ವತ್ಥ ನಾರಾಯಣಗೌಡ ದೂರಿದರು.
ತಾಲೂಕಿನ ಹುಣಸನಹಳ್ಳಿ, ಹೊಸದುರ್ಗ, ಕೋಡಿಹಳ್ಳಿ, ದೊಡ್ಡಾಲಹಳ್ಳಿ, ಸಾತನೂರು ಗ್ರಾಮಗಳಲ್ಲಿ ನಡೆಸಿದ
ಚುನಾವಣಾ ಪ್ರಚಾರದ ರೋಡ್ ಶೋನಲ್ಲಿ ಮಾತನಾಡಿದ ಅವರು, ದೇಶವನ್ನು ಉಳಿಸುವುದಕ್ಕಾಗಿಯೇ ನಾವು ಮೋದಿ
ಹೆಸರಿನಲ್ಲಿ ಮತ ಕೇಳುತ್ತಿದ್ದೇವೆ. ಆದರೆ, ಜೆಡಿಎಸ್, ಕಾಂಗ್ರೆಸ್ ಅಧಿಕಾರಕ್ಕಾಗಿ, ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಮತ ಕೇಳುತ್ತಿದ್ದಾರೆ.
ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡಿದ್ದು, ಮೈತ್ರಿ ಸರ್ಕಾರ ಇರಬೇಕಾದರೆ ಮೈತ್ರಿ ಅಭ್ಯರ್ಥಿಗೆ ಮತನೀಡಲೇಬೇಕು ಎಂದು ನೇರವಾಗಿ ಮತದಾರರನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಮೈತ್ರಿ ಅಭ್ಯರ್ಥಿಗಳು ಅಭಿವೃದ್ಧಿ ಹೆಸರಿನಲ್ಲಿ ಮತಯಾಚನೆ ಮಾಡುತ್ತಿಲ್ಲ, ಧರ್ಮಗಳ ಹೆಸರಿನಲ್ಲಿ, ಧರ್ಮದ ವಿರುದ್ಧ ಎತ್ತಿಕಟ್ಟುವ ಮೂಲಕ ಮತ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಜನತೆ ಮೈತ್ರಿ ಅಭ್ಯರ್ಥಿ ಮಾತು ಕೇಳಲ್ಲ: ಕ್ಷೇತ್ರಗಳಲ್ಲಿ ಜನತೆ ಇವರ ಮಾತು ಕೇಳುವ ಸ್ಥಿತಿಯಲ್ಲಿಲ್ಲ. ಪ್ರಬುದ್ಧರಾಗಿರುವ
ಮತದಾರರು ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡಿರುವುದನ್ನು ಎಲ್ಲಾ ಕಡೆ ಪ್ರಶ್ನಿಸುತ್ತಿದ್ದಾರೆ. ಎಲ್ಲಾ ಕಡೆ ದೇಶಕ್ಕಾಗಿ ಬಿಜೆಪಿಗೆ ಮತ ಕೊಡುವುದಾಗಿ ಹೇಳುತ್ತಿದ್ದಾರೆ. ಆದ್ದರಿಂದ ಹತಾಶರಾಗಿ ರುವ ಜೆಡಿಎಸ್, ಕಾಂಗ್ರೆಸ್ ಜನರನ್ನು ಭಾವನಾತ್ಮಕವಾಗಿ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಮತ ನೀಡಲು ಜನತೆ ತೀರ್ಮಾನಿಸಿದ್ದು, ಚುನಾವಣಾ ಪ್ರಚಾರದ ವೇಳೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಎಷ್ಟೋ ಜನತೆ ಹೊರಗಡೆ ಬರಲಾಗದೆ ಮನೆಯಲ್ಲೇ ಉಳಿದಿದ್ದು, ಮತದಾನದ ವೇಳೆ ಬಿಜೆಪಿಗೆ ಮತ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಅಭಿವೃದ್ಧಿಗೆ ಕೇಂದ್ರದಿಂದ ಅನುದಾನ: ಬಿಜೆಪಿ ಜಿಲ್ಲಾಧ್ಯಕ್ಷ ಎಂ.ರುದ್ರೇಶ್ ಮಾತನಾಡಿ, ಡಿ.ಕೆ.ಸುರೇಶ್ ತಾಲೂಕಿನಲ್ಲಿ
ಮಾಡಿರುವ ಅಭಿವೃದ್ಧಿಯಲ್ಲಿ ಶೇ.75ರಷ್ಟು ಕೇಂದ್ರ ಸರ್ಕಾರದ ಅನುದಾನವಾಗಿದೆ.
ಕೇಂದ್ರ ಸರ್ಕಾರದಿಂದ ಏನು ಅನುಕೂಲವಾಗಿದೆ, ಅನುದಾನ ಬಂದಿದೆ ಎಂಬುದನ್ನು ಜನತೆಗೆ ಅವರು ತಿಳಿಸುತ್ತಿಲ್ಲ. ಮನಮೋಹನ್ ಸಿಂಗ್ ಸರ್ಕಾರದಲ್ಲಿ ತಾಲೂಕಿಗೆ ಎಷ್ಟು ಅನುದಾನ ಬಂದಿತ್ತು, ಮೋದಿ ಆಡಳಿತದಲ್ಲಿ ಎಷ್ಟು ಅನುದಾನ
ಸಿಕ್ಕಿದೆ ಎಂಬುದನ್ನು ತಾಲೂಕಿನ ಜನತೆಗೆ ಅವರು ತಿಳಿಸಬೇಕು ಎಂದರು.
ಮೈತ್ರಿ ಸರ್ಕಾರದ ವಿರೋಧಿ ಅಲೆ: ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗನ್ನಾಥ್ .ಎಸ್ ಮಾತನಾಡಿ, ತಾಲೂಕಿನಲ್ಲಿ ಮೈತ್ರಿ ಸರ್ಕಾರದ ವಿರೋಧಿ ಅಲೆಯಿದೆ. ನರೇಂದ್ರ ಮೋದಿ ಪರವಾದ ಅಲೆಯಿದ್ದು, ಈ ಬಾರಿ ಬಿಜೆಪಿಗೆ ಹೆಚ್ಚಿನ ಮತಗಳು
ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳೀಧರ್, ಹಿಂದುಳಿದ ವಿಭಾಗದ ಜಿಲ್ಲಾ ಅಧ್ಯಕ್ಷ ನಾಗರಾಜು, ತಾಲೂಕು ಗ್ರಾಮಾಂತರ ಅಧ್ಯಕ್ಷ ಶಿವರಾಮ್, ನಗರ ಘಟಕದ ಅಧ್ಯಕ್ಷ ನಾಗಾನಂದ, ಮುಖಂಡರಾದ ಅಚ್ಚಲು ಶಿವರಾಜು, ಗುರುಗೌಡ, ಪ್ರದೀಪ, ಮುನಿಲಿಂಗೇಗೌಡ, ಮಂಜು, ಸ್ವಾಮಿ, ಮದನ್‌ಮೋಹನ್, ಡಿ.ಶ್ರೀನಿವಾಸ್, ರಾಜೇಶ್ ಹಾಜರಿದ್ದರು.