Advertisement

ಹೊಸ ವರ್ಷಕ್ಕೆ ಕ್ಷಣಗಣನೆ!

11:42 AM May 03, 2017 | |

ನಟ ಕಮ್‌ ನಿರ್ಮಾಪಕ ಬಿ.ಸಿ.ಪಾಟೀಲ್‌ ಮತ್ತೆ ಬಂದಿದ್ದಾರೆ. ಈ ಬಾರಿ ಹೊಸಬರ ಜತೆ ಎಂಟ್ರಿಯಾಗಿದ್ದಾರೆ ಅನ್ನೋದು ವಿಶೇಷ. ಹೊಸಬರೊಂದಿಗೆ ಹೊಸತನವುಳ್ಳ “ಹ್ಯಾಪಿ ನ್ಯೂ ಇಯರ್‌’ ಎಂಬ ಚಿತ್ರ ಮಾಡಿರುವ ಪಾಟೀಲರು, ಮೇ.5 ರಂದು ರಾಜ್ಯಾದ್ಯಂತ ಚಿತ್ರ ರಿಲೀಸ್‌ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ಇಬ್ಬರು ಯುವ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿರುವ ಹೆಮ್ಮೆ ಅವರದು.

Advertisement

ಹಿರಿಯ ನಿರ್ದೇಶಕ ಟಿ.ಎಸ್‌. ನಾಗಾಭರಣ ಅವರ ಪುತ್ರ ಪನ್ನಗಭರಣ ಅವರನ್ನು ಈ ಚಿತ್ರದ ಮೂಲಕ ನಿರ್ದೇಶಕರನ್ನಾಗಿಸಿದರೆ, ತಮ್ಮ ಪುತ್ರಿ ಸೃಷ್ಠಿ ಪಾಟೀಲ್‌ ಅವರನ್ನು ನಾಯಕಿಯನ್ನಾಗಿ ಪರಿಚಯಿಸಿದ್ದಾರೆ. ಒಂದು ಹೊಸ ಪ್ರಯೋಗದ ಸಿನಿಮಾ ಮಾಡಿದ ಖುಷಿಯಲ್ಲಿರುವ ಬಿ.ಸಿ.ಪಾಟೀಲರು ಆ ಕುರಿತು ತಮ್ಮ ಚಿತ್ರತಂಡದೊಂದಿಗೆ ಒಂದಷ್ಟು ಮಾತುಕತೆ ಹಂಚಿಕೊಂಡಿದ್ದಾರೆ.

ಇನ್ನೊಬ್ಬ “ಕೌರವ’ನ ಕಥೆ
“2010 ರಲ್ಲಿ “ಸೆಲ್ಯೂಟ್‌’ ಚಿತ್ರ ಮಾಡಿದ್ದೇ ಕೊನೆ. ಆ ಬಳಿಕ ನನಗೇಕೋ ಸಿನಿಮಾರಂಗದ ವಾತಾವರಣ ನೋಡಿ ಇಲ್ಲಿ ಕೆಲಸ ಮಾಡೋದೇ ಬೇಡವೆನಿಸಿ, ರಾಜಕೀಯದಲ್ಲೇ ಬಿಜಿಯಾದೆ. ಆದರೆ, ಇತ್ತೀಚಿನ ಎರಡು ವರ್ಷಗಳನ್ನು ಗಮನಿಸಿದರೆ, ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯ ಸಿನಿಮಾಗಳು ಬಂದವು. ಹೊಸ ಪ್ರತಿಭೆಗಳು ಗುರುತಿಸಿಕೊಂಡರು. ಮಲ್ಟಿಪ್ಲೆಕ್ಸ್‌ಗಳಲ್ಲೂ ಹೊಸಬರ ಚಿತ್ರಗಳು ಗಟ್ಟಿಯಾಗಿ ಬೇರೂರಿದವು. ಹೊಸ ಬೆಳವಣಿಗೆ ನೋಡಿ ಖುಷಿ ಆಯ್ತು.  

