ಧಾರವಾಡ: ಕುಸಿಯುತ್ತಿರುವ ಪ್ರಾಮಾಣಿಕತೆ ಹಾಗೂ ಹೆಚ್ಚುತ್ತಿರುವ ಭ್ರಷ್ಟಾಚಾರ ರಾಷ್ಟ್ರದ ಸಮಗ್ರ ಪ್ರಗತಿಗೆ ತೊಡಕಾಗಿದೆ ಎಂದು ಡಿಎಸ್ಪಿ ಬಿ.ಪಿ. ಚಂದ್ರಶೇಖರ ಹೇಳಿದರು. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವಿಚಕ್ಷಣಾ ಜಾಗೃತಿ ಸಪ್ತಾಹದ ಅಂಗವಾಗಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
ಭ್ರಷ್ಟಾಚಾರವನ್ನು ಬೇರು ಸಹಿತ ಕಿತ್ತೂಗೆಯಬಲ್ಲ ಸಾಮರ್ಥ್ಯ ಸಾರ್ವಜನಿಕರಿಗಿದ್ದು, ವಿಶೇಷವಾಗಿ ಜನಸಾಮಾನ್ಯರಿಗೆ ಆ ಬಗ್ಗೆ ತಿಳಿವಳಿಕೆ ನೀಡುವ ಕಾರ್ಯ ಆಗಬೇಕಾಗಿದೆ. ಮೋಸಗಾರರು, ಲಂಚಕೋರರು, ಸಮಾಜಘಾತಕರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಸಾರ್ವಜನಿಕರು ಹಿಂದೆಂದಿಗಿಂತ ಹೆಚ್ಚು ಎಚ್ಚರಿಕೆಯಿಂದ ಸಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆವಿಜಿ ಬ್ಯಾಂಕ್ ಅಧ್ಯಕ್ಷ ಎಸ್. ರವೀಂದ್ರನ್ ಮಾತನಾಡಿ, ಆಡಳಿತದ ಎಲ್ಲಾ ಹಂತಗಳಲ್ಲೂ ಪಾರದರ್ಶಕತೆ ತೋರಿಸುವ ನಿಟ್ಟಿನಲ್ಲಿ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಲು ಬ್ಯಾಂಕ್ ವಿಚಕ್ಷಣಾ ಜಾಗೃತಿ ಸಪ್ತಾಹ ಹಮ್ಮಿಕೊಂಡಿದೆ.
ಬ್ಯಾಂಕಿಂಗ್ ಉದ್ಯಮದ ನೌಕರರು ಅತ್ಯುತ್ಛ ಮಟ್ಟದ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಜೊತೆಗೆ ಮೋಸ-ವಂಚನೆಗಳ ಬಗ್ಗೆಯೂ ಅರಿವು ಹೊಂದಿರಬೇಕು ಎಂದರು. ಬ್ಯಾಂಕ್‌ನ ಮಹಾಪ್ರಬಂಧಕ ಎಸ್.ಎಂ. ಗೋರಬಾಳ ಅವರು ವಂಚನೆ ಹಾಗೂ ಭ್ರಷ್ಟಾಚಾರ ತಡೆಗೆ ಬ್ಯಾಂಕ್‌ಗಳು ಕೈಗೊಂಡಿರುವ ಕ್ರಮ ಹಾಗೂ ವಿಚಕ್ಷಣಾ ತಂತ್ರಗಾರಿಕೆ ಬಗ್ಗೆ ವಿವರಿಸಿದರು.
ಬ್ಯಾಂಕ್‌ನ ಮುಖ್ಯ ವಿಚಕ್ಷಣಾಧಿಕಾರಿ ರವಿ ಮೆಳವಂಕಿ ಮಾತನಾಡಿದರು. ಡಾ| ಡಿ.ಜಿ. ಶೆಟ್ಟಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಭಾರತವನ್ನು ಭ್ರಷ್ಟಾಚಾರ ಮುಕ್ತ ರಾಷ್ಟ್ರವನ್ನಾಗಿಸಲು ಸಾಧ್ಯವೇ ಎಂಬ ವಿಷಯದ ಮೇಲಿನ ಚರ್ಚಾಕೂಟದ ವಿಜೇತರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಬ್ಯಾಂಕ್‌ನ ಮಹಾಪ್ರಬಂಧಕ ಐ.ಜಿ. ಕುಮಾರ ಗೌಡ ಸ್ವಾಗತಿಸಿದರು. ಸಂಪರ್ಕಾಧಿಕಾರಿ ಉಲ್ಲಾಸ ಗುನಗಾ ನಿರೂಪಿಸಿದರು. ಪ್ರಾದೇಶಿಕ ವ್ಯವಸ್ಥಾಪಕ ಬಸವರಾಜ ಹೋಳ್ಕರ್ ವಂದಿಸಿದರು.