Advertisement

ಭ್ರಷ್ಟಾಚಾರ ಪ್ರಕರಣ: ಲೋಕಾಯುಕ್ತ ಶಿಫಾರಸು ಆದೇಶವಲ್ಲ 

03:45 AM Feb 06, 2017 | |

ಬೆಂಗಳೂರು: ಭ್ರಷ್ಟಾಚಾರ ಎಸಗಿದ ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಮಕ್ಕಾಗಿ ಲೋಕಾಯುಕ್ತ ಹಾಗೂ ಉಪ ಲೋಕಾಯುಕ್ತರು ಸರ್ಕಾರಕ್ಕೆ ಕೇವಲ  ಶಿಫಾರಸು ಮಾಡಬಹುದೇ ಹೊರತು ಆದೇಶ ಮಾಡುವಂತಿಲ್ಲ. ಆ ಶಿಫಾರಸು ಪುರಸ್ಕರಿಸುವ ಅಥವಾ ತಿರಸ್ಕರಿಸುವ ಸ್ವಾತಂತ್ಯ ಶಿಸ್ತು ಪ್ರಾಧಿಕಾರ (ಸರ್ಕಾರ) ಹೊಂದಿದೆ.

Advertisement

– ಹೀಗೆಂದು ಹೈಕೋರ್ಟ್‌ ಇತ್ತೀಚೆಗೆ ತೀರ್ಪು ನೀಡಿದ್ದು, ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಹಾಗೂ ಉಪ ಲೋಕಾಯುಕ್ತ ಮಾಡುವುದು ಶಿಫಾರಸು ಮಾತ್ರ, ಅದು ಆದೇಶವಲ್ಲ ಎಂದು ತಿಳಿಸಿದೆ.

ಈ  ಮೂಲಕ ಲೋಕಾಯುಕ್ತರು ಹಾಗೂ ಉಪ ಲೋಕಾಯುಕ್ತರು ಭ್ರಷ್ಟ ಅಧಿಕಾರಿಗಳ ವಿರುದ್ಧ ಸರ್ಕಾರಕ್ಕೆ ಮಾಡುವ ಶಿಫಾರಸು ಮೇರೆಗೆ ಅಂತಿಮ ನಿರ್ಧಾರ ಕೈಗೊಳ್ಳುವ ವಿವೇಚನೆ ಸರ್ಕಾರದ್ದು ಎಂದು ಸ್ಪಷ್ಟಪಡಿಸಿದೆ.

ರೈತರಿಗೆ ಸೇರಬೇಕಿದ್ದ ಹಣ ಗುಳುಂ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಚಿತ್ರದುರ್ಗ ಮೂಲದ ಕರ್ನಾಟಕ ವಸತಿ ಮಂಡಳಿ(ಕೆಎಚ್‌ಬಿ)ಯ ಸಹಾಯಕ ಕಾರ್ಯಕಾರಿ ಎಂಜಿನಿಯರ್‌ ಸಿ.ಕೃಷ್ಣಮೂರ್ತಿ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಉಪ ಲೊಕಾಯುಕ್ತರು ಸರ್ಕಾರಕ್ಕೆ ಶಿಫಾರಸು ಪ್ರಕರಣದಲ್ಲಿ ಹೈಕೋರ್ಟ್‌ ಹೀಗೆ ಆದೇಶಿಸಿದೆ.

ಕರ್ನಾಟಕ ನಾಗರೀಕ ಸೇವೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ಅಧಿನಿಯಮಗಳು-1957ರ ನಿಯಮ 14-ಎ(2)(ಡಿ) ಪ್ರಕಾರ ಉಪ ಲೋಕಾಯುಕ್ತರು ಕೃಷ್ಣಮೂರ್ತಿಯವರನ್ನು ಸೇವೆಯಿಂದ ವಜಾಗೊಳಿಸಲು ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.  ಪ್ರಕರಣವೊಂದರ ತನಿಖೆಯನ್ನು ತನಿಖಾಧಿಕಾರಿ ಪೂರ್ಣಗೊಳಿಸಿದ ನಂತರ ಲೋಕಾಯುಕ್ತರು ಅಥವಾ ಉಪ ಲೋಕಾಯುಕ್ತರು, ತನಿಖಾ ಅಂಶಗಳೊಂದಿಗೆ ಸರ್ಕಾರಕೆ ತಮ್ಮ ಶಿಫಾರಸು ಸಲ್ಲಿಸಬೇಕು ಎಂದು ನಿಯಮ ಹೇಳುತ್ತದೆ. ಅದರಂತೆ ಉಪ ಲೋಕಾಯುಕ್ತರು ತಮ್ಮ  ಶಿಫಾರಸು ಸರ್ಕಾರ (ಶಿಸ್ತು ಪ್ರಾಧಿಕಾರ)ಕ್ಕೆ ಕಳುಹಿಸಿದ್ದಾರೆ.

