Advertisement
ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಭಾನುವಾರ ಬೆಳಗ್ಗೆ 9.39 ರಿಂದ 10.25ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ನಾಡದೇವತೆ ಚಾಮುಂಡಿ ದೇವಿಯ ಅಗ್ರಪೂಜೆ ಯೊಂದಿಗೆ 2019ರ ದಸರಾ ಮಹೋತ್ಸವ ಉದ್ಘಾಟನೆಯಾಗಲಿದೆ. ಸರಸ್ವತಿ ಸಮ್ಮಾನ್ ಪುರಸ್ಕೃತ ಹಿರಿಯ ಸಾಹಿತಿ ಪದ್ಮಶ್ರೀ ಡಾ.ಎಸ್.ಎಲ್.ಭೈರಪ್ಪ ದಸರಾ ಮಹೋತ್ಸವ ಉದ್ಘಾಟಿಸಲಿದ್ದಾರೆ.
Related Articles
Advertisement
ದಸರಾ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದೇವಿಗೆ ಒಂಭತ್ತು ದಿನವೂ ಬೇರೆ ಬೇರೆ ಅಲಂಕಾರ ಮಾಡಲಾಗುತ್ತದೆ. ಮೊದಲ ದಿನವಾದ ಭಾನುವಾರ (ಸೆ.29) ಚಾಮುಂಡೇಶ್ವರಿಗೆ ಬ್ರಾಹ್ಮಿ ಅಲಂಕಾರ, ಸೆ.30ರಂದು ಮಹೇಶ್ವರಿ ಅಲಂಕಾರ, ಅ.1ರಂದು ಕೌಮಾರಿ, ಅ.2ರಂದು ವೈಷ್ಣವಿ, ಅ.3ರಂದು ವಾರಾಹಿ, ಅ.4ರಂದು ಇಂದ್ರಾಣಿ ಅಲಂಕಾರವಿರುತ್ತದೆ. ಅ.5ರಂದು ಸರಸ್ವತಿ ಅಲಂಕಾರ, ಅಂದು ಸಂಜೆ ಕಾಳರಾತ್ರಿ ಪೂಜೆ ನಡೆಯುತ್ತದೆ. ಅ.6ರಂದು ದುರ್ಗಾ ಅಲಂಕಾರ, ಅ.7ರಂದು ಗಜಲಕ್ಷ್ಮೀ, ಅ.8ರಂದು ಅಶ್ವಾರೋಹಣ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಪ್ರತಿ ದಿನ ಬೆಳಗ್ಗೆ 7.30 ರಿಂದ 2 ಗಂಟೆ, ಮಧ್ಯಾಹ್ನ 3.30ರಿಂದ 6ಗಂಟೆ ಹಾಗೂ ಸಂಜೆ.7.30ರಿಂದ ರಾತ್ರಿ 9ಗಂಟೆಯವರೆಗೆ ಭಕ್ತರು ದೇವಿಯ ದರ್ಶನ ಪಡೆಯವುದಕ್ಕೆ ಅವಕಾಶ ಕಲ್ಪಿಸಲಾಗಿದೆ.
ಚಿನ್ನದ ಅಂಬಾರಿಯಲ್ಲಿ ಉತ್ಸವ ಮೂರ್ತಿ: ಚಾಮುಂಡಿಬೆಟ್ಟದಲ್ಲಿ ಭಾನುವಾರ ಗಣ್ಯರು ಪುಷ್ಪಾರ್ಚನೆ ಮಾಡಲಿರುವ ಚಾಮುಂಡೇಶ್ವರಿ ವಿಗ್ರಹ ಅರಮನೆಯಿಂದ ತಂದು, ಚಾಮುಂಡಿಬೆಟ್ಟದ ದೇವಾಲಯದಲ್ಲಿಡಲಾಗಿದೆ. ಪ್ರತಿ ವರ್ಷ ದಸರಾ ಮಹೋತ್ಸವದ ಆರಂಭಕ್ಕೆ ಮೂರು ದಿನ ಮೊದಲೇ ಅರಮನೆಯಿಂದ ಚಾಮುಂಡಿಬೆಟ್ಟಕ್ಕೆ ತರಲಾಗುತ್ತದೆ. ನಂತರ ಉತ್ಸವ ಮೂರ್ತಿಯನ್ನು ತೊಳೆದು, ನೈವೇದ್ಯ ಮಾಡಿ, ಪೂಜೆ ಸಲ್ಲಿಸುವ ಮೂಲಕ ಶಕ್ತಿ ತುಂಬಲಾಗುತ್ತದೆ. ನಾಳೆಯಿಂದ ಅ.8ರವರೆಗೂ ಚಾಮುಂಡಿಬೆಟ್ಟದ ದೇವಾಲಯದಲ್ಲಿ ಪೂಜಿಸಲಾಗುತ್ತದೆ. ಜಂಬೂಸವಾರಿಯ ದಿನ ಬೆಳಗ್ಗೆ ಉತ್ಸವ ಮೂರ್ತಿಯನ್ನು ಅರಮನೆಗೆ ತಂದು ಒಪ್ಪಿಸಲಾಗುತ್ತದೆ. ನಂತರ ಚಿನ್ನದ ಅಂಬಾರಿಯಲ್ಲಿಟ್ಟು ಜಂಬೂಸವಾರಿಯಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಜಂಬೂಸವಾರಿಯ ನಂತರ ಉತ್ಸವ ಮೂರ್ತಿಯನ್ನು ಅರಮನೆಯಲ್ಲಿಟ್ಟು ವರ್ಷವಿಡೀ ಪೂಜಿಸಲಾಗುತ್ತದೆ.