Advertisement
ಎರಡೂ ಪಕ್ಷಗಳ ನಾಯಕರ ವಾಕ್ಸಮರದ ನಡುವೆ ಚುನಾವಣೆಗೆ ಕೌಂಟ್‌ಡೌನ್ ಶುರುವಾಗಿದ್ದು, ಇನ್ನುಳಿದ 5 ದಿನಗಳು ಎರಡೂ ಪಕ್ಷಗಳಿಗೆ ನಿರ್ಣಾಯಕವಾಗಿವೆ. ಬಿಜೆಪಿಯ ಶಿವರಾಜ ಸಜ್ಜನರ, ಕಾಂಗ್ರೆಸ್‌ನಿಂದ ಶ್ರೀನಿವಾಸ ಮಾನೆ ಅಬ್ಬರದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಎರಡೂ ಪಕ್ಷಗಳ ನಾಯಕರು ಕ್ಷೇತ್ರದಲ್ಲೇ ಠಿಕಾಣಿ ಹೂಡಿ ತಮ್ಮ ಪಕ್ಷದ ಅಭ್ಯರ್ಥಿ ಪರ ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
Related Articles
Advertisement
ನಾಮಪತ್ರ ಸಲ್ಲಿಕೆ ದಿನದಿಂದಲೇ ಹಾನಗಲ್ಲ ಕ್ಷೇತ್ರ ರಾಜಕೀಯ ನಾಯಕರ ವಾಕ್ಸಮರಕ್ಕೆ ಸಾಕ್ಷಿಯಾಗುತ್ತಾ ಬಂದಿದೆ. ಸಿದ್ದರಾಮಯ್ಯ, ಡಿಕೆಶಿ ಅವರು ಕ್ಷೇತ್ರದಲ್ಲಿ ಈಗಾಗಲೇ ಬೀಡು ಬಿಟ್ಟು ಪ್ರಚಾರ ನಡೆಸಿ ಬಿಜೆಪಿ ವಿರುದ್ಧ ಮುಗಿಬಿದ್ದಿದ್ದಾರೆ. ಸಿ.ಎಂ. ಬಸವರಾಜ ಬೊಮ್ಮಾಯಿ ಅವರೂ ಕಾಂಗ್ರೆಸ್ ನಾಯಕರ ಆರೋಪಕ್ಕೆ ಸೆಡ್ಡು ಹೊಡೆದು ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದೆ ತೆರೆದಿಟ್ಟಿದ್ದಾರೆ. ಬಹಿರಂಗ ಪ್ರಚಾರಕ್ಕೆ ಇನ್ನೂ ಮೂರು ದಿನ ಬಾಕಿ ಇದ್ದು, ಚುನಾವಣಾ ಕಣ ರಂಗೇರಿದ್ದರಿಂದ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಹೊಸ ಹುರುಪು ಬಂದಂತಾಗಿದೆ.
