Advertisement

PDO ಗಳ ವರ್ಗಾವಣೆಗೂ ಕೌನ್ಸೆಲಿಂಗ್‌: ಪ್ರಿಯಾಂಕ್‌ ಖರ್ಗೆ

10:48 PM Jul 13, 2023 | Team Udayavani |

ಬೆಂಗಳೂರು: ಗ್ರಾಮ ಪಂಚಾಯತ್‌ ಆಡಳಿತದಲ್ಲಿ ಪಾರದರ್ಶಕತೆ ಜತೆಗೆ ಹೈಟೆಕ್‌ ಸ್ಪರ್ಶ ನೀಡಲು ಮುಂದಾಗಿರುವ ಸರಕಾರ, ಇದರ ಭಾಗವಾಗಿ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳ ವರ್ಗಾವಣೆಗೆ ಕೌನ್ಸೆಲಿಂಗ್‌ ವ್ಯವಸ್ಥೆಯನ್ನು ಪರಿಚಯಿಸಲು ತೀರ್ಮಾನಿಸಿದೆ.

Advertisement

ಪಂಚತಂತ್ರ-2 ತಂತ್ರಾಂಶದ ಮೂಲಕ ಪಂಚಾಯತ್‌ ವ್ಯವಸ್ಥೆಯನ್ನು ಈ ವರ್ಷದಲ್ಲಿ ಸಬಲೀಕರಣ ಮತ್ತು ಸರಳಗೊಳಿಸಲು ಉದ್ದೇಶಿಸಿದ್ದು, ವಿಶೇಷವಾಗಿ ಪಿಡಿಒಗಳನ್ನು ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ. 2-3 ತಿಂಗಳಲ್ಲಿ ಇದರ ಪ್ರಯೋಗ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಅವರು ಗ್ರಾಮ ಪಂಚಾಯತ್‌ಗಳಲ್ಲಿ ದೈನಂದಿನ ಆಡಳಿತಾತ್ಮಕ ಸಮಸ್ಯೆಗಳು ಮತ್ತು ಪಂಚತಂತ್ರ ತಂತ್ರಾಂಶ ವ್ಯವಸ್ಥೆಯಲ್ಲಿರುವ ಲೋಪದೋಷಗಳ ಕುರಿತು ಪ್ರಸ್ತಾವಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮುಂದಿನ ವರ್ಷದಿಂದ ಕೌನ್ಸೆಲಿಂಗ್‌ ಮೂಲಕ ಪಿಡಿಒಗಳ ವರ್ಗಾವಣೆ ಆಗಲಿದೆ. ಇದು ಯಶಸ್ವಿಯಾದರೆ, ಉಳಿದ ಸಿಬಂದಿ ಮತ್ತು ಅಧಿಕಾರಿಗಳ ವರ್ಗಾವಣೆಯಲ್ಲೂ ಈ ವ್ಯವಸ್ಥೆ ಪರಿಚಯಿಸಲಾಗುವುದು. ಒಟ್ಟಾರೆ ಕೆಲವೇ ದಿನಗಳಲ್ಲಿ ಪಂಚತಂತ್ರ-2 ತಂತ್ರಾಂಶವು ಪಂಚಾಯತ್‌ ಮಟ್ಟದಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗ್ರಾ.ಪಂ.ಗಳ ಆಡಳಿತ ಹಾಗೂ ಅವುಗಳ ಕಾರ್ಯವೈಖರಿ ಮೇಲೆ ನಿಗಾ ವಹಿಸಲು ತಂತ್ರಜ್ಞಾನಗಳನ್ನು ಅಳವಡಿಸಲಾಗುತ್ತಿದೆ. ಅದಕ್ಕಾಗಿ ಪಂಚತಂತ್ರ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಇನ್ನೊಂದು ತಿಂಗಳಲ್ಲಿ ಪಂಚತಂತ್ರ 2.0 ತಂತ್ರಾಂಶ ಬಿಡುಗಡೆ ಆಗಲಿದೆ. ಇದರ ಮೂಲಕ ಗ್ರಾ.ಪಂ.ಗಳಲ್ಲಿ ವಸೂಲಿಯಾಗುತ್ತಿರುವ ತೆರಿಗೆ ಪ್ರಮಾಣ, ಸಿಬಂದಿ, ಅಧಿಕಾರಿಗಳ ಹಾಜರಾತಿ, ವೇತನ, ಗ್ರಾಮಸಭೆ, ಪ್ರಗತಿ ಪರಿಶೀಲನೆ ಸಭೆ, ಅವುಗಳಲ್ಲಿ ತೆಗೆದುಕೊಂಡ ನಿರ್ಣಗಳ ಮಾಹಿತಿ ಕ್ಷಣಾರ್ಧದಲ್ಲಿ ದೊರೆಯಲಿವೆ ಎಂದು ಮಾಹಿತಿ ನೀಡಿದರು.

