Advertisement

Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ

12:43 PM Jan 05, 2025 | Team Udayavani |

ಆಧುನಿಕ ಭಾರತದಲ್ಲಿ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಯ ಬಗ್ಗೆ ಮಾಹಿತಿ ನೀಡುವುದಷ್ಟೇ ಅಲ್ಲದೆ ಅದರ ಪಾತ್ರದ ಬಗ್ಗೆ ಸಮತೋಲಿತ ಅರಿವನ್ನು ವಿಸ್ತರಿಸುವ ಉದ್ದೇಶ ಈ ಲೇಖನದ್ದಾಗಿದೆ. ಆ ಮೂಲಕ ದೇಹ ಸೌಂದರ್ಯ ಮತ್ತು ಆತ್ಮವಿಶ್ವಾಸಗಳನ್ನು ಪರಸ್ಪರ ಬೆಸೆಯಬಲ್ಲ ಅದರ ಸಾಧ್ಯತೆಗಳ ಬಗ್ಗೆ ವಿವರಿಸುವುದು; ಜತೆಗೆ ಹೊಣೆಗಾರಿಕೆ ಮತ್ತು ಆರೈಕೆ-ಚಿಕಿತ್ಸೆಯ ಪಾತ್ರಗಳ ಬಗ್ಗೆ ಒತ್ತು ನೀಡುವ ಗುರಿಯನ್ನು ಈ ಲೇಖನ ಹೊಂದಿದೆ.

Advertisement

ಭಾರತದಲ್ಲಿ ಹಿಂದೊಂದು ಕಾಲದಲ್ಲಿ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಯು ತಾರೆಯರು ಮತ್ತು ಸಮಾಜದ ಶ್ರೀಮಂತ ವರ್ಗದವರಿಗೆ ಮಾತ್ರ ಮೀಸಲಾದ ಐಶಾರಾಮ ಎಂಬುದಾಗಿ ಪರಿಗಣಿಸಲ್ಪಟ್ಟಿತ್ತು. ಆದರೆ ಈಗ ಕಾಲ ಉಲ್ಲೇಖಾರ್ಹವಾಗಿ ಬದಲಾಗಿದೆ. ಕಳೆದ ಎರಡು ದಶಕಗಳಲ್ಲಿ ಸೌಂದರ್ಯ ವರ್ಧಕ ಶಸ್ತ್ರಚಿಕಿತ್ಸೆಯು ಒಂದು ಪ್ರಧಾನ ವಾಹಿನಿಯ ರೂಢಿಯಾಗಿ ಆಚರಣೆಗೆ ಬಂದಿದ್ದು, ಸಾಮಾಜಿಕ ನಡವಳಿಕೆ, ಆರ್ಥಿಕ ಪ್ರಗತಿ ಮತ್ತು ಜಾಗತಿಕ ಸೌಂದರ್ಯಪ್ರಜ್ಞೆಯ ಪ್ರಭಾವ ನಮ್ಮ ದೇಶದಲ್ಲಿಯೂ ಪ್ರತಿಫ‌ಲಿಸುತ್ತಿರುವುದರ ದ್ಯೋತಕವಾಗಿದೆ.

ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಯ ಸ್ವೀಕೃತಿ ಹೆಚ್ಚಳ

ಭಾರತದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯವು ಸೌಂದರ್ಯವನ್ನು ಸದಾ ಅದರ ವೈವಿಧ್ಯಮಯ ಸ್ವರೂಪಗಳಲ್ಲಿ ಸ್ವೀಕರಿಸಿ ಆಚರಿಸುತ್ತ ಬಂದಿದೆ. ಆದರೆ “ಮಾದರಿ ಸೌಂದರ್ಯ’ ಎಂಬ ಪರಿಕಲ್ಪನೆಯು ಕೆಲವು ದಶಕಗಳಿಂದೀಚೆಗೆ ವಿಕಾಸಗೊಂಡಿದೆ. ಸಾಮಾಜಿಕ ಮಾಧ್ಯಮಗಳು, ಬಾಲಿವುಡ್‌ ಮತ್ತು ಜಾಗತಿಕ ಸೌಂದರ್ಯಾತ್ಮಕ ಅನಾವರಣವು ಮಾದರಿ ಸೌಂದರ್ಯದ ಪರಿಕಲ್ಪನೆಗಳು ರೂಪುಗೊಳ್ಳುವಲ್ಲಿ ಗಮನಾರ್ಹ ಪಾತ್ರವನ್ನು ವಹಿಸಿವೆ. ಇದರಿಂದಾಗಿ ರಿನೊಪ್ಲಾಸ್ಟಿ, ಲಿಪೊಸಕ್ಷನ್‌ ಮತ್ತು ಬೊಟೊಕ್ಸ್‌ನಂತಹ ಸೌಂದರ್ಯವರ್ಧಕ ಚಿಕಿತ್ಸೆಗಳು ಕೈಗಟುಕಲು ಮತ್ತು ಸ್ವೀಕಾರಗೊಳ್ಳಲು ಸಾಧ್ಯವಾಗಿದೆ.

