Advertisement

ತುಕ್ಕು ಹಿಡಿಯುವ, ತಾಂತ್ರಿಕ ಸಮಸ್ಯೆ ಸಾಧ್ಯತೆ: ಮಾಲಕರಿಗೆ ಆತಂಕ

11:39 PM Jul 09, 2020 | Sriram |

ವಿಶೇಷ ವರದಿ- ಮಹಾನಗರ: ಮಂಗಳೂರು ನಗರದ ಸುಮಾರು 150ರಷ್ಟು ಸಿಟಿ ಬಸ್‌ಗಳು ಕಳೆದ ಮೂರು ತಿಂಗಳಿನಿಂದ ರಸ್ತೆಗಿಳಿದಿಲ್ಲ. ಬದಲಾಗಿ ನಿಂತಲ್ಲೇ ಇದ್ದು, ತುಕ್ಕು ಹಿಡಿಯುವ ಭೀತಿ ಮಾಲಕರಿಗೆ ಎದುರಾಗಿದೆ.

Advertisement

ಮಾರ್ಚ್‌ ತಿಂಗಳಿನಲ್ಲಿ ಲಾಕ್‌ಡೌನ್‌ ಘೋಷಣೆ ಯಾದ ಬಳಿಕ ಮಂಗಳೂರಿನಲ್ಲಿಯೂ ಸಿಟಿ ಮತ್ತು ಖಾಸಗಿ ಬಸ್‌ ಸಂಚಾರ ಸ್ಥಗಿತಗೊಂಡಿತ್ತು. ಮೇ ಅಂತ್ಯದವರೆಗೆ ಎಲ್ಲ ಬಸ್‌ಗಳು ನಿಂತಲ್ಲೇ ಇದ್ದವು. ಬಳಿಕ ಸುಮಾರು 130ರಷ್ಟು ಬಸ್‌ಗಳು ಓಡಾಟ ಮಾಡಿದ್ದು, ಉಳಿದ 150 ಬಸ್‌ಗಳು ನಿಂತಲ್ಲೇ ಇವೆ. ಬಸ್‌ಗಳು ಅನೇಕ ತಿಂಗಳವರೆಗೆ ನಿಂತಲ್ಲೇ ಇದ್ದರೆ ತಾಂತ್ರಿಕವಾಗಿ ಕೆಟ್ಟು ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.
ಅನೇಕ ದಿನಗಳಿಂದ ನಿಂತಲ್ಲೇ ಇರುವ ವಾಹನಗಳಲ್ಲಿ ಸಾಮಾನ್ಯವಾಗಿ ಟಯರ್‌ ಮತ್ತು ಬ್ಯಾಟರಿ ಸಮಸ್ಯೆ ಕಂಡುಬರುತ್ತದೆ. ಅದರಲ್ಲೂ ಬ್ಯಾಟರಿ ಹಾಳಾದರೆ ಬಸ್‌ ಚಾಲು ಆಗುವುದಿಲ್ಲ. ಬಸ್‌ನ ಹೊಸ ಬ್ಯಾಟರಿಗೆ ಸುಮಾರು 17 ಸಾವಿರ ರೂ. ಇದೆ. ಅದೇ ರೀತಿ ಶಾಖಕ್ಕೆ ಬಸ್‌ನ ಟಯರ್‌ ಸವೆದು ಹೋಗಬಹುದು. ಒಂದು ಜತೆ ಟಯರ್‌ಗೆ ಸುಮಾರು 40 ಸಾವಿರ ರೂ. ಬೆಲೆ ಇದೆ. ಈ ಎಲ್ಲ ಸಮಸ್ಯೆಯಿಂದ ಬಸ್‌ ಮಾಲಕರು ಕಂಗಾಲಾಗಿದ್ದಾರೆ.

ನಗರದಲ್ಲಿ ಸದ್ಯ ಓಡಾಟ ನಡೆಸುತ್ತಿರುವ ಬಸ್‌ಗಳ ಸಂಖ್ಯೆಯಲ್ಲೂ ಇಳಿಕೆಯಾಗಿದೆ. ಜೂ. 1ರಿಂದ ಸುಮಾರು 130ರಷ್ಟು ಬಸ್‌ಗಳನ್ನು ಓಡಿಸಲು ಸಿಟಿ ಬಸ್‌ ಮಾಲಕರ ಸಂಘ ನಿರ್ಧರಿಸಿತ್ತು. ಆದರೆ ಸದ್ಯ ಕೆಲವೊಂದು ರೂಟ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ಹಿನ್ನೆಲೆ ಬಸ್‌ ಕಾರ್ಯಾಚರಣೆ ಕಡಿಮೆ ಮಾಡಲಾಗಿದೆ. ಉಳ್ಳಾಲ ಕಡೆಗೆ 8 ಬಸ್‌ ಬದಲಾಗಿ 2 ಬಸ್‌ಗಳನ್ನು ಮಾತ್ರ ಓಡಿಸಲಾಗು ತ್ತಿದೆ. ಮಂಗಳೂರು ನಗರದಲ್ಲಿಯೂ 130ರಲ್ಲಿ ಸುಮಾರು 15ಕ್ಕೂ ಹೆಚ್ಚು ಬಸ್‌ಗಳ ಓಡಾಟ ಸ್ಥಗಿತಗೊಂಡಿದೆ.

