Advertisement

ನಿಷೇಧಾಜ್ಞೆ ನಡುವೆ ನಾಳೆ ಮತ ಎಣಿಕೆ

10:46 AM Dec 13, 2019 | Team Udayavani |

ಬೆಂಗಳೂರು: ಉಪ ಚುನಾವಣೆ ಮತ ಎಣಿಕೆ ಹಿನ್ನೆಲೆಯಲ್ಲಿ ಮತ ಎಣಿಕೆ ಕೇಂದ್ರಗಳ ಸುತ್ತ ನಿಷೇಧಾಜ್ಞೆ, ಮದ್ಯ ಮಾರಾಟ ನಿಷೇಧ ಹಾಗೂ ಈ ಭಾಗದಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಎಣಿಕೆ ವಸಂತನಗರದ ಮೌಂಟ್‌ ಕಾರ್ಮಲ್‌ ಪಿಯು ಮಹಿಳಾ ಕಾಲೇಜು, ಕೆ.ಆರ್‌.ಪುರ, ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರಗಳ ಎಣಿಕೆ ಅಶೋಕ ನಗರದ ಸೇಂಟ್‌ ಜೋಸೆಫ್ ಇಂಡಿಯನ್‌ ಹೈಸ್ಕೂಲ್‌ನಲ್ಲಿ ನಡೆಯಲಿದ್ದು, ಡಿ.9ರಂದು ಬೆಳಗ್ಗೆ ಆರು ಗಂಟೆ ಯಿಂದ ಸಂಜೆ ಆರು ಗಂಟೆವರೆಗೆ ವಾಹನ ಗಳ ಸುಗಮ ಸಂಚಾರಕ್ಕೆ ಕೆಲವೊಂದು ಮಾರ್ಪಾಡು ಮಾಡಲಾಗಿದೆ.

Advertisement

ಯಶವಂತಪುರ ಕ್ಷೇತ್ರದ ಮತ ಎಣಿಕೆ ಮೈಸೂರು ರಸ್ತೆಯಲ್ಲಿರುವ ಆರ್‌.ವಿ ಎಂಜಿನಿಯರಿಂಗ್‌ ಕಾಲೇಜು ಹಾಗೂ ಹೊಸಕೋಟೆ ಕ್ಷೇತ್ರದ ಮತ ಎಣಿಕೆ ದೇವನಹಳ್ಳಿಯ ಆಕಾಶ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ನಡೆಯಲಿದ್ದು, ಈ ವ್ಯಾಪ್ತಿಯಲ್ಲಿಯೂ ವಾಹನ ನಿಲುಗಡೆ ಮತ್ತು ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ವಾಹನ ಸವಾರರು ಸಂಚಾರ ಪೊಲೀಸರು ಸೂಚಿಸುವ ಬದಲಿ ಮಾರ್ಗದಲ್ಲಿ ಸಂಚಾರ ಮಾಡುವಂತೆ ಸಂಚಾರ ವಿಭಾಗದ ಹಿರಿಯ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಡಿ.9ರಂದು ಬೆಳಗ್ಗೆ 6ರಿಂದ ರಾತ್ರಿ 12 ಗಂಟೆವರೆಗೆ ಮತ ಎಣಿಕೆ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ. ಜತೆಗೆ ಡಿ.8ರ ತಡರಾತ್ರಿ 12 ಗಂಟೆಯಿಂದ ಡಿ.9ರ ತಡರಾತ್ರಿ 12 ಗಂಟೆವರೆಗೆ ಹೈಗ್ರೌಂಡ್ಸ್‌ ಠಾಣೆ, ಕಬ್ಬನ್‌ ಪಾರ್ಕ್‌, ಕೆಂಗೇರಿ ಠಾಣೆ ಮತ್ತು ದೇವನಹಳ್ಳಿ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಎಲ್ಲ ತರಹದ ಮದ್ಯದ ಅಂಗಡಿ, ಬಾರ್‌/ ರಸ್ಟೋರೆಂಟ್‌ ಹಾಗೂ ಕ್ಲಬ್‌ಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ನಗರ ಪೊಲಸ್‌ ಆಯುಕ್ತ ಭಾಸ್ಕರ್‌ ರಾವ್‌ ತಿಳಿಸಿದ್ದಾರೆ.

ಮತ ಎಣಿಕೆಗೆ ಸಿದ್ಧತೆ: ನಗರದ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆ ಫ‌ಲಿತಾಂಶ ಸೋಮವಾರ ಪ್ರಕಟವಾಗಲಿದ್ದು, ಮತ ಎಣಿಕೆಗೆ ಚುನಾವಣಾ ಆಯೋಗ ಈಗಾಗಲೇ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಕೆ.ಆರ್‌.ಪುರ ಹಾಗೂ ಮಹಾಲಕ್ಷ್ಮೀ ಲೇಔಟ್‌ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ವಿಠ್ಠಲ ಮಲ್ಯ ರಸ್ತೆಯ ಸೇಂಟ್‌ ಜೋಸೆಫ್ ಇಂಡಿಯನ್‌ ಹೈಸ್ಕೂಲ್‌ನಲ್ಲಿ ನಡೆಯಲಿದೆ. ಯಶವಂತಪುರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕೆಂಗೇರಿಯ ಮೈಸೂರು ರಸ್ತೆಯಲ್ಲಿರುವ ಆರ್‌.ವಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಹಾಗೂ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ, ವಸಂತನಗರದ ಅರಮನೆ ರಸ್ತೆಯಲ್ಲಿರುವ ಮೌಂಟ್‌ ಕಾರ್ಮೆಲ್‌ ಪಿ.ಯು ಕಾಲೇಜಿನಲ್ಲಿ ನಡೆಯಲಿದೆ.