Advertisement

ಆದರೆ, ಶಿಸ್ತು ಪ್ರಾಧಿಕಾರವು ಶಿಫಾರಸು ಹಾಗೂ ತನಿಖಾಧಿಕಾರಿಯ ತನಿಖೆ ಹಾಗೂ ತನಿಖಾ ಅಂಶಗಳನ್ನು ಒಪ್ಪುವ ಅಥವಾ ಒಪ್ಪದೇ ಇರಬಹುದು. ಆದ್ದರಿಂದ  ಈ ಪ್ರಕರಣದಲ್ಲಿ ಉಪ ಲೋಕಾಯುಕ್ತರ ಶಿಫಾರಸು ಅಂತಿಮ ಆದೇಶ ಎಂದು ಭೀತಿ ವ್ಯಕ್ತಪಡಿಸಿರುವುದು ಸರಿಯಲ್ಲ. ಉಪ ಲೋಕಾಯುಕ್ತರ ಶಿಫಾರಸು ಪರಿಗಣಿಸಿ ಅಂತಿಮ ಆದೇಶ ಹೊರಡಿಸುವುದು ಶಿಸ್ತು ಪ್ರಾಧಿಕಾರ ಬಿಟ್ಟ ವಿಷಯ’ ಎಂದು ಆದೇಶದಲ್ಲಿ ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಪ್ರಕರಣವೇನು?:
ಚಿತ್ರದುರ್ಗ ಮೂಲದ ಸಿ.ಕೃಷ್ಣಮೂರ್ತಿ ಅವರು, ದಾವಣಗೆರೆಯಲ್ಲಿ ಕೆಎಚ್‌ಬಿ ಸಹಾಯಕ ಕಾರ್ಯಕಾರಿ ಎಂಜಿನಿರ್‌ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವಾಗ ಕುಂದಲವಾಡ ಗ್ರಾಮದಲ್ಲಿ ರೈತರಿಗೆ ಸೇರಿದ 360 ಎಕೆರೆ ಜಮೀನಿನ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ್ದರು. ಪ್ರತಿ ಎಕರೆಗೆ ತಲಾ 5 ಲಕ್ಷ ರೂ. ಪರಿಹಾರ ನಿಗದಪಡಿಸಲಾಗಿತ್ತು. ಆದರೆ, ಬೆಂಗಳೂರಿನ ಆನಂದ ರಾವ್‌ ವೃತ್ತದ ಕಾರ್ಪೋರೇಷನ್‌ ಬ್ಯಾಂಕಿನ ಚೆಕ್‌ಗಳ ಮೇಲೆ ಭೂ ಮಾಲೀಕರ ಸಹಿ ಪಡೆದು ಐದು ಲಕ್ಷ ರೂ. ಬದಲಿಗೆ 4,10,000 ರೂ.ಪಾವತಿಸಲಾಗಿತ್ತು. ಇದರಿಂದ ಭೂ ಮಾಲೀಕರು ನಷ್ಟ ಅನುಭವಿಸಿದ್ದರು.

