ಬೆಂಗಳೂರು: ಕೋಮುವಾದಿಗಳನ್ನು ವಿರೋಧಿಸುವಾಗ ಪಕ್ಷಪಾತ ಮಾಡಬಾರದು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಶನಿವಾರ ಭೇಟಿ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ನಾನು ಇಸ್ಲಾಂ ಮೂಲಭೂತವಾದಿಗಳನ್ನು ವಿರೋಧಿಸಿದಂತೆ ಹಿಂದೂ ಮೂಲಭೂತವಾದಿಗಳನ್ನೂ ವಿರೋಧಿಸಿದ್ದೇನೆ. ಈ ವಿಚಾರದಲ್ಲಿ ಯಾವತ್ತೂ ಜಾತಿ, ಧರ್ಮ ನೊಡಿಲ್ಲ. ಆರೋಗ್ಯಕರವಾದ ನಿಲುವು ಹೊಂದಿರುವ ನನ್ನನ್ನು ಕೆಲವು ಮೂಲಭೂತವಾದಿಗಳು ಹಿಟ್ ಲಿಸ್ಟ್‌ನಲ್ಲಿ ಇಟ್ಟಿದ್ದಾರೆಂದರೆ ದೇಶ ಯಾವ ಪರಿಸ್ಥಿತಿಯಲ್ಲಿದೆ ಎನ್ನುವುದು ಗೊತ್ತಾಗುತ್ತದೆ ಎಂದರು.
ನನ್ನ ಹೆಸರು ಕೋಮುವಾದಿಗಳ ಹಿಟ್ ಲಿಸ್ಟ್‌ನಲ್ಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸರ್ಕಾರವೂ ಸೂಕ್ತ ರಕ್ಷಣೆ ನೀಡುತ್ತಿದೆ. ಈಗಾಗಲೇ ನಮ್ಮ ಮನೆಯ ಬಳಿ ಗನ್ ಮ್ಯಾನ್ ಇದ್ದಾರೆ. ಇದನ್ನು ನೋಡಿದರೆ ದೇಶ ಅತ್ಯಂತ ಸೂಕ್ಷ್ಮ ಪರಿಸ್ಥಿತಿಯತ್ತ ಸಾಗುತ್ತಿದೆ ಎನ್ನುವುದು ತಿಳಿಯುತ್ತದೆ ಎಂದು ಹೇಳಿದರು.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ತನಿಖೆ ತಾರ್ಕಿಕ ಅಂತ್ಯ ಕಾಣುತ್ತಿದೆ. ಅದಕ್ಕಾಗಿ ಪರಮೇಶ್ವರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದೇನೆ. ಅದೇ ರೀತಿ ಸಂಶೋಧಕ ಎಂ.ಎಂ.ಕಲಬುರಗಿ ಹಂತಕರನ್ನೂ ಪತ್ತೆ ಹಚ್ಚುವಂತೆ ಮನವಿ ಮಾಡಿದ್ದೇನೆ. ಪರಮೇಶ್ವರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಗೌರಿ ಲಂಕೇಶ್ ಅವರನ್ನು ಯಾರು ಹತ್ಯೆ ಮಾಡಿದ್ದಾರೆ ಎನ್ನುವುದು ಪ್ರಮುಖವಾಗಿ ಹೊರಬೀಳಬೇಕು. ಈ ನಿಟ್ಟಿನಲ್ಲಿ ಜಾತಿ, ಧರ್ಮವು ತನಿಖೆಗೆ ಅಡ್ಡಿಯಾಗಬಾರದು. ಆರೋಪಿ ಹಿಂದೂ ಅಥವಾ ಮುಸ್ಲಿಂ ಆಗಿರಬಹುದು, ತನಿಖೆ ಸ್ವತಂತ್ರವಾಗಿ ನಡೆಯಬೇಕು. ತನಿಖೆ ಹಂತದಲ್ಲಿ ಯಾರೂ ತಲೆ ಹಾಕಬಾರದು ಎಂದು ಹೇಳಿದರು.
ಇದೇ ವೇಳೆ ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರು ಇಡುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಇತ್ತೀಚೆಗೆ ವಿವಾದವಲ್ಲದ ವಿವಾದಗಳು ಹುಟ್ಟುತ್ತಿವೆ. ಇತ್ತೀಚೆಗೆ ಪತ್ನಿ ನಿಧನರಾಗಿದ್ದರಿಂದ ವಯಕ್ತಿಕವಾಗಿ ನೋವಿನಲ್ಲಿದ್ದೇನೆ. ಹೀಗಾಗಿ ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.