ನಾನು ಪೊಲೀಸ್‌ ಅಧಿಕಾರಿ ಕೆಲಸ ಬಿಟ್ಟಿದ್ದೇ ಕಲೆಗಾಗಿ. ಹೀರೋ ಆಗಿ ಹೆಸರು ಮಾಡಿದೆ, ನಿರ್ಮಾಪಕನಾಗಿಯೂ ಗುರುತಿಸಿಕೊಂಡೆ. ಕಲೆಯನ್ನು ದೂರ ಮಾಡೋದು ಬೇಡ ಅಂತೆನಿಸಿ, ಒಂದೊಳ್ಳೆಯ ಚಿತ್ರ ಮಾಡುವ ಯೋಚನೆ ಬಂತು. ಆಗ ನಾಗಾಭರಣ ಅವರನ್ನು ಭೇಟಿ ಮಾಡಿ, ಒಳ್ಳೆಯ ಕಥೆ ಇದ್ದರೆ ಸಿನಿಮಾ ಮಾಡೋಣ ಅಂತ ಚರ್ಚೆ ಮಾಡಿದೆ. ಆದರೆ, ಅವರು, ನಾನು ಐತಿಹಾಸಿಕ ಸಿನಿಮಾ ಮಾಡೋ ಯೋಚನೆಯಲ್ಲಿದ್ದೇನೆ. ಈಗ ಟ್ರೆಂಡ್‌ ಬೇರೆ ಇದೆ.

ಈಗಿನ ಕಾಲಕ್ಕೆ ತಕ್ಕಂತಹ ಕಥೆಗಳು ನನ್ನ ಬಳಿ ಇಲ್ಲ. ಆದರೆ, ನನ್ನ ಪುತ್ರ ಪನ್ನಗನ ಬಳಿ ಒಂದಷ್ಟು ಹೊಸಬಗೆಯ ಕಥೆಗಳಿವೆ ಒಮ್ಮೆ ಕೇಳಿ ನೋಡಿ ಅಂದರು. ಆಗ, ಪನ್ನಗನಿಗೆ ಕಥೆ ಹೇಳುವಂತೆ, ಮನೆಗೆ ಆಹ್ವಾನಿಸಿದ್ದೆ. ಪತ್ನಿ ವನಜಾಪಾಟೀಲ್‌ ಮತ್ತು ಪುತ್ರಿ ಸೃಷ್ಠಿ ಜತೆ ಕಥೆ ಕೇಳಿದೆ. ಪನ್ನಗ ಒಟ್ಟು ಐದು ಕಥೆ ಹೇಳಿದರು. ಆದರೆ, ಅವೆಲ್ಲವೂ ತಕ್ಕಮಟ್ಟಿಗೆ ಓಕೆ ಅನ್ನಿಸಿತು. ಬೇರೆ ಯಾವುದಾದರೂ ಕಥೆ ಇದೆಯಾ ನೋಡಿ ಅಂದೆ, ಇನ್ನೊಂದು ಕಥೆ ಇದೆ.

Advertisement

ಅದು ಐದು ಕಥೆ ಇರುವ ಸಿನಿಮಾ ಆಗುತ್ತೆ, ಐವರು ಹೀರೋಗಳು, ಐವರು ನಾಯಕಿಯರು ಕೇಳ್ತೀರಾ ಅಂದ್ರು, ಹೇಳಿ ಅಂದೆ, ಕಥೆ ಕೇಳಿದೆ ಹ್ಯಾಪಿಯಾಯ್ತು. ಅದೇ “ಹ್ಯಾಪಿ ನ್ಯೂ ಇಯರ್‌’ ಆಯ್ತು’ ಎನ್ನುತ್ತಾರೆ ಪಾಟೀಲ್‌. “ಆ ಕಥೆಯಲ್ಲೊಂದು ಸ್ಲಂನಲ್ಲಿರುವ ರಫ್ ಪಾತ್ರವೊಂದು ಬರುತ್ತೆ. ಅದನ್ನು ನಾನೇ ಮಾಡ್ತೀನಿ ಅಂದೆ. ಮಗಳು ಕೂಡ ಸಿನಿಮಾ ಮಾಡುವ ಯೋಚನೆಯಲ್ಲಿರಲಿಲ್ಲ. ಆಗ, ಕಥೆಯ ಒಂದು ಪಾತ್ರ ಇಷ್ಟವಾಗಿ, ನಾನು ಒಂದು ಪಾತ್ರ ಮಾಡ್ತೀನಿ, ಟ್ರಾವೆಲ್ಲರ್‌ ಪಾತ್ರ ಇಷ್ಟ ಆಯ್ತು ಅಂದಾಗ, ಅವಳಿಗೂ ಇಲ್ಲಿ ಅವಕಾಶ ಸಿಕ್ತು.

