Advertisement

‘ಕಾಂಗ್ರೆಸ್‌ ಮುಕ್ತ ಕರ್ನಾಟಕಕ್ಕೆ ಕ್ಷಣಗಣನೆ’

02:07 PM Apr 21, 2018 | |

ಸುಳ್ಯ: ಅಭಿವೃದ್ಧಿ ವಿರೋಧಿ ಧೋರಣೆಯ ಕಾಂಗ್ರೆಸ್‌ ಪಕ್ಷ ದೇಶದ ಹಿತಾಸಕ್ತಿಗೆ ಮಾರಕ. ಈ ಚುನಾವಣೆ ಮೂಲಕ ಕಾಂಗ್ರೆಸ್‌ ಮುಕ್ತ ಕರ್ನಾಟಕಕ್ಕೆ ಕ್ಷಣಗಣನೆ ಆರಂಭಗೊಂಡಿದೆ ಎಂದು ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ನಗರದ ಪುರಭವನದಲ್ಲಿ ಶುಕ್ರವಾರ ಬಿಜೆಪಿ ಅಭ್ಯರ್ಥಿ ಎಸ್‌.ಅಂಗಾರ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದ ಪ್ರಯುಕ್ತ ನಡೆದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

Advertisement

ರಾಜ್ಯದಲ್ಲಿ ಸಿದ್ದರಾಮಯ್ಯ ಅವರಂತಹ ಮುಖ್ಯಮಂತ್ರಿಗಳನ್ನು ಎಂದೂ ಕಂಡಿಲ್ಲ. ಟಿಪ್ಪು ಜಯಂತಿ ಮೂಲಕ ಹಿಂದೂ- ಮುಸ್ಲಲ್ಮಾನರ ನಡುವೆ ದ್ವೇಷ ಸೃಷ್ಟಿ, ರಾಷ್ಟ್ರ ವಿರೋಧಿ ಕೃತ್ಯದಲ್ಲಿ ತೊಡಗಿದ್ದವರ ಮೇಲೆ ದಾಖಲಾಗಿದ್ದ ಪ್ರಕರಣ ಹಿಂತೆಗೆತ, ಹಿಂದೂ ಕಾರ್ಯಕರ್ತರ ಸಾಲು-ಸಾಲು ಹತ್ಯೆಗಳು ಸಿದ್ದರಾಮಯ್ಯ ಅವರ ಬಹು ಸಂಖ್ಯಾಕರ ಮೇಲಿನ ದಬ್ಟಾಳಿಕೆಗೆ ಸಾಕ್ಷಿ ಎಂದರು.

ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಮಾತನಾಡಿ, ಸಿದ್ದರಾಮಯ್ಯ, ರಮಾನಾಥ ರೈ ಅವರದ್ದು ನಕಲಿ ಹಿಂದುತ್ವ. ಅಂತಹವರು ನಮಗೆ ಬೇಕಿಲ್ಲ. ಹಾಗಾಗಿ ಕಾಂಗ್ರೆಸ್‌ ಪಕ್ಷವನ್ನು ತೊಲಗಿಸಿ ಜಾತಿ, ಧರ್ಮ ಮೀರಿದ ರಾಷ್ಟ್ರೀಯತೆಯ ಚಿಂತೆನೆಯುಳ್ಳ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಶಾಸಕ ಎಸ್‌.ಅಂಗಾರ ಮಾತನಾಡಿ, ನಾನು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು ಜನರಿಗೆ ತಿಳಿದಿದೆ. ಆದರೂ ಕಾಂಗ್ರೆಸ್‌ ಅಪಪ್ರಚಾರದ ರಾಜಕಾರಣ ಮಾಡುತ್ತಿದೆ. ನನ್ನನ್ನು ಗೆಲ್ಲಿಸಿದ್ದು ಕಾಂಗ್ರೆಸ್‌ ಪಕ್ಷ ಅಲ್ಲ. ಅದು ಕ್ಷೇತ್ರದ ಪ್ರಜ್ಞಾವಂತ ಮತದಾರರು. ಅಪಪ್ರಚಾರಕ್ಕೆ ಕಿವಿಗೊಡುವ ಅಗತ್ಯ ಇಲ್ಲ ಎಂದರು.

ವಾಗ್ಮಿ ಆದರ್ಶ ಗೋಖಲೆ ಮಾತನಾಡಿ, ಧರ್ಮ, ಮಹಿಳೆ, ಗೋವಿನ ರಕ್ಷಣೆಯಿಂದ ಉತ್ತಮ ಸಮಾಜ ನಿರ್ಮಾಣ ಆಗುತ್ತದೆ. ಅಂತಹ ರಕ್ಷಕರನ್ನು ನಾವೆಲ್ಲರೂ ಬೆಂಬಲಿಸಬೇಕು ಎಂದು ಹೇಳಿದರು.