Advertisement

ಸೌಂದರ್ಯವರ್ಧಕ ರಂಗದ ವರದಿಗಳ ಪ್ರಕಾರ, ಭಾರತದಲ್ಲಿ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಗಳಿಗೆ ಬೇಡಿಕೆಯು ವಾರ್ಷಿಕವಾಗಿ ಶೇ. 20ರಷ್ಟು ಪ್ರಗತಿಯನ್ನು ಕಾಣುತ್ತಿದೆ. ಯುವ ವೃತ್ತಿಪರರು, ವಧೂವರರು ಹಾಗೂ ಮಧ್ಯವಯಸ್ಕ ಜನರು ಕೂಡ ತಮ್ಮ ದೈಹಿಕ ಆಕಾರ-ಸ್ವರೂಪ, ಸೌಂದರ್ಯಗಳನ್ನು ಈ ಮೂಲಕ ವೃದ್ಧಿಸಿಕೊಂಡು ಹೆಚ್ಚು ಆತ್ಮವಿಶ್ವಾಸವುಳ್ಳವರಾಗಿ ಕಂಗೊಳಿಸಲು ಮುಂದಾಗುತ್ತಿದ್ದಾರೆ. ಜಾಗತಿಕ ಗುಣದರ್ಜೆಗಳಿಗೆ ಹೋಲಿಸಿದರೆ ಭಾರತದಲ್ಲಿ ಈ ಚಿಕಿತ್ಸೆಗಳು ಕೈಗಟಕುವ ವೆಚ್ಚದಲ್ಲಿ ಲಭ್ಯವಿರುವುದರಿಂದಾಗಿಯೂ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಯ ಕ್ಷೇತ್ರದಲ್ಲಿ ದೇಶವು ವೈದ್ಯಕೀಯ ಪ್ರವಾಸೋದ್ಯಮ ತಾಣವಾಗಲು ಕಾರಣವಾಗಿದೆ.

ಮನಶ್ಶಾಸ್ತ್ರೀಯ ಮತ್ತು ಸಾಮಾಜಿಕ ಪರಿಣಾಮಗಳು

ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಯು ಇಂದು ವಿಲಾಸದ ವಿಷಯವಲ್ಲ; ಸಶಕ್ತೀಕರಣದ ಸಾಧನವಾಗಿ ಬೆಳೆದಿದೆ. ಸೌಂದರ್ಯವರ್ಧಕ ಚಿಕಿತ್ಸೆಗಳು ಜನರು ಅಭದ್ರತೆಗಳಿಂದ ಹೊರಬರಲು, ಆತ್ಮವಿಶ್ವಾಸ, ವ್ಯಕ್ತಿಘನತೆಗಳನ್ನು ವೃದ್ಧಿಸಿಕೊಳ್ಳಲು ಮಾತ್ರವಲ್ಲದೆ ತಮ್ಮ ಸಾಮಾಜಿಕ ಮತ್ತು ವೃತ್ತಿಪರ ಸಂವಹನ ಸಾಮರ್ಥ್ಯಗಳನ್ನು ಪರಿಣಾಮಕಾರಿಯಾಗಿಸಲು ಸಹಾಯ ಮಾಡುತ್ತವೆ.

ಇವೆಲ್ಲವುಗಳ ಜತಗೆ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಯ ಜನಪ್ರಿಯತೆ ಹೆಚ್ಚುತ್ತಿರುವುದು ಸವಾಲುಗಳನ್ನು ಕೂಡ ಹೊಂದಿದೆ. ಸಾಮಾಜಿಕ ಮಾಧ್ಯಮಗಳ ಫಿಲ್ಟರ್‌ಗಳು ಮತ್ತು ಫೊಟೊ ಎಡಿಟಿಂಗ್‌ ಆ್ಯಪ್‌ಗ್ ಳಿಂದಾಗಿ ಜನರಲ್ಲಿ ಉಂಟಾಗುವ ಅವಾಸ್ತವಿಕ ನಿರೀಕ್ಷೆಗಳು ಕೆಲವೊಮ್ಮೆ ಅಸಂತೃಪ್ತಿಗೆ ಕಾರಣವಾಗುತ್ತವೆ.

