Advertisement

ಗಡಿನಾಡಿನ ನುಡಿತೇರಿಗೆ ಕ್ಷಣಗಣನೆ

10:41 AM Feb 06, 2020 | Lakshmi GovindaRaj |

ಕಲಬುರಗಿ: 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನೃಪತುಂಗ-ಬಸವಾದಿ ಶರಣರ ನಾಡು, ಕಲಬುರಗಿ ಸಜ್ಜಾಗಿದೆ. ಶರಣರು, ಸೂಫಿಸಂತರಂತಹ ಅನು ಭಾವಿಗಳು ಕಟ್ಟಿದ ಕಲಬುರಗಿಯೆಂಬ ಅನುಭವ ಮಂಟಪದಲ್ಲಿ ಕನ್ನಡದ ಸಂತರು, ಕನ್ನಡದ ಮಕ್ಕಳು ಸೇರಿ ಕನ್ನಡದ ವಚನವನ್ನು ಹಾಡಲಿದ್ದಾರೆ.

Advertisement

ಮೂರು ದಿನಗಳ ನುಡಿಕಲ್ಯಾಣಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬುಧವಾರ ಬೆಳಗ್ಗೆ ಉದ್ಘಾಟನೆಯ ಶಂಖನಾದ ಮಾಡಲಿ ದ್ದಾರೆ. ಇಡೀ ಕಲಬುರಗಿ ನಗರವೇ ತನ್ನ ಕುಡಿಗಳ ಆಗಮನಕ್ಕೆ ಭರಪೂರ ನಿರೀಕ್ಷೆಯ ಕಣ್ಣುಗಳಿಂದ ಕಾಯುತ್ತಿದೆ. ಕನ್ನಡ ಸಾಹಿತಿಗಳಾಗಿ ರೂಪಾಂತರಗೊಂಡಿರುವ ಸಂತರ ಒಳನೋಟಗಳಿಗಾಗಿ ಕಾತರಿಸಿದೆ.

ಸಿದ್ಧತೆ ಹೇಗಿದೆ?: ಸಮ್ಮೇಳನಾಧ್ಯಕ್ಷ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ ಅವರ ಮೆರವಣಿಗೆ ಹೊರಡುವ ಡಾ.ಎಸ್‌.ಎಂ.ಪಂಡಿತ ರಂಗಮಂದಿರದಿಂದ, ಸಮ್ಮೇಳನದ ಸ್ಥಳ ಗುಲ್ಬರ್ಗ ವಿವಿ ಆವರಣದವರೆಗಿನ ಮಾರ್ಗದುದ್ದಕ್ಕೂ ಹಸಿರು ತೋರಣ, ಕನ್ನಡಧ್ವಜಗಳು ಬೀಸುತ್ತಾ ತಣ್ಣೆಳಲನ್ನು ಸುರಿಯುತ್ತಿವೆ. 6 ಕಿ.ಮೀ. ಉದ್ದದ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ 5,000 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.

60 ಕಲಾ ತಂಡಗಳು ಜತೆಗೂಡಲಿವೆ. ವಿವಿ ಹಾಗೂ ವಿವಿಧ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಸ್ವಯಂ ಸೇವಕ ರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಸಿಹಿತಿನಿಸುಗಳು, ರೊಟ್ಟಿ, ಹಿಂಡಿ ಈಗಾಗಲೇ ಸಿದ್ಧವಾಗಿದೆ. ಮಳಿಗೆಗಳೆಲ್ಲ ಸಿದ್ಧವಾಗಿ ನಿಂತಿವೆ. ರಾಜ್ಯದ ಬೇರೆ-ಬೇರೆ ಭಾಗಗಳಿಂದ ಮಂಗಳವಾರದಿಂದಲೇ ಜನ ಬರಲು ಆರಂಭಿಸಿದ್ದಾರೆ. ಬುಧವಾರ ಕಲಬುರಗಿ ತುಂಬಿ ತುಳುಕಾಡಲಿದೆ.