ಉಳಿದಂತೆ ಕಥೆಯ ಪಾತ್ರಗಳಿಗೆ ವಿಜಯರಾಘವೇಂದ್ರ, ದಿಗಂತ್‌, ಸಾಯಿಕುಮಾರ್‌, ಶ್ರುತಿ ಹರಿಹರನ್‌, ಸೋನು ಗೌಡ, ರಾಶ್ರೀ ಪೊನ್ನಪ್ಪ, ರಷ್ಯಾದ ನಾಯಕಿ ಮಾರ್ಟಿನ್‌ ರೀಟಾ, ತಬಲಾ ನಾಣಿ, “ಕಡ್ಡಿಪುಡಿ’ ಚಂದ್ರು ಹೀಗೆ ಒಂದಷ್ಟು ಪಾತ್ರಗಳನ್ನು ಅಂತಿಮವಾಗಿಸಿ, ಸಿನಿಮಾ ಮಾಡಿದ್ದೇವೆ. ರಘು ದೀಕ್ಷಿತ್‌ ಅದ್ಭುತ ಹಾಡುಗಳನ್ನು ಕೊಟ್ಟಿದ್ದಾರೆ. ಈಗಾಗಲೇ ಹಾಡುಗಳು ಎಲ್ಲೆಡೆ ಮೆಚ್ಚುಗೆ ಪಡೆದಿವೆ.

ಇನ್ನು, ಶ್ರೀಷ ಅವರ ಕ್ಯಾಮೆರಾ ಕೈಚಳಕ ಸಿನಿಮಾದ ಹೈಲೆಟ್‌ಗಳಲ್ಲೊಂದು.  ದೀಪು ಎಸ್‌.ಕುಮಾರ್‌ ಸಂಕಲನ ಮಾಡಿದ್ದಾರೆ. ಇಲ್ಲಿರುವ ಐದು ಕಥೆಗಳಲ್ಲೂ ಹೊಸ ವರ್ಷದ ಕುರಿತು ಇರುವುದರಿಂದ ಚಿತ್ರಕ್ಕೆ “ಹ್ಯಾಪಿ ನ್ಯೂ ಇಯರ್‌’ ಶೀರ್ಷಿಕೆ ಸೂಕ್ತವೆನಿಸಿ ಅದನ್ನೇ ಅಂತಿಮವಾಗಿಸಲಾಯಿತು ಎಂದು ವಿವರ ಕೊಡುವ ಪಾಟೀಲರು, ನನ್ನ ಭಾಗದ ಚಿತ್ರೀಕರಣವನ್ನು ಹಿರೇಕೆರೂರಿನಲ್ಲಿ ಸುಮಾರು 10 ದಿನಗಳ ಕಾಲ ಚಿತ್ರೀಕರಿಸಲಾಗಿದೆ.

ಇಲ್ಲಿ ಐದು ಕಥೆಗಳು, ಐವರು ಹೀರೋಗಳಿದ್ದರೂ, ಅವರ್ಯಾರಿಗೂ ಸಂಬಂಧವಿರುವುದಿಲ್ಲ. ಒಂದೊಂದು ಕಥೆಗೆ ಇನ್ನೊಂದು ಕಥೆ ಲಿಂಕ್‌ ಆಗುವುದಿಲ್ಲ. ಧನಂಜಯ್‌ಗೆ ಶ್ರುತಿ ಹರಿಹರನ್‌ ಜೋಡಿಯಾದರೆ, ವಿಜಯ್‌ ರಾಘವೇಂದ್ರಗೆ ಸೋನು ಗೌಡ ನಾಯಕಿಯಾಗಿದ್ದಾರೆ. ನನಗೆ ಮಾರ್ಟಿನ್‌ ರೀಟಾ ನಾಯಕಿಯಾಗಿದ್ದಾರೆ. ದಿಗಂತ್‌ಗೆ ಸೃಷ್ಠಿಪಾಟೀಲ್‌ ಜೋಡಿಯಾಗಿದ್ದಾರೆ. ಸಾಯಿಕುಮಾರ್‌ ಜತೆ ರಾಶ್ರೀ ಪೊನ್ನಪ್ಪ ಇದ್ದಾರೆ ಎಂದು ಹೇಳುತ್ತಾರೆ.