ಪಿಡಿಒಗೆ ಅಧಿಕಾರ
ಗ್ರಾ.ಪಂ. ವ್ಯಾಪ್ತಿಯಲ್ಲೇ ಜನನ ಮತ್ತು ಮರಣ ಪ್ರಮಾಣಪತ್ರ ನೀಡುವ ಸಲುವಾಗಿ ಪಿಡಿಒಗಳಿಗೆ ಉಪ ನೋಂದಣಾಧಿಕಾರಿಗಳ ಅಧಿಕಾರ ನೀಡಲಾಗಿದೆ. ಈ ಕುರಿತಂತೆ ಜುಲೈ 7ರಂದು ಅಧಿಸೂಚನೆಯನ್ನೂ ಹೊರಡಿಸಲಾಗಿದೆ. ಜನನ ಮತ್ತು ಮರಣ ಪ್ರಮಾಣಪತ್ರ ನೀಡುವುದಕ್ಕೆ ಅರ್ಜಿ ಸಲ್ಲಿಸಿದ 30 ದಿನಗಳೊಳಗಾಗಿ ಪಿಡಿಒಗಳು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಬಳಿಕ ಆ ಅರ್ಜಿ ಗ್ರಾಮ ಲೆಕ್ಕಿಗರಿಗೆ ಹೋಗಲಿದೆ ಎಂದು ವಿವರಿಸಿದರು.

Advertisement

ಸ್ವರಾಜ್‌ ಕಾಯ್ದೆಗೆ 30 ವರ್ಷದ ಸಂಭ್ರಮ
ಪ್ರಜಾಪ್ರಭುತ್ವವನ್ನು ಬೇರು ಮಟ್ಟದಲ್ಲಿ ಸದೃಢಗೊಳಿಸುವ ಹಾಗೂ ಸ್ವತಂತ್ರ ಆಡಳಿತಕ್ಕೆ ನಾಂದಿಹಾಡಿದ ಪಂಚಾಯತ್‌ ರಾಜ್‌ ಕಾಯ್ದೆಗೆ ಈಗ 30 ವರ್ಷದ ಸಂಭ್ರಮ. ಈ ಸಂಭ್ರಮವನ್ನು ಆಚರಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಇಡೀ ವರ್ಷ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಲು ಉದ್ದೇಶಿಸಲಾಗಿದೆ ಎಂದು ಪ್ರಿಯಾಂಕ ಖರ್ಗೆ ಹೇಳಿದರು.

11 ಸಾವಿರ ಸಭೆಗಳಲ್ಲಿ 8 ಸಾವಿರ ರದ್ದು!
ಸ್ಥಳೀಯ ಸಮಸ್ಯೆಗಳು, ಯೋಜನೆಗಳ ಪ್ರಗತಿ ಪರಿಶೀಲನೆಗೆ ಪಂಚಾಯತ್‌ ಸದಸ್ಯರಿಗೆ ತೀವ್ರ ನಿರಾಸಕ್ತಿ. ಇದಕ್ಕೆ ಕೋರಂ ಇಲ್ಲದೆ ರದ್ದಾಗುತ್ತಿರುವ ಸಭೆಗಳೇ ಸಾಕ್ಷಿ. ಕಳೆದ ಒಂದು ತಿಂಗಳಲ್ಲಿ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ)ಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಟ್ರ್ಯಾಕ್‌ ಮಾಡಿದೆ. ಸಭೆ ಕರೆದಿದ್ದು 11 ಸಾವಿರ. ಆದರೆ, ಆ ಪೈಕಿ ಶೇ. 70ರಷ್ಟು ಅಂದರೆ 7,700ಕ್ಕೂ ಅಧಿಕ ಸಭೆಗಳು ಕೋರಂ ಇಲ್ಲದ ಕಾರಣ ರದ್ದಾಗಿವೆ ಎಂದು ಸಚಿವ ಖರ್ಗೆ ಬೇಸರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next