ವಾಹನ ನಿಲುಗಡೆ ನಿಷೇಧ: ಪ್ಯಾಲೆಸ್‌ ರಸ್ತೆಯ ಹಳೇ ಹೈಗ್ರೌಂಡ್ಸ್‌ ಜಂಕ್ಷನ್‌ನಿಂದ ವಸಂತನಗರ ರೈಲ್ವೇ ಕೆಳ ಸೇತುವೆ, ಎಂ.ವಿ.ಜಯರಾಮನ್‌ ರಸ್ತೆ, ಉದಯ ಟಿವಿ ಜಂಕ್ಷನ್‌, ರೇಸ್‌ ಕೋರ್ಸ್‌ ರಸ್ತೆ-ಬಸವೇಶ್ವರ ವೃತ್ತ-ಖನಿಜ ಭವನ ರಸ್ತೆಯ ಎರಡೂ ಬದಿ, ಟಿ.ಚೌಡಯ್ಯ ರಸ್ತೆ-ಹಳೆ ಹೈಗ್ರೌಂಡ್ಸ್‌ ಪಿ.ಎಸ್‌.ಜಂಕ್ಷನ್‌ನಿಂದ ವಿಂಡ್ಸರ್‌ಮ್ಯಾನರ್‌ನ ಎರಡೂ ಬದಿ ರಸ್ತೆ, ಕನ್ನಿಂಗ್‌ಹ್ಯಾಂ ರಸ್ತೆ, ಲೀ ಮೆರಿಡಿಯನ್‌ ಹೋಟೆಲ್‌ನಿಂದ ಚಂದ್ರಿಕಾ ಜಂಕ್ಷನ್‌ವರೆಗೆ ಮತ್ತು ಸೇಂಟ್‌ ಜೋಸೆಫ್ ಇಂಡಿಯನ್‌ ಹೈಸ್ಕೂಲ್‌ ಮೈದಾನ, ಮಲ್ಯ ಆಸ್ಪತ್ರೆ ರಸ್ತೆ, ಸಿದ್ದಲಿಂಗಯ್ಯ ವೃತ್ತದಿಂದ ಆರ್‌ಆರ್‌ಎಂಆರ್‌ ಜಂಕ್ಷನ್‌, ಹಡ್ಸನ್‌ ವೃತ್ತ, ಕಸ್ತೂರ ಬಾ ರಸ್ತೆ, ವಿಠ್ಠಲ ಮಲ್ಯ ರಸ್ತೆ, ಸಿದ್ದಲಿಂಗಯ್ಯ ವೃತ್ತದಿಂದ ಕಾಫಿ ಡೇ ಜಂಕ್ಷನ್‌, ಕ್ವೀನ್ಸ್‌ ವೃತ್ತದ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.

Advertisement

ವಾಹನ ನಿಲುಗಡೆ ರಸ್ತೆಗಳು: ಟಿ.ಚೌಡಯ್ಯ ರಸ್ತೆ, ಎಲ್‌ಆರ್‌ಡಿಇ ಯಿಂದ ರಾಜಭವನವರೆಗಿನ ರಸ್ತೆಯ ಒಂದು ಬದಿ, 8ನೇ ಮೇನ್‌ ವಸಂತನಗರ ರಸ್ತೆಯ ಒಂದು ಬದಿಯಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ಮೌಂಟ್‌ ಕಾರ್ಮೆಲ್‌ ಕಾಲೇಜು ಕೇಂದ್ರದಲ್ಲಿ ನಡೆಯುವ ಮತ ಎಣಿಕೆಗೆ ಹಾಜರಾಗುವ ಕಾರ್ಯಕರ್ತರು ಮುಖ್ಯ ಅರಮನೆ ಮೈದಾನದ ಆವರಣದಲ್ಲಿ ತಮ್ಮ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ. ವಿಕಾಸಸೌಧದ ವಾಹನ ನಿಲುಗಡೆ ಸ್ಥಳದ ಮುಂಭಾಗ ಮತ್ತು ಕಂಠೀರವ ಕ್ರೀಡಾಂಗಣದಲ್ಲಿ ಪೊಲೀಸ್‌ ಅಧಿಕಾರಿಗಳ ವಾಹನ ನಿಲುಗಡೆ ಮತ್ತು ಊಟ/ತಿಂಡಿಯ ವಿತರಣೆ ವಾಹನಗಳ ನಿಲುಗಡೆ ಮಾಡಬಹುದು. ಹೀಗಾಗಿ ಸಾರ್ವಜನಿಕರು ಈ ಮಾರ್ಗಗಳಲ್ಲಿ ಓಡಾಡುವ ವಾಹನ ಸವಾರರು ಬದಲಿ ಮಾರ್ಗ ಬಳಸಲು ಕೋರಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next