ವೇದಿಕೆ ಝಗಮಗ: ಕಲ್ಯಾಣ ಕರ್ನಾಟಕದ ಹೆಬ್ಟಾಗಿಲು ಕಲಬುರಗಿಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದ ವೇದಿಕೆಯನ್ನು ಅತ್ಯಾಕರ್ಷಕವಾಗಿ ಸಿದ್ಧಪಡಿಸಲಾಗಿದೆ. ನೆಲದ ಸೊಗಡು ಹೊಂದಿರುವ ಸ್ಮಾರಕಗಳೊಂದಿಗೆ ಭವ್ಯವಾಗಿ ನಿರ್ಮಿಸಲಾಗಿದೆ. ಮಳಖೇಡದ ಕೋಟೆ, ಹಳ್ಳಿಗಳ ಮನೆಯ ತಲೆಬಾಗಿಲು, ಕವಿರಾಜ ಮಾರ್ಗ ಗ್ರಂಥದ ಪ್ರತಿಕೃತಿ, ಶಿಲಾಶಾಸನ ಒಳಗೊಂಡ ವೇದಿಕೆ ಕಣ್ಮನ ಸೆಳೆಯುತ್ತಿದೆ.

Advertisement

ಅಧ್ಯಕ್ಷರಿಗೆ ಅದ್ಧೂರಿ ಸ್ವಾಗತ: ಎಂದಿನಂತೆ ಈ ಬಾರಿಯೂ ಸಮ್ಮೇಳನಾಧ್ಯಕ್ಷರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಈ ಬಾರಿಯ ಅಧ್ಯಕ್ಷ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ ಅವರು ಮಂಗಳವಾರ ಬೆಳಗ್ಗೆ ರೈಲಿನ ಮೂಲಕ ನಗರಕ್ಕೆ ಬಂದಿಳಿಯುತ್ತಿದ್ದಂತೆ ಆತ್ಮೀಯ ಸ್ವಾಗತ ಕೋರಲಾಯಿತು. ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ, ಜಿಲ್ಲಾ ಪಂಚಾಯಿತಿ ಸಿಇಓ ಡಾ.ಪಿ.ರಾಜಾ ಸೇರಿದಂತೆ ಕಸಾಪ ಪದಾಧಿಕಾರಿಗಳು, ಸಾಹಿತಿಗಳು ಹಾಜರಿದ್ದರು.

ವಿಶೇಷ ವಿಮಾನದಲ್ಲಿ ಮುಖ್ಯಮಂತ್ರಿ ಆಗಮನ: ಸಚಿವ ಸಂಪುಟ ವಿಸ್ತರಣೆಯ ತಲೆಬಿಸಿಯಲ್ಲಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬುಧವಾರ ಬೆಳಗ್ಗೆ 11.30ಕ್ಕೆ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 10ಕ್ಕೆ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಇಲ್ಲಿಗೆ ಆಗಮಿಸಿ, ಉದ್ಘಾಟನೆ ನೆರವೇರಿಸಲಿದ್ದಾರೆ. ಮರಳಿ ವಿಮಾನದ ಮೂಲಕ ವಾಪಸ್‌ ಬೆಂಗಳೂರಿಗೆ ತೆರಳಲಿದ್ದಾರೆ. ಸ್ವಾಗತ ಸಮಿತಿ ಅಧ್ಯಕ್ಷರಾಗಿರುವ ಡಿಸಿಎಂ ಗೋವಿಂದ ಕಾರಜೋಳ ಸಹ ಮುಖ್ಯಮಂತ್ರಿಗಳನ್ನು ಹಿಂಬಾಲಿಸಲಿದ್ದಾರೆ.