ಕಾರ್ಯಸಾಧ್ಯವಾಗಬಲ್ಲ ಫ‌ಲಿತಾಂಶಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮತ್ತು ವಾಸ್ತವಿಕ ನಿರೀಕ್ಷೆಗಳನ್ನು ಹೊಂದುವುದನ್ನು ಪ್ರೋತ್ಸಾಹಿಸುವುದು ನೈತಿಕ ಕಾರ್ಯಚಟುವಟಿಕೆಯ ಊರುಗೋಲಾಗಲಿದೆ.

ಭಾರತೀಯ ಸಂದರ್ಭದಲ್ಲಿ ಸಾಂಸ್ಕೃತಿಕ ಸಂವೇದಿತ್ವ

ಭಾರತೀಯ ಸಮಾಜವು ದೈಹಿಕ ಸ್ವರೂಪಕ್ಕೆ ಗಮನಾರ್ಹ ಪ್ರಾಮುಖ್ಯವನ್ನು ನೀಡುತ್ತದೆಯಾಗಿದ್ದು, ವೈವಾಹಿಕ ಸ್ಥಿತಿಗತಿಗಳು ಮತ್ತು ವೃತ್ತಿ ಅವಕಾಶಗಳಲ್ಲಿ ಇದು ಉಲ್ಲೇಖಾರ್ಹ ಪಾತ್ರವನ್ನು ಹೊಂದಿದೆ. ಪರಿಣಾಮವಾಗಿ, ಸ್ಕಿನ್‌ ಲೈಟನಿಂಗ್‌, ಸ್ಕಾರ್‌ ರಿವಿಶನ್‌ ಮತ್ತು ಕೂದಲು ಕಸಿಯಂತಹ ಚಿಕಿತ್ಸೆಗಳಿಗೆ ಹೆಚ್ಚು ಬೇಡಿಕೆ ಇದೆ.

ಆದರೆ ಭಾರತದಲ್ಲಿ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಎಂಬುದು ಸೌಂದರ್ಯಕ್ಕೆ ಮಾತ್ರ ಸೀಮಿತವಾಗಿಲ್ಲ; ಕಾರ್ಯಚಟುವಟಿಕೆಯನ್ನು ಮತ್ತು ವೈಯಕ್ತಿಕ ಘನತೆಯನ್ನು ಪುನರ್‌ ಸ್ಥಾಪಿಸುವುದು ಕೂಡ ಇದರ ಭಾಗವಾಗಿದೆ. ಗಾಯಗಳ ಬಳಿಕ ದೇಹ ಪುನರ್‌ನಿರ್ಮಾಣ ಮತ್ತು ಜನ್ಮಜಾತ ವೈಕಲ್ಯಗಳನ್ನು ಸರಿಪಡಿಸಲು ಕೈಗೊಳ್ಳುವ ಶಸ್ತ್ರಚಿಕಿತ್ಸೆಗಳು ಕೂಡ ಹಲವಾರು ಜನರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಲು ಸಮರ್ಥವಾಗಿದ್ದು, ಪ್ಲಾಸ್ಟಿಕ್‌ ಸರ್ಜರಿಯ ಅವಳಿ ಉದ್ದೇಶಗಳನ್ನು ಒತ್ತಿ ಹೇಳುತ್ತಿವೆ.

ಆರ್ಥಿಕ ಪರಿಣಾಮಗಳು

ವೆಚ್ಚ ಮಾಡಬಲ್ಲ ಆದಾಯದಲ್ಲಿ ವೃದ್ಧಿ, ನಗರೀಕರಣ ಮತ್ತು ವೈಯಕ್ತಿಕ ಸೌಂದರ್ಯವೃದ್ಧಿ ಅರಿವು ಹೆಚ್ಚಳದ ಕಾರಣವಾಗಿ ಭಾರತದಲ್ಲಿ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಯ ಮಾರುಕಟ್ಟೆಯು ಭಾರೀ ಪ್ರಮಾಣದಲ್ಲಿ ವೃದ್ಧಿಸುವ ನಿರೀಕ್ಷೆ ಇದೆ.

