ಬೆಂಗಳೂರು: ಸಾಕಷ್ಟು ಕುತೂಹಲ ಕೆರಳಿಸಿ ರುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿಗೆ ಕೊನೆಗೂ ಅಂತಿಮ ಸ್ಪರ್ಶ ನೀಡಲಾಗಿದೆ. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಬಿಜೆಪಿಯ ಕೇಂದ್ರ ಚುನಾವಣ ಸಮಿತಿ ಸಭೆ ಸೇರಿ ಅಭ್ಯರ್ಥಿ ಪಟ್ಟಿಗೆ ಬಹುತೇಕ ಅನುಮೋದನೆ ನೀಡಿದೆ. ಯಾವುದೇ ಘಳಿಗೆಯಲ್ಲಿ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಇದು ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳ ಎದೆಬಡಿತ ಹೆಚ್ಚಿಸಿದೆ.
ಬಂಡೀಪುರ ಸಫಾರಿ ಮುಗಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಹೊಸದಿಲ್ಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಗೆ ಆಗಮಿಸಿದರು.
ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹಿತ ಚುನಾವಣ ಸಮಿತಿ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದರು. ಎರಡು ದಿನಗಳಿಂದ ಜೆ.ಪಿ. ನಡ್ಡಾ ನಿವಾಸದಲ್ಲಿ ಜರಗಿದ ಸರಣಿ ಸಭೆಗಳಲ್ಲಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗಿತ್ತು. ಪ್ರತೀ ಕ್ಷೇತ್ರಕ್ಕೆ ಮೂವರಂತೆ ಸಿದ್ಧಪಡಿಸಿದ್ದ ಪಟ್ಟಿಯನ್ನು ಕೆಲವು ಕಡೆ ಒಂದು ಇಲ್ಲವೇ ಎರಡು ಅಭ್ಯರ್ಥಿಗೆ, ಉಳಿದಂತೆ ಮೂವರು ಅಭ್ಯರ್ಥಿಗಳ ಹೆಸರು ಶಿಫಾರಸು ಮಾಡಿ ಕೇಂದ್ರ ಚುನಾವಣ ಸಮಿತಿಗೆ ಅಂತಿಮ ಪಟ್ಟಿ ಸಿದ್ಧಪಡಿಸಲಾಗಿತ್ತು. ಈ ಪಟ್ಟಿಯ ಅನ್ವಯ ಪ್ರತೀ ಕ್ಷೇತ್ರದ ಬಗ್ಗೆ ಸಮೀಕ್ಷಾ ವರದಿ, ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯದ ಬಗ್ಗೆ ಚರ್ಚಿಸಲಾಗಿದೆ. ಅಂದಾಜು 2 ತಾಸು ಸಭೆ ಬಳಿಕ ಮೋದಿ ನಿರ್ಗಮಿಸಿದರು. ಅನಂತರ ಅಮಿತ್ ಶಾ ಹಾಗೂ ನಡ್ಡಾ ಅವರು ಪ್ರತ್ಯೇಕವಾಗಿ ಸಭೆ ನಡೆಸಿದರು. ಪ್ರಧಾನಿ ಸೂಚನೆಯಂತೆ ಸೋಮವಾರ ಮತ್ತೂಂದು ಸಭೆ ನಡೆದು ಬಳಿಕ ಪಟ್ಟಿ ಬಿಡುಗಡೆಗೆ ನಿರ್ಧರಿಸಲಾಗಿದೆ ಎನ್ನಲಾಗಿದೆ.
ಸಭೆಯಲ್ಲಿ ಯಾರ್ಯಾರು?
ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ರಾಜನಾಥ ಸಿಂಗ್, ಧರ್ಮೇಂದ್ರ ಪ್ರಧಾನ್, ಉಸ್ತುವಾರಿಗಳಾದ ಅರುಣ್ ಸಿಂಗ್, ಅಣ್ಣಾಮಲೈ, ಮಹಾರಾಷ್ಟ್ರದ ಡಿಸಿಎಂ ದೇವೇಂದ್ರ ಫಡ್ನವೀಸ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಸಂಘಟನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ರಾಜ್ಯ ಸಂಘಟನ ಕಾರ್ಯದರ್ಶಿ ರಾಜೇಶ್ ಭಾಗವಹಿಸಿದ್ದರು.
ದಿಲ್ಲಿಯಲ್ಲಿ ಪುತ್ರರಿಗೆ ಲಾಬಿ
ವಸತಿ ಸಚಿವ ವಿ. ಸೋಮಣ್ಣ ಹಾಗೂ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ತಮ್ಮ ಪುತ್ರರಿಗೆ ಟಿಕೆಟ್ ಗಿಟ್ಟಿಸಲು ಭಾರೀ ಪ್ರಯತ್ನ ನಡೆಸಿದರು. ಸೋಮಣ್ಣ ಅವರು ಪುತ್ರ ಡಾಣ ಅರುಣ್ ಸೋಮಣ್ಣ ಅವರಿಗೆ ಗುಬ್ಬಿಯಿಂದ ಟಿಕೆಟ್ ಕೊಡಬೇಕೆಂದು ಒತ್ತಡ ಹಾಕಿದ್ದಾರೆ. ಕಾರಜೋಳ ಅವರು ಪುತ್ರ ಗೋಪಾಲ ಕಾರಜೋಳ ಅವರಿಗೆ ನಾಗಠಾಣದಿಂದ ಟಿಕೆಟ್ ಕೇಳಿದ್ದಾರೆ. ಕಳೆದ ಚುನಾವಣೆಯಲ್ಲಿ ಗೋಪಾಲ 3ನೇ ಸ್ಥಾನ ಪಡೆದಿದ್ದರು.