ಈ ಪ್ರಕರಣದ ಸಂಬಂಧ ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸಿತ್ತು. ತನಿಖಾ ವರದಿಯನ್ನು ಲೋಕಾಯುಕ್ತ ರಿಜಿಸ್ಟ್ರಾರ್‌ ಅವರು ಉಪ ಲೋಕಾಯುಕ್ತರಿಗೆ 2016ರ ಸೆ.26ರಂದು ಸಲ್ಲಿಸಲಾಗಿತ್ತು. ಕೃಷ್ಣಮೂರ್ತಿಯವರು ಭೂ ಮಾಲೀಕರಿಂದ ವಶಪಡಿಸಿಕೊಂಡು ಭೂಮಿಗಳ ಬಗ್ಗೆ ಪ್ರಮಾಣಿಕತೆ ಕಾಯ್ದುಕೊಳ್ಳದೆ ಕರ್ತ್ಯವ ನಿಷ್ಠೆ ಉಲ್ಲಂ ಸಿದ್ದಾರೆ. ರೈತರಿಗೆ ಕಡಿಮೆ ಪರಿಹಾರ ಪಾವತಿಸಿದ್ದಾರೆ. ಆ ಮೂಲಕ ಸರ್ಕಾರಿ ಸೇವಕರಾಗಿ ಕರ್ನಾಟಕ ನಾಗರೀಕ ಸೇವೆಗಳ (ನಡತೆ) ಅಧಿನಿಯಮಗಳು-1966ರ ಸೆಕ್ಷನ್‌ 3(1)(ಐ)ರ ಉಲ್ಲಂ ಸಿ ದುರ್ನಡತೆ ಪ್ರದರ್ಶಿಸಿದ್ದಾರೆ ಎಂಬ ಆರೋಪ ಸಾಬೀತಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

ಸೇವೆಯಿಂದ ವಜಾಗೊಳಿಸಿ
“ಪ್ರಕರಣದಲ್ಲಿ ಕೃಷ್ಣಮೂರ್ತಿ ತಪ್ಪಿತಸ್ಥರಾಗಿದ್ದಾರೆ. ಈ ದುರ್ನಡತೆಯನ್ನು ಗಂಭೀರವಾಗಿ ಪರಿಗಣಿಸಿ ಕೃಷ್ಣ ಮೂರ್ತಿಯವರನ್ನು ಕರ್ನಾಟಕ ನಾಗರೀಕ ಸೇವೆಗಳ (ವರ್ಗೀಕಣ, ನಿಯಂತ್ರಣ ಮತ್ತು ಮೇಲ್ಮನವಿ) ಅಧಿನಿಯಮಗಳು -1957ರ ನಿಯಮ (8) ಅನ್ವಯ ಸೇವೆಯಿಂದ ವಜಾಗೊಳಿಸಿ ಶಿಕ್ಷಸಬೇಕು. ರೈತರಿಗೆ ವಂಚಿಸಿದ ಪ್ರಕರಣದಲ್ಲಿ ಅಭಿಯೋಜನೆಗೆ ಗುರಿಪಡಿಸಬೇಕು. ಅಲ್ಲದೆ, ಅವರ ಕೃತ್ಯಂದಿದ ನಷ್ಟವಾಗಿರುವ ಹಣ ವಸೂಲಿ ಮಾಡಬೇಕು’ ಎಂದು ಉಪ ಲೋಕಾಯುಕ್ತರು 2016ರ ನ.4ರಂದು ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.

ಹೀಗಾಗಿ ತಮ್ಮ ವಿರುದ್ಧದ ಉಪ ಲೋಕಾಯುಕ್ತರ ಶಿಫಾರಸು ಹಾಗೂ ತನಿಖಾ ವರದಿ ರದ್ದುಪಡಿಸಬೇಕು ಎಂದು ಕೃಷ್ಣಮೂರ್ತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್‌.ಜಿ.ರಮೇಶ್‌ ಮತ್ತು ನ್ಯಾ.ಜಾನ್‌ ಮೈಕಲ್‌ ಕುನ್ಹಾ ಅವರಿದ್ದ ವಿಭಾಗೀಯ ಪೀಠ ಮೇಲಿನಂತೆ ಆದೇಶಿಸಿ ಅರ್ಜಿ ಇತ್ಯರ್ಥಪಡಿಸಿದೆ.

– ವೆಂಕಟೇಶ್‌ ಕಲಿಪಿ

Advertisement

Udayavani is now on Telegram. Click here to join our channel and stay updated with the latest news.

Next