Advertisement

Karnataka: ನಿಗಮ, ಮಂಡಳಿ ಕಗ್ಗಂಟು ಹೈಕಮಾಂಡ್‌ ಅಂಗಳಕ್ಕೆ

11:11 PM Jan 21, 2024 | Team Udayavani |

ಬೆಂಗಳೂರು: ನಿಗಮ- ಮಂಡಳಿಗಳ ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿ ಸ್ವತಃ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಮಧ್ಯಸ್ಥಿಕೆಯಲ್ಲೂ ಸಿಎಂ ಮತ್ತು ಡಿಸಿಎಂ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಮಾತುಕತೆ ವಿಫ‌ಲವಾಗಿದ್ದು, ಪರಿಣಾಮ ಉಸ್ತುವಾರಿಗಳು ನಿರಾಸೆಯಿಂದ ದಿಲ್ಲಿಗೆ ಮರಳಿದ್ದಾರೆ. ಇದರೊಂದಿಗೆ ನೇಮಕಾತಿ “ಕಗ್ಗಂಟು’ ಮತ್ತೆ ಆ ಪಕ್ಷದ ಹೈಕಮಾಂಡ್‌ ಅಂಗಳಕ್ಕೆ ಹೋಗುವ ಸಾಧ್ಯತೆ ಇದೆ.

Advertisement

ನೇಮಕಾತಿ ಪಟ್ಟಿಗೆ ಸಂಬಂಧಿಸಿ ಎರಡೂ ಬಣಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಅದು ನಾಯಕರ ಮೇಲಿನ ಒತ್ತಡದ ರೂಪದಲ್ಲಿ ಪರಿಣಮಿಸಿತ್ತು. ಇದನ್ನು ನಾಯಕರು ಪ್ರತಿಷ್ಠೆಯಾಗಿ ಪರಿಗಣಿಸಿದ್ದರು. ಇದರಿಂದ ಪಟ್ಟಿ ಬಿಡುಗಡೆ ಕಗ್ಗಂಟಾಗಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ತಡರಾತ್ರಿ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಸುರ್ಜೇವಾಲ ದಿಲ್ಲಿಯಿಂದ ಬೆಂಗಳೂರಿಗೆ ದೌಡಾಯಿಸಿದ್ದರು. ಬೆಳಗ್ಗೆ ಖಾಸಗಿ ಹೊಟೇಲ್‌ನಲ್ಲಿ ಸಿಎಂ, ಡಿಸಿಎಂ ಜತೆ ಈ ಕುರಿತು ಸಂಧಾನ ಸಭೆ ನಡೆಸಿದ್ದರು. ಆದರೆ ಈ ವಿಚಾರದಲ್ಲಿ ಕೊನೆ ಕ್ಷಣದವರೆಗೂ ಒಮ್ಮತ ಮೂಡಲಿಲ್ಲ ಎನ್ನಲಾಗಿದೆ.

ಎರಡು ಮತ್ತು ಅದಕ್ಕಿಂತ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾದವರು, ಪ್ರಾಮಾಣಿಕ ಕಾರ್ಯಕರ್ತರು ಹಾಗೂ ನಿರ್ದಿಷ್ಟ ಪ್ರಕರಣಗಳಲ್ಲಿ ಮೊದಲ ಬಾರಿ ಶಾಸಕರಾದವರು ಸಹಿತ ಹಲವು ಮಾನದಂಡಗಳನ್ನು ಅನುಸರಿಸಿ ಪಟ್ಟಿ ಸಿದ್ಧಪಡಿಸಲಾಗಿದೆ. ಇದರಲ್ಲಿ 8-10 ಹೆಸರುಗಳ ಬಗ್ಗೆ ತೀವ್ರ ಆಕ್ಷೇಪ ಆಯಾ ಬಣಗಳಿಂದ ಕೇಳಿಬರುತ್ತಿದೆ. ಅದನ್ನು ಶಮನಗೊಳಿಸುವ ಉದ್ದೇಶದಿಂದಲೇ ಸುರ್ಜೇವಾಲ ಆಗಮಿಸಿದ್ದರು.

