ಗದಗ: ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಾಮೀನಿ ನಲ್ಲಿದ್ದು, ಇಂಥವರು ಭ್ರಷ್ಟಾ ಚಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವಾಗ್ಧಾಳಿ ನಡೆಸಿದರು.
ರೋಣದ ಡಂಬಳ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ ಅವರ ಪ್ರಚಾರಾರ್ಥ ಜರಗಿದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದಲ್ಲಿ ತೊಡಗಿರುವ ಕಾಂಗ್ರೆಸ್ ಮುಖಂಡರು ಈಗ ಗಂಗಾ ನದಿಯಲ್ಲಿ ಸ್ನಾನ ಮಾಡಲು ಸರತಿಯಲ್ಲಿ ನಿಂತಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಅವಧಿ ಯಲ್ಲಿ ಬಡವರ ಅನ್ನ ಭಾಗ್ಯ ಯೋಜನೆಯಡಿ 35,000 ಕೋಟಿ ರೂ. ಭ್ರಷ್ಟಾ ಚಾರ ನಡೆದಿದೆ ಎಂದು ಲೆಕ್ಕಪರಿಶೋಧಕರ ವರದಿ ಯಲ್ಲಿ ಬಹಿರಂಗವಾಗಿದೆ. ಅಲ್ಲದೆ ಅರ್ಕಾವತಿ, ಶಿಕ್ಷಕರ ನೇಮಕಾತಿ, ಪೊಲೀಸ್ ನೇಮಕಾತಿ, ಬಿಡಿಎ, ಕೆಪಿಟಿಸಿಎಲ್ ಸೇರಿ ಹಲವೆಡೆ ಭ್ರಷ್ಟಾಚಾರ ನಡೆದಿದೆ ಎಂದರು.
ಪಿಎಫ್‌ಐ ಸಂಘಟನೆಗೆ ಕಾಂಗ್ರೆಸ್ ಬೆಂಬಲವಿದೆ. ಪಿಎಫ್‌ಐ ಕಾರ್ಯಕರ್ತರ ಮೇಲಿನ ಪ್ರಕರಣವನ್ನು ಸಿದ್ದರಾಮಯ್ಯ ಸರಕಾರ ಹಿಂಪಡೆದು ಬೆಂಬಲ ನೀಡಿತ್ತು. ಆದರೆ ಪಿಎಫ್‌ಐ ನಿಷೇಧಿಸಿ ದೇಶದ ಭದ್ರತೆ, ಏಕತೆಗೆ ಸದಾ ಸಿದ್ಧ ಎಂದು ಮೋದಿ ನೇತೃತ್ವದ ಕೇಂದ್ರ ಸರಕಾರ ಸಾರಿದೆ. ಸಮಾಜಘಾತಕ ಸಂಘಟನೆಗೆ ಬೆಂಬಲ ನೀಡುವ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಿರಾ ಎಂದು ಮತದಾರರನ್ನು ಪ್ರಶ್ನಿಸಿದರು.
ಸಂಸದ ಶಿವಕುಮಾರ ಉದಾಸಿ, ಮಹಾರಾಷ್ಟ್ರದ ರಾಜ್ಯಸಭಾ ಸದಸ್ಯ ಅಮರ ಸಿಂಗ್, ರೋಣ ಮತಕ್ಷೇತ್ರದ ಅಭ್ಯರ್ಥಿ ಕಳಕಪ್ಪ ಬಂಡಿ ಇದ್ದರು.