ನೋವು-ನಲಿವಿನ ಚಿತ್ತಾರ
ಇದು ಪನ್ನಗ ಅವರ ಮೊದಲ ಸಿನಿಮಾ. ಹಾಗಾಗಿ, ನಾನು ಅವರಿಗೆ ಸಂಪೂರ್ಣ ಸ್ವತಂತ್ರ ನೀಡಿದ್ದೆ. ಈಗಿನ ಟ್ರೆಂಡ್‌ಗೆ ತಕ್ಕಂತೆಯೇ ಅವರು ಸಿನಿಮಾ ಮಾಡಿದ್ದಾರೆ. ಸುಮಾರು 50 ದಿನಗಳ ಕಾಲ, ಸಿನಿಮಾವನ್ನು ನಾನು ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ ಮಾಡಿದ್ದಾರೆ. ಥ್ರಿಲ್ಲರ್‌ ಮಂಜು ಚಿತ್ರದಲ್ಲಿ ಎರಡು ಅದ್ಭುತ ಫೈಟ್‌ ಮಾಡಿಕೊಟ್ಟಿದ್ದಾರೆ. ವಾಸುಕಿ ವೈಭವ್‌, ರಾಘವೇಂದ್ರ ಕಾಮತ್‌, ಅವಿನಾಶ್‌ ಇತರರು ಹಾಡು ಬರೆದಿದ್ದಾರೆ.

ಆಗ ಕೆಲಸ ಮಾಡಿದ ನಿರ್ದೇಶಕರ ಜತೆಗಿನ ಅನುಭವವೇ ಬೇರೆ, ಈಗ ಕಾಲ ಬದಲಾಗಿದೆ. ಹೊಸಬರ ಜತೆ ಕೆಲಸ ಮಾಡಿದ್ದು ಮರೆಯದ ಅನುಭವ. ಪನ್ನಗ ಬುದ್ಧಿವಂತ. ಅವರ ಕೆಲಸ ನೋಡಿದಾಗ, ನನ್ನ ಸಹೋದರ ಅಶೋಕ್‌ ಪಾಟೀಲ್‌ ನೆನಪಾದರು. ತುಂಬಾ ಜಾಣ್ಮೆಯಿಂದ ಎಲ್ಲವನ್ನೂ ಮಾಡುತ್ತಾರೆ. ಇನ್ನು, ಸಿನಿಮಾ ಬಗ್ಗೆ ಹೇಳುವುದಾದರೆ, ಇದು ಎಲ್ಲಾ ವರ್ಗಕ್ಕೂ ಸೇರುವ ಚಿತ್ರ. ಇಲ್ಲಿ ಯಾರು ಖಳನಟರಿಲ್ಲ. ಪರಿಸ್ಥಿತಿಗಳೇ ಖಳನಟರು.

ದಿಗಂತ್‌ ಚಿತ್ರದಲ್ಲಿ ಸಾಫ್ಟ್ವೇರ್‌ ಎಂಜಿನಿಯರ್‌ ಪಾತ್ರ ಮಾಡಿದ್ದಾರೆ. ಅವರು ಟ್ರಾವೆಲ್‌ ಮಾಡುವುದೇ ಗುರಿ. ಇನ್ನು, ಸೃಷ್ಠಿ ಕೂಡ ಅಷ್ಠೆà. ಆಕೆಯೂ ಟ್ರಾವೆಲ್ಲರ್‌. ಇಬ್ಬರ ಕಥೆ ಬ್ಯಾಂಕಾಕ್‌ನಲ್ಲಿ ನಡೆಯುತ್ತೆ. ಧನಂಜಯ್‌ ಆರ್‌ಜೆಯಾಗಿದ್ದಾರೆ. ಶ್ರುತಿಹರಿಹರನ್‌ ಇಲ್ಲಿ ವಿಶೇಷ ಪಾತ್ರ ನಿರ್ವಹಿಸಿದ್ದಾರೆ. ಧನಂಜಯ್‌ ಇಲ್ಲಿ ನಗಿಸುತ್ತಲೇ ನೋವನ್ನು ನುಂಗುವಂತಹ ಪಾತ್ರ ಮಾಡಿದ್ದಾರೆ. ಪೊಲೀಸ್‌ ಪೇದೆಯಾಗಿ ವಿಜಯ್‌ರಾಘವೇಂದ್ರ ಇದ್ದಾರೆ.