ಇದರಿಂದ ಸುರ್ಜೇವಾಲ ಬಂದ ದಾರಿಗೆ ಸುಂಕ ವಿಲ್ಲ ಎಂಬಂತೆ ದಿಲ್ಲಿಗೆ ಮರಳಿದ್ದಾರೆ. ಇತ್ತ ಪಟ್ಟಿ ಬಿಡುಗಡೆ ಭಾಗ್ಯ ಮತ್ತೆ ಮುಂದೂಡಲ್ಪಟ್ಟಂತಾಗಿದೆ. ಸಂಧಾನ ವಿಫ‌ಲವಾದ ಹಿನ್ನೆಲೆಯಲ್ಲಿ ಜ. 26ಕ್ಕೆ ಮತ್ತೆ ಉಸ್ತುವಾರಿ ರಾಜ್ಯ ಭೇಟಿ ಸಾಧ್ಯತೆ ಇದೆ. ಈ ಸಂದರ್ಭ ದಲ್ಲಿ ನೇಮಕಾತಿ ಪಟ್ಟಿಗೆ ಸಂಬಂಧಿಸಿ ಮತ್ತೂಂದು ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆ ಇದೆ.

ಶಾಸಕರು ಮತ್ತು ಪಕ್ಷದ ಕಾರ್ಯಕರ್ತರು ಸೇರಿ ಎರಡು ಪ್ರತ್ಯೇಕ ಪಟ್ಟಿಗಳನ್ನು ಹೈಕಮಾಂಡ್‌ ಕಳುಹಿ ಸಿದೆ. ಆ ಪಟ್ಟಿ ಸೋರಿಕೆ ಬೆನ್ನಲ್ಲೇ ಎರಡೂ ಬಣಗಳಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಶತಾಯಗತಾಯ ಶಾಸಕರಿಗೆ ನಿಗಮ-ಮಂಡಳಿಗಳು ಹಂಚಿಕೆ ಮಾಡ ಬೇಕು ಎನ್ನುವುದು ಒಂದೆಡೆಯಾದರೆ, ಕಾರ್ಯಕರ್ತ ರಿಗೂ ಅವಕಾಶ ಸಿಗಲೇಬೇಕು ಎಂಬ ಒತ್ತಡ ಮತ್ತೂಂದೆಡೆ. ಈ ತಿಕ್ಕಾಟದ ನಡುವೆ ಕಗ್ಗಂಟಾಗಿ ಉಳಿಯುತ್ತಿದೆ ಎಂದು ಮೂಲಗಳು ತಿಳಿಸಿವೆ.

Advertisement

ವಂಚಿತರಿಗೆ ಸಮಿತಿಯಲ್ಲಿ ಅವಕಾಶ?
ಪಟ್ಟಿ ಬಿಡುಗಡೆಯಾಗದಿದ್ದರೆ ಲೋಕಸಭೆ ಚುನಾವಣೆಯಲ್ಲಿ ಇದು ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ಶಾಸಕರಿಗಾದರೂ “ಅಧಿಕಾರ ಭಾಗ್ಯ’ ನೀಡುವ ಮೂಲಕ ತಕ್ಕಮಟ್ಟಿಗೆ ಸಮಾಧಾನಪಡಿಸುವ ಲೆಕ್ಕಾಚಾರವೂ ನಡೆದಿದೆ. ಆದರೆ ಹಿರಿಯ ಕಾರ್ಯಕರ್ತರ ನಿರೀಕ್ಷೆ ಮತ್ತು ಉತ್ಸಾಹಕ್ಕೆ ತಣ್ಣೀರು ಎರಚಿದಂತಾಗುತ್ತದೆ ಎಂಬ ಬೇಸರವೂ ಇದೆ. ಕೆಲವು ಕಾರ್ಯಕರ್ತರಿಗೂ ಮೊದಲ ಹಂತದಲ್ಲಿ ಅವಕಾಶ ಕಲ್ಪಿಸಿ, ಅವಕಾಶ ವಂಚಿತರಾದವರಿಗೆ ಮುಂಬರುವ ದಿನಗಳಲ್ಲಿ ಗ್ಯಾರಂಟಿ ಅನುಷ್ಠಾನಕ್ಕೆ ಸಂಬಂಧಿಸಿದ ಸಮಿತಿಗಳ ರಚನೆ ಸಂದರ್ಭದಲ್ಲಿ ನ್ಯಾಯ ಕಲ್ಪಿಸುವ ತಂತ್ರಗಾರಿಕೆ ಕೂಡ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next