Advertisement

MUDA; 50:50 ಹಂಚಿಕೆ ರದ್ದು ತೀರ್ಮಾನ; ನ್ಯಾ| ದೇಸಾಯಿ ಆಯೋಗದ ವರದಿ ಬಳಿಕ ನಿವೇಶನ ವಾಪಸ್‌

12:40 AM Nov 08, 2024 | Team Udayavani |

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಸಾಮಾನ್ಯ ಸಭೆ ಗುರುವಾರ ಮುಡಾ ಅಧ್ಯಕ್ಷ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ನೇತೃತ್ವದಲ್ಲಿ ನಡೆದಿದ್ದು, ನ್ಯಾ| ಪಿ.ಎನ್‌. ದೇಸಾಯಿ ಆಯೋಗದ ವರದಿಯ ಆಧಾರದ ಮೇಲೆ 50:50 ಅನುಪಾತದಲ್ಲಿ ಹಂಚಿಕೆಯಾಗಿರುವ ನಿವೇಶನಗಳ ಮುಟ್ಟುಗೋಲಿಗೆ ಸಭೆಯಲ್ಲಿ ನಿರ್ಣಯಿಸಲಾಗಿದೆ.

Advertisement

ಮುಡಾ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ರೂ. ಮೌಲ್ಯದ ಹಗರಣ ಬೆಳಕಿಗೆ ಬಂದ ಅನಂತರ ನಡೆದ ಮೊದಲ ಸಭೆ ಇದಾಗಿದ್ದು, ಸಭೆಯಲ್ಲಿ 172 ವಿಷಯಗಳನ್ನು ಮಂಡಿಸಲಾಯಿತು. ಇದರಲ್ಲಿ ಸಮರ್ಪಕ ದಾಖಲೆ ಹೊಂದಿರುವ 80ಕ್ಕೂ ಹೆಚ್ಚು ಬಿಲ್ಡರ್ಸ್‌ ಹಾಗೂ ಡೆವಲಪರ್ಸ್‌ಗಳ ಟೌನ್‌ ಪ್ಲ್ಯಾನಿಂಗ್‌ಗೆ ಮತ್ತು ನಕ್ಷೆಗೆ ಅನುಮೋದನೆ ನೀಡುವ ಜತೆಗೆ 80 ನಿವೇಶನಗಳನ್ನು ಫ‌ಲಾನುಭವಿಗಳಿಗೆ ಹಂಚಿಕೆ ಮಾಡಲು ತೀರ್ಮಾನಿಸಲಾಯಿತು.

50:50ರ ಅನುಪಾತದಲ್ಲಿ ಹಂಚಿಕೆಯಾಗಿರುವ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಂಡು, ನಿಯಮಾನುಸಾರ ನಿವೇಶನ ಪಡೆದವರಿಗಷ್ಟೆ ಹಂಚಿಕೆ ಮಾಡಲು ಸಭೆಯಲ್ಲಿ ಚರ್ಚೆ ನಡೆಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಸದ್ಯ ರಾಜ್ಯ ಸರಕಾರ ನೇಮಕ ಮಾಡಿರುವ ದೇಸಾಯಿ ಆಯೋಗವು ಮುಡಾ ನಿವೇಶನಗಳ ಹಂಚಿಕೆಯ ಅಕ್ರಮದ ಬಗ್ಗೆ ತನಿಖೆ ನಡೆಸುತ್ತಿದ್ದು, ತನಿಖೆ ವರದಿ ಬಂದ ಬಳಿಕ 50:50ರ ಅನುಪಾತದಲ್ಲಿ ಹಂಚಿಕೆಯಾಗಿರುವ ನಿವೇಶನ ಜಪ್ತಿ ಮಾಡಬಹುದು ಎಂದರು.

ಇದಕ್ಕೆ ಸಭೆಯಲ್ಲಿದ್ದ ಎಲ್ಲರೂ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ್ದು, ಜಪ್ತಿಯಾದ ಬಳಿಕ ಕಾನೂನು ಬದ್ಧವಾಗಿದ್ದವರಿಗೆ ನಿವೇಶನ ವಾಪಸ್‌ ನೀಡಲು ತೀರ್ಮಾನಿಸಲಾಯಿತು. ಈ ಸಂಬಂಧ ಕಳೆದ ಸಭೆಯಲ್ಲೂ ಚರ್ಚೆ ಮಾಡಲಾಗಿತ್ತು. ಆದರೆ ದಾಖಲೀಕರಣ ಆಗಿರಲಿಲ್ಲ. ಹೀಗಾಗಿ ಹಿಂದಿನ ಸಭೆಯ ಅಜೆಂಡಾವನ್ನು ದಾಖಲೀಕರಣ ಮಾಡದ ಅಧಿಕಾರಿಗಳ ಮೇಲೆ ಎಫ್ಐಆರ್‌ ದಾಖಲು ಮಾಡುವಂತೆ ಸರಕಾರಕ್ಕೆ ಶಿಸ್ತು ಕ್ರಮಕ್ಕಾಗಿ ಪತ್ರ ಬರೆಯಲು ಸಭೆಯಲ್ಲಿ ನಿರ್ಧರಿಸಲಾಗಿದೆ.
50:50ರ ಅನುಪಾತದಲ್ಲಿ ಹಂಚಿಕೆಯಾಗಿರುವ ಎಲ್ಲ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಮುಡಾ ತೀರ್ಮಾನಿಸಿರುವುದರಿಂದ 50:50ರ ಅನುಪಾತದಲ್ಲಿ ನಿವೇಶನ ಪಡೆದವರಿಗೆ ಆತಂಕ ಆರಂಭವಾಗಿದೆ.

10 ತಿಂಗಳ ಬಳಿಕ ಸಭೆ
ಮುಡಾಗೆ ಕೆ. ಮರಿಗೌಡ ಅಧ್ಯಕ್ಷರಾದ ಬಳಿಕ 2 ಸಭೆಗಳಷ್ಟೇ ನಡೆದಿದ್ದವು. ಮುಡಾ ಹಗರಣ ಬಯಲಾದ ಬಳಿಕ ಸಭೆ ನಡೆದಿರಲಿಲ್ಲ.

Advertisement

ಮುಡಾ ಸಭೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಹಲವಾರು ವಿಷಯಗಳ ಬಗ್ಗೆ ಚರ್ಚಿಸಿ ತೀರ್ಮಾನ ಮಾಡಿದ್ದೇವೆ. 50:50 ಅನುಪಾತಕ್ಕೆ ಸಂಬಂಧಿಸಿ ಚರ್ಚೆ ನಡೆಸಿದ್ದೇವೆ. ನ್ಯಾ| ದೇಸಾಯಿ ಆಯೋಗದ ವರದಿ ಬಂದ ಮೇಲೆ ಮುಂದಿನ ಪ್ರಕ್ರಿಯೆ ಆರಂಭಿಸುತ್ತೇವೆ.
– ರಘುನಂದನ್‌, ಮುಡಾ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next