ಹೊಸ ವರ್ಷದಲ್ಲಿ ಎಲ್ಲರೂ ಎಂಜಾಯ್‌ ಮಾಡಿದರೆ, ಪೇದೆ ಹೊಸ ವರ್ಷದಂದು ಕೆಲಸ ಇರುತ್ತೆ. ಇನ್ನು ಸಾಯಿಕುಮಾರ್‌ ಒಂದು ಷೋ ರೂಮ್‌ನ ಮ್ಯಾನೆಜರ್‌, ಅವರಿಗೆ ಬಿಜಿನೆಸ್‌ ಬಗ್ಗೆಯೇ ಚಿಂತೆ, ಹೊಸ ಹೊರ್ಷಕ್ಕೆ ಬಿಜಿನೆಸ್‌ ಪ್ಲಾನ್‌ ಮಾಡೋ ಪಾತ್ರ ಅವರದು. ಇನ್ನು, ನನ್ನ ಸ್ಲಂ ಪಾತ್ರ ಒಂದು ರೀತಿ ಆ ವರ್ಷ ಆಚರಣೆ ಧಿಕ್ಕರಿಸುವಂಥದ್ದು. ಯಾಕೆ ಎಂಬುದನ್ನು ಸಿನಿಮಾದಲ್ಲೇ ನೋಡಬೇಕು ಎನ್ನುತ್ತಾರೆ ಪಾಟೀಲ್‌.  

ನನ್ನ ಪ್ರಕಾರ ಇದು ಒಂದು ವರ್ಗದ ಸಿನಿಮಾ ಅಲ್ಲ. ಸ್ಲಂ ಟು ಸಾಫ್ಟ್ವೇರ್‌ವರೆಗೂ ಸಾಗುವ ಮತ್ತು ತಲುಪುವ ಚಿತ್ರ. ಎಲ್ಲರ ಹೃದಯಕ್ಕೆ ಹತ್ತಿರವಾಗುವಂತಹ ಅಂಶಗಳು ಇಲ್ಲಿವೆ. ಇಲ್ಲಿರುವ ಪ್ರತಿಯೊಂದ ಕಥೆ ಕೂಡ ನನ್ನದೇ ಕಥೆ ಎನಿಸುವಷ್ಟರ ಮಟ್ಟಿಗೆ ಆಪ್ತವಾಗುತ್ತದೆ ಈ ಸಿನಿಮಾ ಎನ್ನುವ ಪಾಟೀಲರು, “ಕೌರವ’ ಚಿತ್ರದಂತೆಯೇ ಈ ಸಿನಿಮಾ ಕೂಡ ಫೀಲ್‌ ಆಗುತ್ತಿದೆ. ರಿಲೀಸ್‌ ಮುನ್ನವೇ ಓವರ್‌ಸೀಸ್‌ ರೈಟ್ಸ್‌ ಸೇಲ್‌ ಆಗಿದೆ ಎನ್ನುತ್ತಾರೆ ಅವರು.