ಗಡಿ ಬಿಕ್ಕಟ್ಟು: ಸಿಬಂದಿಗೆ ಸಂಕಷ್ಟ
“ಕೋವಿಡ್‌ ಆತಂಕದಿಂದಾಗಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲಾ ಗಡಿ ಬಂದ್‌ ಆಗಿದ್ದ ಕಾರಣ ಇದೀಗ ಸಿಟಿ ಬಸ್‌ ಸಿಬಂದಿಗೂ ಸಮಸ್ಯೆ ಉಂಟಾಗಿದೆ. ಮಂಗಳೂರು ನಗರದಲ್ಲಿ ಓಡಾಡುವ ಕೆಲವು ಸಿಟಿ ಬಸ್‌ಗಳಲ್ಲಿ ಬಸ್‌ ಚಾಲಕರು, ನಿರ್ವಾಹಕರು ಮಂಜೇಶ್ವರ, ತಲಪಾಡಿ ಕಡೆಯವರಾಗಿದ್ದು, ಅವರಿಗೆ ಕೆಲಸಕ್ಕೆ ಆಗಮಿಸಲು ಇದೀಗ ತೊಂದರೆಯಾಗಿದೆ. ಇದೇ ಕಾರಣಕ್ಕೆ ಬೇರೆ ಕಾರ್ಮಿಕರನ್ನು ಅವಲಂಬಿಸಬೇಕಾಗಿದೆ’ ಎನ್ನುತ್ತಾರೆ ಬಸ್‌ ಮಾಲಕರು.

ವೈರಲ್‌ ಆಗುತ್ತಿವೆ ಫೋಟೋಗಳು
ಬಸ್‌ಗಳು ನಿಂತಲ್ಲೇ ಇದ್ದು, ಕೆಲವೊಂದು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ. ನಿಲ್ಲಿಸಲಾಗಿದ್ದ ಬಸ್‌ಗಳ ಮೇಲೆ ಗಿಡ, ಬಳ್ಳಿಗಳು ಬೆಳೆಯುತ್ತಿವೆ. ಕೆಲವೊಂದು ಬಸ್‌ಗಳಂತೂ ಶ್ವಾನಗಳ ಆವಾಸಸ್ಥಾನವಾಗಿವೆ. ಮೇಯಲು ಬಿಟ್ಟಿರುವ ದನದ ಹಗ್ಗವನ್ನು ಆಧಾರವಾಗಿ ಕೆಲವು ಬಸ್‌ಗಳಿಗೆ ಕಟ್ಟಲಾಗಿದೆ. ಈ ರೀತಿಯ ಫೋಟೋ ಟ್ವಿಟರ್‌, ಫೇಸ್‌ಬುಕ್‌, ವಾಟ್ಸಾಪ್‌ ಗಳಲ್ಲಿ ಇದೀಗ ವೈರಲ್‌ ಆಗುತ್ತಿದೆ.

Advertisement

 ನಷ್ಟದಲ್ಲಿ ಕಾರ್ಯಾಚರಣೆ
ಮಂಗಳೂರು ನಗರದಲ್ಲಿ ಸುಮಾರು ಒಂದು ತಿಂಗಳಿನಿಂದ ಸಿಟಿ ಬಸ್‌ ಸಂಚಾರ ಆರಂಭಗೊಂಡಿದೆ. ಯಾವುದೇ ಬಸ್‌ಗಳು ಲಾಭದಿಂದ ಓಡುತ್ತಿಲ್ಲ. ಇದೇ ಕಾರಣಕ್ಕೆ ಕೆಲವೊಂದು ರೂಟ್‌ಗಳಲ್ಲಿ ಬಸ್‌ ಓಡಾಟವನ್ನು ನಿಲ್ಲಿಸಲಾಗಿದೆ. ನಗರದಲ್ಲಿ ಸಾರ್ವಜನಿಕರ ಸಂಚಾರವೂ ಕಡಿಮೆ ಇದ್ದು, ಇದರಿಂದಾಗಿ ಪ್ರಯಾಣಿಕರ ಸಂಖ್ಯೆಯಲ್ಲೂ ಇಳಿಮುಖವಾಗಿದೆ.
-ದಿಲ್‌ರಾಜ್‌ ಆಳ್ವ, ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next