ಮುಂಬಯಿ, ದಿಲ್ಲಿ ಮತ್ತು ಬೆಂಗಳೂರಿನಂತಹ ನಗರಗಳು ಉತ್ಕೃಷ್ಟ ದರ್ಜೆಯ ಕ್ಲಿನಿಕ್‌ಗಳು ಮತ್ತು ಅತ್ಯುಚ್ಚ ಕೌಶಲಯುಕ್ತ ವೃತ್ತಿಪರರ ಜತೆಗೆ ಅತ್ಯಾಧುನಿಕ ಸೌಂದರ್ಯವರ್ಧಕ ಚಿಕಿತ್ಸೆಗಳ ಹಬ್‌ ಆಗಿ ಬೆಳೆದುನಿಂತಿವೆ. ಈ ಪ್ರಗತಿಯು ಉದ್ಯೋಗ ಸೃಷ್ಟಿ, ವೈದ್ಯಕೀಯ ತಂತ್ರಜ್ಞಾನ ದಲ್ಲಿ ಮುನ್ನಡೆ ಮತ್ತು ವೈದ್ಯಕೀಯ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೂ ಅವಕಾಶಗಳನ್ನು ಸೃಷ್ಟಿಸಿದೆ.

ಭವಿಷ್ಯದ ದೃಷ್ಟಿ

ಭಾರತೀಯ ಜನಸಮುದಾಯದ ಮೇಲೆ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಯ ಪರಿಣಾಮವು ಸಕಾರಾತ್ಮಕವಾಗಿಯೇ ಇದ್ದರೂ ಈ ಕ್ಷೇತ್ರವು ಅತ್ಯುಚ್ಚ ನೈತಿಕ ಮತ್ತು ವೈದ್ಯಕೀಯ ದರ್ಜೆಗಳನ್ನು ಖಾತರಿಪಡಿಸುವುದರತ್ತ ಗಮನ ಕೇಂದ್ರೀಕರಿಸಬೇಕು. ಸರ್ಜನ್‌ಗಳು ರೋಗಿಗಳ ಸುರಕ್ಷೆಗೆ ಆದ್ಯತೆ ನೀಡಬೇಕು, ಸವಿವರವಾದ ಸಮಾಲೋಚನೆಗಳನ್ನು ಒದಗಿಸಬೇಕು ಹಾಗೂ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಗಳು ಸಮರ್ಪಕ ಕಾರಣಗಳಿಗಾಗಿಯೇ ನಡೆಯುವುದನ್ನು ಖಾತರಿಪಡಿಸಬೇಕು.

ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಯ ಬಗೆಗಿನ ಅಪನಂಬುಗೆ, ಅವಿಶ್ವಾಸಗಳು ಮಾಯುವಾಗುತ್ತಿದ್ದಂತೆ ಈ ಕ್ಷೇತ್ರವು ದೇಹಾಕಾರ ಮತ್ತು ಸ್ವರೂಪ ವೃದ್ಧಿಯನ್ನಷ್ಟೇ ಅಲ್ಲದೆ ಬದುಕನ್ನು ಬದಲಾಯಿಸುವ ಭರವಸೆಯನ್ನು ನೀಡುತ್ತದೆ. ವೈಯಕ್ತಿಕತೆ ಮತ್ತು ಸ್ವಾಭಿವ್ಯಕ್ತಿಗಳಿಗೆ ಹೆಚ್ಚು ಮೌಲ್ಯವನ್ನು ನೀಡುವ ಭಾರತೀಯ ಸಮಾಜದಲ್ಲಿ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಯು ಜನರು ಹೆಚ್ಚು ಆತ್ವವಿಶ್ವಾಸವುಳ್ಳವರಾಗಲು ಹಾಗೂ ತಮ್ಮ ವರ್ಧಿತ ವ್ಯಕ್ತಿತ್ವದೊಂದಿಗೆ ಸಶಕ್ತಗೊಳ್ಳಲು ಒಂದು ಸಾಧನವಾಗಿದೆ.

-ಡಾ| ವೀರಮಚನೇನಿ ಎಸ್‌. ಶೇಷೇಂದ್ರ

ಅಸಿಸ್ಟೆಂಟ್‌ ಪ್ರೊಫೆಸರ್‌,

ಪ್ಲಾಸ್ಟಿಕ್‌ ಸರ್ಜರಿ ವಿಭಾಗ

ಕೆಎಂಸಿ, ಅತ್ತಾವರ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪ್ಲಾಸ್ಟಿಕ್‌ ಸರ್ಜರಿ ವಿಭಾಗ, ಕೆಎಂಸಿ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next