Advertisement

ವಿಧಾನಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕೇರಳ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ. ಸುರೇಂದ್ರನ್‌, ಕಾಸರಗೋಡು ಮಂಡಲ ಸಮಿತಿ ಅಧ್ಯಕ್ಷ ಸುಧಾಮ, ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ವೆಂಕಟ ವಳಲಂಬೆ, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಎಪಿಎಂಸಿ ಅಧ್ಯಕ್ಷ ದೇರಣ್ಣ ಗೌಡ, ನಗರ ಪಂಚಾಯತ್‌ ಅಧ್ಯಕ್ಷೆ ಶೀಲಾವತಿ ಮಾಧವ, ಎನ್‌.ಎ. ರಾಮಚಂದ್ರ, ಕಿಶೋರ್‌ ಶಿರಾಡಿ, ಜಿ.ಪಂ. ಸದಸ್ಯರಾದ ಪ್ರಮೀಳಾ ಜನಾರ್ದನ, ಪುಷ್ಪಾವತಿ ಬಾಳಿಲ, ಎಸ್‌.ಎನ್‌. ಮನ್ಮಥ, ಹರೀಶ್‌ ಕಂಜಿಪಿಲಿ ಹಾಗೂ ವಿವಿಧ ಮೋರ್ಚಾಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ವಿಧಾನಸಭಾ ಕ್ಷೇತ್ರ ಚುನಾವಣ ಉಸ್ತುವಾರಿ ಎ.ವಿ. ತೀರ್ಥರಾಮ ಸ್ವಾಗತಿಸಿ, ಮಂಡಲ ಪ್ರಧಾನ ಕಾರ್ಯದರ್ಶಿ ಸುಬೋಧ ಶೆಟ್ಟಿ ಮೇನಾಲ ವಂದಿಸಿದರು. ಜಿ.ಪಂ. ಮಾಜಿ ಸದಸ್ಯ ವೆಂಕಟ ದಂಬೆಕೋಡಿ ನಿರೂಪಿಸಿದರು. ಮಾಧ್ಯಮ ಪ್ರಮುಖ್‌ ಕೇಶವ ಮುಳಿಯ ಸಹಕರಿಸಿದರು.

ಆಕರ್ಷಕ ಮೆರವಣಿಗೆ
ಬೆಳಗ್ಗೆ ನಗರದ ಶ್ರೀಹರಿ ಕಾಂಪ್ಲೆಕ್ಸ್‌ ನಲ್ಲಿನ ಬಿಜೆಪಿ ಚುನಾವಣಾ ಪ್ರಚಾರ ಕಚೇರಿ ಬಳಿಯಿಂದ ಸಾವಿರಾರು ಕಾರ್ಯಕರ್ತರ ಉಪಸ್ಥಿತಿಯಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಧಾರ್ಮಿಕ ಕೇಂದ್ರಕ್ಕೆ ಭೇಟಿ
ನಾಮಪತ್ರಕ್ಕೆ ಸಲ್ಲಿಕೆ ಹಿನ್ನೆಲೆಯಲ್ಲಿ ಶಾಸಕ ಅಂಗಾರ ಅವರು ಬೆಳಗ್ಗೆ ಹೇಮಳದ ನಾಗಬ್ರಹ್ಮ ದೇವಸ್ಥಾನ, ನಗರದ ಶ್ರೀ ಚೆನ್ನಕೇಶವ ದೇವಾಲಯ, ಕಾಯರ್ ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನ, ಶ್ರೀರಾಮ ಭಜನ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಪ್ರಕಾಶ್‌ ಹೆಗ್ಡೆ ಆಗಮನ
ಕೆಲ ತಿಂಗಳ ಹಿಂದೆ ನಗರದಲ್ಲಿ ನಡೆದ ವಾಹನ ಅವಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡು, ಇದೀಗ ಚೇತರಿಸಿಕೊಂಡಿರುವ ನಗರ ಪಂಚಾಯತ್‌ ಮಾಜಿ ಅಧ್ಯಕ್ಷ ಪ್ರಕಾಶ್‌ ಹೆಗ್ಡೆ ಅವರು ಪುರಭವನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದ ವೇದಿಕೆಯಲ್ಲಿ ಅತಿಥಿಯಾಗಿ ಭಾಗವಹಿಸಿ ಗಮನ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next