ಚಾರ್ವಿ ಮತ್ತು ಕನಸು…
“ಇಲ್ಲಿ ಪ್ರತಿಯೊಂದು ಪಾತ್ರಕ್ಕೂ ಪ್ರಾಮುಖ್ಯತೆ ಕೊಡಲಾಗಿದೆ. ಅವರವರ ಪಾತ್ರಕ್ಕೆ ಅವರೇ ನಾಯಕ ಅವರೇ ನಾಯಕಿ. ನಾನು ಮೊದಲು ಈ ಚಿತ್ರ 
ಒಪ್ಪಲು ಕಾರಣ, ಕಥೆ, ಪಾತ್ರ ಮತ್ತು ನಿರ್ದೇಶಕ ಪನ್ನಗ. ಇಲ್ಲಿ ಐದು ಕಥೆ ಇರುವ ಒಂದು ಸಿನಿಮಾ ಇದೆ. ಒಂದು ಟಿಕೆಟ್‌ ಪಡೆದರೆ, ಐದು ಕಥೆ,ಐದು ಸಿನಿಮಾ ನೋಡಿದ ಅನುಭವ ಆಗುತ್ತೆ. ರೊಮ್ಯಾಂಟಿಕ್‌ ಕಾಮಿಡಿ ಜಾನರ್‌ನಲ್ಲಿ ಸಾಗುವ ಈ ಸಿನಿಮಾದಲ್ಲಿ ಅಷ್ಟೇ ಎಮೋಷನ್ಸ್‌, ಸೆಂಟಿಮೆಂಟ್‌ ಕೂಡ ಇದೆ.

ನಾನಿಲ್ಲಿ ಚಾರ್ವಿ ಎಂಬ ಪಾತ್ರ ಮಾಡಿದ್ದೇನೆ. ಅದೊಂದು ರೋಗಿಯ ಪಾತ್ರ. ಎಲ್ಲವೂ ಬೆಡ್‌ನ‌ಲ್ಲೇ ನಡೆಯುತ್ತೆ. ಅಂಥದ್ದೊಂದು ಪಾತ್ರ ಮಾಡಿಸಿದ್ದಾರೆ ನಿರ್ದೇಶಕರು. ಇಲ್ಲಿ ನನ್ನೊಬ್ಬಳ ಪಾತ್ರವಷ್ಟೇ ಅಲ್ಲ, ಬರು ಎಲ್ಲರ ಪಾತ್ರಕ್ಕೂ ಅದರದೇ ಆದ ವಿಶೇಷತೆ ಇದೆ. ನಾನು ಧನಂಜಯ್‌ ಜೋಡಿಯಾಗಿದ್ದೇನೆ. “ರಾಟೆ’ ಬಳಿಕ ಇಂಟ್ರೆಸ್ಟಿಂಗ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇವೆ. ಮೊದಲೇ ಹೇಳಿದಂತೆ, ಒಂದು ಭಯಾನಕ ಖಾಯಿಲೆಯಿಂದ ಬಳಲುವ ಪಾತ್ರ ನನ್ನದು.

ಅದಕ್ಕೆ ಮುಖ, ಕಣ್ಣು ಮತ್ತು ಮಾತು ಇದಷ್ಟೇ ಮುಖ್ಯ. ಅದರಲ್ಲೇ ನಟನೆ ಮಾಡಬೇಕಿತ್ತು. ಅದು ಚಾಲೆಂಜಿಂಗ್‌ ಆಗಿತ್ತು. ಎಲ್ಲರ ಸಹಕರಾ, ಪ್ರೋತ್ಸಾಹದಿಂದ ಅದು ಸಾಧ್ಯವಾಗಿದೆ. ಇನ್ನು, ರೋಗಿ ಅಂದಮೇಲೆ, ರೋಗಿ ಥರಾನೇ ಕಾಣಸಬೇಕು. ಹಾಗಾಗಿ , ಇಲ್ಲಿ ಮೇಕಪ್‌ ಇಲ್ಲದೆ ನಟಿಸಿದ್ದೇನೆ. ಎಷ್ಟು ಕೆಟ್ಟದ್ದಾಗಿ ಕಾಣಬೇಕೋ ಅಷ್ಟು ಕೆಟ್ಟದ್ದಾಗಿ ರೋಗಿ ಅನಿಸುವಷ್ಟರ ಮಟ್ಟಿಗೆ ಕಾಣಿಸಿಕೊಂಡಿದ್ದೇನೆ’ ಎನ್ನುತ್ತಾರೆ ಶ್ರುತಿ ಹರಿಹರನ್‌.

Advertisement

Udayavani is now on Telegram. Click here to join our channel and stay updated with the latest news.

Next