ಇದನ್ನೂ ಓದಿ: ಸಕಲೇಶಪುರ: ಪಾಕಿಸ್ತಾನದ ವಿರುದ್ಧ ಸೋತ ಭಾರತ; ಅಭಿಮಾನಿಯಿಂದ ಟಿವಿ ಒಡೆದು ಹಾಕಿ ಆಕ್ರೋಶ
ರಂಗೇರಿದ ಚುನಾವಣಾ ಕಣ
ಈಗಾಗಲೇ ಎರಡು ಸುತ್ತಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ವಾಕ್ಸಮರವನ್ನು ಕ್ಷೇತ್ರದ ಮತದಾರರು ನೋಡಿದ್ದಾರೆ. ಬಹಿರಂಗ ಪ್ರಚಾರಕ್ಕೆ ಇನ್ನೂ ಮೂರು ದಿನ ಬಾಕಿ ಇರುವ ಹಿನ್ನೆಲೆ ಸೋಮವಾರದಿಂದ ಮತ್ತೊಂದು ಸುತ್ತಿನಲ್ಲಿ ಮೂರೂ ಪಕ್ಷಗಳ ನಾಯಕರು ಪ್ರಚಾರದಲ್ಲಿ ತೊಡಗಿಕೊಳ್ಳಲಿದ್ದಾರೆ. ಸಿಎಂ ಬೊಮ್ಮಾಯಿ ಸೇರಿದಂತೆ ಹತ್ತಾರು ಸಚಿವರು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲು ಆಗಮಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕರೂ ಪ್ರಚಾರ ನಡೆಸಲಿದ್ದಾರೆ. ಅ.27ರಂದು ಕಾಂಗ್ರೆಸ್ ಬೃಹತ್ ಸಮಾವೇಶ ಆಯೋಜಿಸಲು ಸಿದ್ಧತೆಯಲ್ಲಿ ತೊಡಗಿದ್ದು, ಕಾಂಗ್ರೆಸ್‌ನ ಘಟಾನುಘಟಿ ನಾಯಕರಿಗೆ ಈ ಸಮಾವೇಶದ ವೇದಿಕೆ ಸಾಕ್ಷಿಯಾಗಲಿದೆ. ಇನ್ನು ಜೆಡಿಎಸ್ ಪಕ್ಷ ಅಭ್ಯರ್ಥಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದು, ಶನಿವಾರ ಕ್ಷೇತ್ರದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರೂ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿ ಕಾಂಗ್ರೆಸ್-ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು. ಇದರೊಂದಿಗೆ ಮೂರೂ ಪಕ್ಷಗಳ ನಾಯಕರ ವಾಕ್ಸಮರಕ್ಕೆ ಹಾನಗಲ್ಲ ಕ್ಷೇತ್ರದ ಜನತೆ ಸಾಕ್ಷಿಯಾದಂತಾಗಿದೆ.
ದಿ.ಸಿಎಂ.ಉದಾಸಿ ಅವರು ಕಳೆದ ಮೂರು ವರ್ಷದಲ್ಲಿ 1530ಕೋಟಿ ಗೂ. ಹೆಚ್ಚು ಹಣವನ್ನು ತಾಲೂಕಿಗೆ ತಂದಿದ್ದಾರೆ. 600ಕೋಟಿಗೂ ಹೆಚ್ಚು ಹಣವನ್ನು ಏತನೀರಾವರಿ ಯೋಜನೆಗೆ ತಂದಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸಬೇಕಾದರೆ ನಮ್ಮ ಪಕ್ಷದ ಶಾಸಕರು ಬೇಕಾಗುತ್ತೆ. ಹೀಗಾಗಿ ನಮ್ಮವರೇ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೈಬಲಪಡಿಸಲು ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರಿಗೆ ಮತ ನೀಡಬೇಕು. -ಶಿವಕುಮಾರ ಉದಾಸಿ, ಸಂಸದರು
ಹಾನಗಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಶ್ರೀನಿವಾಸ ಮಾನೆ ಅವರು ಕಳೆದ ಮೂರು ವರ್ಷಗಳಿಂದ ಕ್ಷೇತ್ರದಲ್ಲಿ ಇದ್ದುಕೊಂಡು ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಕ್ಷೇತ್ರದಲ್ಲಿ ಪಕ್ಷದ ಹಿರಿಯ ಮುಖಂಡರು, ಪಕ್ಷದ ಶಾಸಕರು, ಮಾಜಿ ಶಾಸಕರು, ವೀಕ್ಷಕರು, ಹಾಗೂ ನಿಯೋಜಿತ ಉಸ್ತುವಾರಿಗಳು ಎಲ್ಲ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಚಾರ ಕೈಗೊಂಡು ಅವರ ಗೆಲುವಿವಾಗಿ ಶ್ರಮಿಸಲಾಗುತ್ತಿದೆ. ಹಾನಗಲ್ಲ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರ ಗೆಲುವು ಖಚಿತ. -ಸಲೀಂ ಅಹ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ.
-ವೀರೇಶ ಮಡ್ಲೂರ