ಅನುಭವ ಮಂಟಪ ಕಲಾಕೃತಿ ಆಕರ್ಷಣೆ: ಸಮ್ಮೇಳನದ ಮುಖ್ಯದ್ವಾರ ಪ್ರವೇಶಿಸುತ್ತಿದ್ದಂತೆ ಅನುಭವ ಮಂಟಪ ಕಲಾಕೃತಿ ಗ‌ಮನ ಸೆಳೆಯದೇ ಇರದು. ಪ್ರವೇಶದ್ವಾರದ ಎಡಭಾಗದಲ್ಲಿ ಖ್ಯಾತ ಕಲಾವಿದ ನಾಡೋಜ ಜೆ.ಎಸ್‌.ಖಂಡೇರಾವ್‌ ಇದನ್ನು ರಚಿಸಿದ್ದಾರೆ. ಹನ್ನೆರಡನೇ ಶತಮಾನದಲ್ಲಿ ವಿಶ್ವದಲ್ಲೇ ಮೊದಲ ಬಾರಿ ನಡೆದ ಬಸವಾದಿ ಶರಣರ ಅನುಭವ ಮಂಟಪದ ಪ್ರತಿರೂಪವಿದು. ಅಪರೂಪದ ಈ ಕಲಾಕೃತಿ ಮಾಸಾಂತ್ಯದೊಳಗೆ ಸಂಸತ್ತಿನಲ್ಲಿ ಅನಾವರಣಗೊಳ್ಳಲಿದೆ. ಕಲಾಕೃತಿಯ ಅನಾವರಣಕ್ಕೆ ಲೋಕಸಭಾ ಸ್ಪೀಕರ್‌ ಕೂಡಾ ಅನುಮತಿ ನೀಡಿದ್ದಾರೆ.

ಬಸವ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪುಸ್ತಕ ಲೋಕಾರ್ಪಣೆ
ಮೈಸೂರು: ಕಲಬುರಗಿಯಲ್ಲಿ ಬುಧವಾರದಿಂದ ನಡೆಯಲಿರುವ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ ಅವರ ಬದುಕು ಬರಹ ಕುರಿತು ಮೈಸೂರಿನ ಸಾಹಿತಿ ಹಾಗೂ ಸಂಘಟಕ ರಂಗನಾಥ್‌ ಮೈಸೂರು ಅವರು ರಚಿಸಿರುವ ಸಾಹಿತ್ಯ ಸಿಂಧೂರ ಪುಸ್ತಕ ಮಂಗಳವಾರ ಲೋಕಾರ್ಪಣೆಗೊಂಡಿತು.

ಕೊಡಗಿನ ಪತ್ರಕರ್ತ ರಫೀಕ್‌ ತೋಚಮಕೇರಿಯವರು ಪುಸ್ತಕ ಬಿಡುಗಡೆ ಮಾಡಿದರು. ಮೈಸೂರು ನಿಲ್ದಾಣ ತೊರೆದು ಬೆಂಗಳೂರಿನತ್ತ ಹೊರಟ ಬಸವ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪುಸ್ತಕ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕೃತಿಕಾರ ರಂಗನಾಥ್‌ ಮೈಸೂರು, ಹಿರಿಯ ಪತ್ರಕರ್ತ ಟಿ.ಎಲ್.ಶ್ರೀನಿವಾಸ್‌ ಸೇರಿದಂತೆ ರೈಲು ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ನೂರಾರು ಪ್ರಯಾಣಿಕರು ಉಪಸ್ಥಿತರಿದ್ದರು. ಬಳಿಕ ರಂಗನಾಥ್‌ ಅವರು, ರೈಲಿನ ಇತರ ಬೋಗಿಗಳಿಗೆ ತೆರಳಿ ಪುಸ್ತಕ ಮಾರಾಟ ಮಾಡಿದರು. ಆಸಕ್ತ ಓದುಗರು ಪುಸ್ತಕ ಕೊಂಡು ಪ್ರೋತ್ಸಾಹಿಸಿದರು.

ಸಮ್ಮೇಳನಕ್ಕೆ ಕುಟುಂಬ ಸಮೇತ ಬನ್ನಿ. ಮಕ್ಕಳನ್ನೂ ಕರೆ ತನ್ನಿ. ಬೆಂಗಳೂರಿನ ಕಲಾಮಂದಿರಗಳಲ್ಲಿ ಮಕ್ಕಳನ್ನು ಬಿಡುವುದಿಲ್ಲ. ಇಲ್ಲಿ ಅಂತಹ ತೊಂದರೆಯಿಲ್ಲ. ಮಕ್ಕಳು ಬರಲಿ. ಸಮ್ಮೇಳನ ಅರ್ಥ ಪೂರ್ಣವಾಗಿ ನಡೆ ಯತ್ತದೆ, ಯಶಸ್ವಿಯೂ ಆಗುತ್ತದೆ.
-ಡಾ.ಎಚ್‌.ಎಸ್‌.ವೆಂಕಟೇಶ್‌ ಮೂರ್ತಿ, ಸಮ್ಮೇಳನಾಧ್ಯಕ್ಷ

* ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next