Advertisement
ಕಳೆದ ತಿಂಗಳು ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಕಾಟನ್ ಮಾರ್ಕೆಟ್ ಆಸ್ತಿಯನ್ನು ಲೀಜ್ ದಾರರಿಗೆ ಮಾರಾಟ ಮಾಡಲು ನಗರಸಭೆ ಠರಾವು ಕೈಗೊಳ್ಳಲಾಗಿತ್ತು. ಆಗ ಕಾಂಗ್ರೆಸ್‌ನ ಹಾಜಿಸಾಬ ದಂಡಿನ ಸಹಿತ ಕೆಲ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಸೋಮವಾರ ನಡೆದ ಸಭೆಯಲ್ಲಿ ಹಿಂದಿನ ಸಭೆಯ ನಡಾವಳಿ ಕುರಿತು ಚರ್ಚೆಯ ವೇಳೆ ಇದೇ ವಿಷಯದ ಕುರಿತು ಠರಾವು ಅನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿದೆ ಎಂದುನಮೂದಿಸಲಾಗಿತ್ತು.
Related Articles
Advertisement
ಈ ವೇಳೆ ಹಾಜಿಸಾಬ ದಂಡಿನ ಮತ್ತು ಶಾಸಕರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು. ಶಾಸಕರು, ಸದಸ್ಯ ದಂಡಿನ ಅವರಿಗೆ ಏರಿದ ಧ್ವನಿಯಲ್ಲಿ ಮಾತನಾಡಿ, ಇಲ್ಲಿ ಜಾಸ್ತಿ ಮಾತನಾಡಬೇಡ ಎಂದರು. ಮಧ್ಯ ಪ್ರವೇಶಿಸಿದ ಕಾಂಗ್ರೆಸ್‌ನ ಇನ್ನೋರ್ವ ಹಿರಿಯ ಸದಸ್ಯ ಚನ್ನವೀರ ಅಂಗಡಿ, ನೀವು ಶಾಸಕರು, ನಾವು ನಗರಸಭೆ ಸದಸ್ಯರು. ನಮಗೂ ಗೌರವವಿದೆ.
ಸದಸ್ಯರೆಂದರೆ ಬಾಯಿಗೆ ಬಂದಂತೆ ಮಾತನಾಡಬೇಡಿ ಎಂದರು. ಆಗ ಕಾಂಗ್ರೆಸ್ ಸದಸ್ಯರು, ಶಾಸಕರು ಹಾಗೂ ಬಿಜೆಪಿ ಸದಸ್ಯರ ಮಧ್ಯ ವಾಗ್ವಾದ ನಡೆಯಿತು. ತೀವ್ರ ವಾಗ್ವಾದ ನಡೆಯುತ್ತಿರುವಾಗ ವಿಧಾನಪರಿಷತ್ ಸದಸ್ಯರಾಗಿ, ಮೊದಲ ಬಾರಿಗೆ ನಗರಸಭೆ ಸಾಮಾನ್ಯ ಸಭೆಗೆ ಹಿರಿಯ ಮುಖಂಡ ಪಿ.ಎಚ್. ಪೂಜಾರ ಆಗಮಿಸಿದರು. ತೀವ್ರ ಗದ್ದಲ-ವಾಗ್ವಾದ ನಡೆದಿದ್ದ ಸಭೆಯಲ್ಲಿ ಸಂಪೂರ್ಣ ಶಾಂತ ವಾತಾವರಣ ಸೃಷ್ಟಿಯಾಯಿತು. ಬಳಿಕ ಈ ಗಲಾಟೆಗೆ ಏನು ಕಾರಣ ಎಂದು ಪಿ.ಎಚ್. ಪೂಜಾರ ಅವರು ಕೆಲ ಸದಸ್ಯರಿಂದ ಮಾಹಿತಿ ಪಡೆದುಕೊಂಡರು.
12.41 ಲಕ್ಷ ಉಳಿತಾಯ ಬಜೆಟ್: ಬಳಿಕ ನಗರಸಭೆಯು 2022-23 ನೇ ಸಾಲಿಗೆ 12.41 ಲಕ್ಷ ರೂ.ಗಳ ಉಳಿತಾಯ ಬಜೆಟ್ ಮಂಡಿಸಲಾಯಿತು. ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ ಅವರು, 85.03 ಕೋಟಿ ರೂ. ನಿರೀಕ್ಷಿತ ಆದಾಯಗಳು, 84.91 ಕೋಟಿ ರೂ. ನಿರೀಕ್ಷಿತ ವೆಚ್ಚಗಳೊಂದಿಗೆ ಈ ಬಾರಿ ನಗರಸಭೆ 12.41 ಲಕ್ಷ ರೂ.ಗಳ ಉಳಿತಾಯ ಬಜೆಟ್ ಮಂಡಿಸಿದರು. ಇದಕ್ಕೆ ಸಭೆ ಸರ್ವಾನುಮತದ ಒಪ್ಪಿಗೆ ಸೂಚಿಸಿತು.
ನಗರಸಭೆ ಉಪಾಧ್ಯಕ್ಷ ಬಸವರಾಜ ಅವರಾದಿ, ನೂತನ ಸಭಾಪತಿ ಅಂಬಾಜಿ ಜೋಶಿ, ನಗರಸಭೆ ಆಯುಕ್ತ ವಿ. ಮುನಿಶಾಮಪ್ಪ, ಸದಸ್ಯರಾದ ವಿ.ವಿ. ಶಿರಗಣ್ಣವರ, ಯಲ್ಲಪ್ಪ ನಾರಾಯಣಿ ಮುಂತಾದವರಿದ್ದರು.
ಸಭಾಪತಿಯಾಗಿ ಅಂಬಾಜಿ ಆಯ್ಕೆನಗರಸಭೆಗೆ ನೂತನ ಸಭಾಪತಿಯಾಗಿ ಸದಸ್ಯ ಅಂಬಾಜಿ ಜೋಶಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸದಸ್ಯ ಯಲ್ಲಪ್ಪ ನಾರಾಯಣಿ ಅವರು ಸದಸ್ಯ ಅಂಬಾಜಿ ಜೋಶಿ ಅವರ ಹೆಸರು ಸೂಚಿಸಿದರು. ಇದಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದರು.