Advertisement

ಕೋಸ್ಟಲ್‌ವುಡ್‌ ‘ಶತಮಾನ’ದ ಹೆಜ್ಜೆ ಗುರುತು

12:58 PM Nov 15, 2018 | |

99ರ ತುಳು ಸಿನೆಮಾ ಸದ್ಯ ಟಾಕೀಸ್‌ನಲ್ಲಿದೆ. ಮುಂದೆ ಬರುವ ಸಿನೆಮಾವೇ 100ನೇ ಸಿನೆಮಾ. ಈ ಹಿನ್ನೆಲೆಯಲ್ಲಿ ತುಳು ಸಿನೆಮಾ ಲೋಕದ ವಿಶೇಷತೆಗಳ ಬಗ್ಗೆ ಬೆಳಕು ಚೆಲ್ಲುವ ವಿಶೇಷ ವರದಿಯಿದು.

Advertisement

1913ರಲ್ಲಿ ‘ರಾಜಾ ಹರೀಶ್ಚಂದ್ರ’ ಮೂಕಿ ಸಿನೆಮಾ ಭಾರತೀಯ ಚಿತ್ರರಂಗದ ಮೊದಲ ಸಿನೆಮಾ ಎಂಬ ಹೆಗ್ಗಳಿಕೆ ಪಡೆದಿದ್ದರೆ, 1934ರಲ್ಲಿ ತೆರೆಕಂಡ ‘ಸತಿ ಸುಲೋಚನಾ’ ಕನ್ನಡದ ಮೊದಲ ಸಿನೆಮಾವಾಯಿತು. ಅದೇ ರೀತಿ 1971ರಲ್ಲಿ ಬಂದ ‘ಎನ್ನ ತಂಗಡಿ’ ಸಿನೆಮಾ ತುಳುವಿನ ಮೊದಲ ಸಿನೆಮಾವಾಯಿತು. ಅಲ್ಲಿಂದ ಇಲ್ಲಿಯವರೆಗೆ ಬರೋಬ್ಬರಿ 100 ಸಿನೆಮಾಗಳು ಕರಾವಳಿಯ ಬೆಳ್ಳಿ ಪರದೆಯಲ್ಲಿ ಮಿಂಚಿ ಇದೀಗ ಶತಮಾನೋತ್ಸವದ ಸಡಗರದಲ್ಲಿದೆ.

ಕರಾವಳಿ ಜನತೆಯ ಸಂಪರ್ಕ ಬೆಳೆಸಿಕೊಂಡ ಎಸ್‌.ಆರ್‌. ರಾಜನ್‌ ಅವರು ಮಂಗಳೂರಿನ ಪರಿಚಯಸ್ಥರೊಡಗೂಡಿ ಮಾಡಿದ ತುಳುವಿನ ಮೊದಲ ಸಿನೆಮಾವೇ ಎನ್ನತಂಗಡಿ. ವಿಶೇಷವೆಂದರೆ ಮೊದಲು ಶೂಟಿಂಗ್‌ ಆದ ಸಿನೆಮಾ ಇದಲ್ಲ. ಬದಲಾಗಿ, ದಾರೆದ ಬುಡೆದಿ ಮೊದಲು ಶೂಟಿಂಗ್‌ ಆದ ಸಿನೆಮಾ!

ಆನಂದ್‌ ಶೇಖರ್‌ ಹಾಗೂ ಸುಂದರ ಕರ್ಕೇರ ಅವರು ಎನ್ನತಂಗಡಿ ಸಿನೆಮಾ ನಿರ್ಮಾಣಕ್ಕೆ ಸಹಾಯ ಮಾಡಿದರು. ವರದನ್‌ ಅವರ ಛಾಯಾಗ್ರಹಣದಲ್ಲಿ 1970ರಲ್ಲಿ ಚಿತ್ರೀಕರಣ ಪ್ರಾರಂಭವಾಗಿ ಮಂಗಳೂರು ಹಾಗೂ ಉಳ್ಳಾಲದಲ್ಲಿ ಚಿತ್ರೀಕರಣವಾಗಿತ್ತು. ಕೆ.ಬಿ.ಭಂಡಾರಿಯವರ ಕಥೆಗೆ ರಾಜನ್‌ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದರು. ಟಿ.ಎ.ಮೋತಿ ಸಂಗೀತ ನೀಡಿದ್ದರು. 50,000 ರೂ.ವೆಚ್ಚದಲ್ಲಿ ಈ ಸಿನೆಮಾ ನಿರ್ಮಾಣವಾಗಿತ್ತು. ಟಿ.ಎ.ಶ್ರೀನಿವಾಸರು ಚಿತ್ರ ಭಾರತಿ ಹಂಚಿಕೆಯ ಮೂಲಕ ಬಿಡುಗಡೆ ಮಾಡಿದ್ದರು. ಆನಂದ್‌ ಶೇಖರ್‌, ಸೋಮಶೇಖರ ಪುತ್ರನ್‌, ಮಂಗಳೂರು ದಿಲೀಪ್‌, ಲೋಕಯ್ಯ ಶೆಟ್ಟಿ, ಪಂಡರಿಬಾಯಿ, ಕವಿತಾ ಮುಖ್ಯಭೂಮಿಕೆಯಲ್ಲಿದ್ದರು.

ತುಳುವಿನ ಎರಡನೇ ಚಿತ್ರವಾಗಿ ಚಿತ್ರೀಕರಣವಾಗಿದ್ದ ಎನ್ನ ತಂಗಡಿ ಬಳಿಕದ ದಿನದಲ್ಲಿ ಮೊದಲನೇ ಸಿನೆಮಾವಾಗಿ ಬಿಡುಗಡೆ ಭಾಗ್ಯ ಕಾಣುವಂತಾಯಿತು. ಹೀಗಾಗಿ ‘ದಾರೆದ ಬುಡೆದಿ’ ಸಿನೆಮಾ ತುಳುವಿನ ಪ್ರಥಮ ಚಿತ್ರೀಕರಣದ ತುಳುಚಿತ್ರ ಎನ್ನುವಂತಾಯಿತು. ಮೊದಲ ತುಳುಚಿತ್ರವನ್ನು ಕೆ.ಎನ್‌. ಟೇಲರ್‌ ಅವರು ಆರಂಭಿಸುವಾಗ 100 ರೂ. ಪಾಲು ಸದಸ್ಯರ ಸಮೂಹದಲ್ಲಿ ಮಾಡುವ ಯೋಜನೆ ರೂಪಿಸಿದ್ದರು. ಆ ಪ್ರಯತ್ನ ಕೈಗೂಡದಿದ್ದಾಗ ಐವರ ಪಾಲು ಬಂಡವಾಳಕ್ಕೆ ಮುಂದಾದರು. ಆಗಲೂ ಸಫಲವಾಗದೆ ಕೆ.ಎನ್‌.ಟೇಲರ್‌, ನಾರಾಯಣ ಪುತ್ರನ್‌ ಸೇರಿಕೊಂಡು ಮಲ್ಪೆ ಮಧ್ವರಾಜ್‌ರ ಸಹಕಾರ ದಲ್ಲಿ ದಾರೆದ ಬೊಡೆದಿಯನ್ನು ಮಾಡಿದರು ಎನ್ನುತ್ತಾರೆ ತುಳು ಭಾಷೆಯ ಸುವರ್ಣ ಚಲನಚಿತ್ರಗಳು ಪುಸ್ತಕ ಬರೆದ ತಮ್ಮ ಲಕ್ಷ್ಮಣ.

Advertisement

ತುಳುವಿನ ಮೊದಲ ಸಂಗತಿಗಳು
ತುಳು ಚಿತ್ರಕ್ಕಾಗಿ ಮೊದಲು ಕೆಮರಾ ಎದುರಿಸಿದ್ದು ದಾರೆದ ಬುಡೆದಿ ಸಿನೆಮಾದಲ್ಲಿ ನಟಿ ಲೀಲಾವತಿ. ದಿನಕ್ಕೆ ಐದು ದೇಖಾವೆಗಳಲ್ಲಿ ಪ್ರದರ್ಶನಗೊಂಡ ಸಿನೆಮಾ ಕೂಡ ದಾರೆದ ಬೊಡೆದಿ. ಮಂಗಳೂರಿನಲ್ಲಿಯೇ ಧ್ವನಿಮುದ್ರಣಗೊಂಡ ಮೊದಲ ಸಿನೆಮಾ ಕಾಸ್‌ದಾಯೆ ಕಂಡನೆ. ರಾಜ್ಯಪ್ರಶಸ್ತಿ ಪಡೆದ ಮೊದಲ ಸಿನೆಮಾ ಬಿಸತ್ತಿ ಬಾಬು. ಪ್ರಚಾರದ ಟ್ರೇಲರ್‌ ಮಾಡಿದ ಮೊದಲ ಸಿನೆಮಾ ಸಾವಿರಡೊರ್ತಿ ಸಾವಿತ್ರಿ. ಮೊದಲ ತುಳು ಕಲರ್‌ ಸಿನೆಮಾ ಕರಿಯಣಿ ಕಟ್ಟಂದಿನ ಕಂಡನಿ, ದ್ವಿಪಾತ್ರದ (ಆನಂದ್‌ ಶೇಖರ್‌)ಮೊದಲ ಸಿನೆಮಾ ಪಗೆತ ಪುಗೆ. ಕೆ.ಎನ್‌. ಟೇಲರ್‌ ದ್ವಿಪಾತ್ರದಲ್ಲಿ ನಟಿಸಿದ ಸಿನೆಮಾ ಸಾವಿರಡೊರ್ತಿ ಸಾವಿತ್ರಿ. ಕಾದಂಬರಿ ಆಧಾರಿತ (ಹೆಣ್ಣು, ಹೊಣ್ಣು, ಮಣ್ಣು)ಮೊದಲ ಸಿನೆಮಾ ಪಗೆತ ಪುಗೆ. ತುಳು ಕಾದಂಬರಿ ಆಧಾರಿತ (ದೇವೆರ್‌) ಸಿನೆಮಾ ದೇವೆರ್‌. ಐತಿಹಾಸಿಕ ಮೊದಲ ಸಿನೆಮಾ ಕೋಟಿ ಚೆನ್ನಯ. ಜಾನಪದ ಆಧಾರಿತ ಮೊದಲ ಸಿನೆಮಾ ತುಳುನಾಡ ಸಿರಿ. ಮೊದಲ ತುಳು ಸಿನೆಮಾಸ್ಕೋಪ್‌ ಬಂಗಾರ್‌ ಪಟ್ಲೆರ್‌. ಕಡಿಮೆ ಅವಧಿಯಲ್ಲಿ (24 ಗಂಟೆ) ಚಿತ್ರೀಕರಣವಾದ ಸಿನೆಮಾ ಸೆಪ್ಟಂಬರ್‌ 8. ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ (ಕೈರೋ) ಭಾಗವಹಿಸಿದ ಮೊದಲ ಸಿನೆಮಾ ನ್ಯಾಯೊಗಾದ್‌ ಎನ್ನ ಬದ್ಕ್. ತುಳುನಾಡಿನಿಂದ ಹೊರಗೆ ಚಿತ್ರೀಕರಣಗೊಂಡ ತುಳು ಚಿತ್ರ ಭಾಗ್ಯವಂತೆದಿ. ಹಾಡುಗಳೇ ಇಲ್ಲದ ಮೊದಲ ಸಿನೆಮಾ ಅಂತಪುರ 175 ದಿನಗಳ ಪ್ರದರ್ಶನ ಕಂಡ ಮೊದಲ ತುಳು ಸಿನೆಮಾ ಒರಿಯರ್ದೊರಿ ಅಸಲ್‌. ವಿದೇಶದಲ್ಲಿ ಚಿತ್ರೀಕರಣವಾದ ಮೊದಲ ತುಳು ಸಿನೆಮಾ ನಿರೆಲ್‌. ಹೀಗೆ ಒಂದೊಂದು ಸಿನೆಮಾಗಳು ಒಂದೊಂದು ನೆನೆಪುಗಳನ್ನು ಹೊತ್ತು ತರುತ್ತಿವೆ. 

ತುಳುವಿನಲ್ಲಿ ಬಚ್ಚನ್‌ ವಾಯ್ಸ!
ಬಾಲಿವುಡ್‌ನ‌ ‘ಬಿಗ್‌ ಬಿ’, ‘ಆ್ಯಂಗ್ರಿ ಯಂಗ್‌ ಮ್ಯಾನ್‌’ ಅಮಿತಾಬ್‌ ಬಚ್ಚನ್‌ ತುಳು ಚಿತ್ರವೊಂದರಲ್ಲಿ ಕಂಠದಾನ ಮಾಡಿದ್ದಾರೆ. ಇದರ ಬಗ್ಗೆ ಈಗಿನ ಬಹುತೇಕ ಜನರಿಗೆ ಗೊತ್ತಿಲ್ಲ. ಯಾಕೆಂದರೆ ‘ಬಿಗ್‌ ಬಿ’ ಸ್ವರ ನೀಡಿರುವುದು 1973ರ ತುಳು ಚಿತ್ರವೊಂದರಲ್ಲಿ. ತುಳು ಚಿತ್ರರಂಗದ ಪ್ರತಿಭಾನ್ವಿತ ನಟ ಎಂಬ ಮಾನ್ಯತೆಯನ್ನು 1970ರ ಸುಮಾರಿಗೆ ಪಡೆದವರು ಮಂಗಳೂರಿನ ಜಪ್ಪು ಮೂಲದ ಆನಂದ್‌ ಶೇಖರ್‌. ತುಳುವಿನ ಪ್ರಥಮ ಚಿತ್ರ ‘ಎನ್ನ ತಂಗಡಿ’ಯಲ್ಲಿ ಇವರದ್ದು ಪ್ರಧಾನ ಪಾತ್ರ. 1972ರಲ್ಲಿ ಆನಂದ್‌ ಶೇಖರ್‌ ಅವರು ಮಹಾಬಲ ಶೆಟ್ಟಿ ಜತೆಗೆ ‘ಪಗೆತ ಪುಗೆ’ ಚಿತ್ರ ನಿರ್ಮಾಣ ಮಾಡಿದರು. ಜತೆಗೆ ಕನ್ನಡದಲ್ಲಿ ‘ಕಳ್ಳರ ಕಳ್ಳ’, ‘ಗಂಧದ ಗುಡಿ’ ಸಿನೆಮಾದಲ್ಲೂ ಅಭಿನಯಿಸಿ ಸಂಪರ್ಕ ವ್ಯಾಪ್ತಿಯನ್ನು ವಿಸ್ತರಿಸಿದರು. 

ಕೋಸ್ಟಲ್‌ವುಡ್‌ಗೆ ‘ಪೊಲಿಟಿಕಲ್‌ ಟಚ್‌’
ಕರಾವಳಿಯ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಹಲವು ಗಣ್ಯರು ತುಳುಚಿತ್ರರಂಗದಲ್ಲೂ ಅಭಿನಯಿಸುವ ಮೂಲಕ ಗಮನಸೆಳೆದಿದ್ದಾರೆ. ‘ಎನ್ನ ತಂಗಡಿ’ಯಲ್ಲಿ ಮಾಜಿ ಶಾಸಕ ಲೋಕಯ್ಯ ಶೆಟ್ಟಿ ಅವರು ಪಾತ್ರ ನಿರ್ವಹಿಸಿದ್ದರು. ‘ಪಗೆತ ಪುಗೆ’ ಚಿತ್ರದಲ್ಲಿ ಅಂದಿನ ಶಾಸಕ ಅಮರನಾಥ ಶೆಟ್ಟಿ ಅಭಿನಯಿಸಿದ್ದರು. ‘ಕಂಚಿಲ್ದ ಬಾಲೆ’ ಸಿನೆಮಾದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅಭಿನಯಿಸಿದ್ದರು. ‘ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ’ ಚಿತ್ರದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್‌ ಬಣ್ಣಹಚ್ಚಿದ್ದರು. ಇದೇ ಚಿತ್ರ ಹಾಗೂ ‘ಚಾಲಿಪೋಲಿಲು’, ‘ಎಕ್ಕಸಕ’ ಸೇರಿದಂತೆ ಕೆಲವು ಸಿನೆಮಾದಲ್ಲಿ ಶಾಸಕ ಉಮಾನಾಥ ಕೋಟ್ಯಾನ್‌ ಅಭಿನಯಿಸಿದ್ದಾರೆ. ಜಗದೀಶ್‌ ಅಧಿಕಾರಿ ಕೂಡ ಚಿತ್ರದಲ್ಲಿದ್ದಾರೆ. ಮಾಜಿ ಶಾಸಕ ವಸಂತ ಬಂಗೇರ ಅವರು 1978ರಲ್ಲಿ ‘ಸಂಗಮ ಸಾಕ್ಷಿ’ ಎಂಬ ತುಳು ಸಿನೆಮಾ ನಿರ್ಮಾಪಕರಾಗಿದ್ದರು. ‘ಕಡಲ ಮಗೆ’ ಚಿತ್ರವನ್ನು ಮಾಜಿ ಸಚಿವ ನಾಗರಾಜ ಶೆಟ್ಟಿ ನಿರ್ಮಿಸಿದ್ದಾರೆ. ರಿಚರ್ಡ್‌ ಕ್ಯಾಸ್ಟಲಿನೋ ಅವರ ‘ಸಪ್ಟೆಂಬರ್‌ 8’ ಚಿತ್ರದಲ್ಲಿ ಡಾ| ಶಿವರಾಮ ಕಾರಂತರು (ಕಾರವಾರ ಸಂಸದ ಸ್ಥಾನಕ್ಕೆ ಸ್ಪರ್ಧಿಸಿದವರು)ಅಭಿನಯಿಸಿದ್ದರು. ಮಾಜಿ ಸಚಿವೆ ಉಮಾಶ್ರೀ ಕೂಡ ಇದೇ ಚಿತ್ರದಲ್ಲಿ ಬಣ್ಣಹಚ್ಚಿದ್ದರು. ‘ಕಾಸ್‌ದಾಯೆ ಕಂಡನಿ’, ‘ಯಾನ್‌ ಸನ್ಯಾಸಿ ಆಪೆ’ ‘ಬಯ್ಯಮಲ್ಲಿಗೆ’ ಸಿನೆಮಾದಲ್ಲಿ ಪ್ರಸಕ್ತ ಸಚಿವೆಯಾಗಿರುವ ಜಯಮಾಲ ಅಭಿನಯಿಸಿದ್ದಾರೆ.

 ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next