ವಾಷಿಂಗ್ಟನ್:ಮಹಾಮಾರಿ ಕೋವಿಡ್ 19 ವೈರಸ್ ಈವರೆಗೆ ಕೆಮ್ಮು, ಸೀನುವ ಮೂಲಕ ಹರಡುತ್ತಿತ್ತು ಎಂದು ಹೇಳಲಾಗಿತ್ತು. ಆದರೆ ಇದೀಗ ಈ ಬಗ್ಗೆ ಅಧ್ಯಯನ ನಡೆಸಿರುವ ನೂರಾರು ವಿಜ್ಞಾನಿಗಳ ಹೇಳಿಕೆ ಪ್ರಕಾರ ಕೋವಿಡ್ 19 ವೈರಸ್ ನ ಚಿಕ್ಕ ದ್ರವಕಣವೂ ಕೂಡಾ ಗಾಳಿಯಲ್ಲಿ ಸೇರಿಕೊಂಡು ಮನುಷ್ಯನ ದೇಹದೊಳಗೆ ಸೇರಿಕೊಳ್ಳಲಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ 19 ಕುರಿತ ಶಿಫಾರಸ್ಸನ್ನು ಪರಿಷ್ಕರಿಸಬೇಕು ಎಂದು ವಿಜ್ಞಾನಿಗಳು ಮನವಿ ಮಾಡಿಕೊಂಡಿರುವುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಕೋವಿಡ್ 19 ವೈರಸ್ ಕೆಮ್ಮು, ಸೀನು ಹಾಗೂ ಹತ್ತಿರ ನಿಂತು ಮಾತನಾಡುವಾಗ ಚಿಕ್ಕ ದ್ರವಕಣವೂ ಕೂಡಾ ಮೂಗು, ಬಾಯಿ ಮೂಲಕ ಸೇರಿಕೊಂಡು ಸೋಂಕು ಹರಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಾಥಮಿಕವಾಗಿ ರೋಗ ಹರಡುವಿಕೆ ಬಗ್ಗೆ ಎಚ್ಚರಿಸಿತ್ತು.
ಈ ಬಗ್ಗೆ 32 ದೇಶಗಳ 239 ವಿಜ್ಞಾನಿಗಳು ಸಂಶೋಧನೆ ನಡೆಸಿದ್ದರು. ಕೋವಿಡ್ 19 ಸಣ್ಣ ದ್ರವ ಕಣವೊಂದು ಮನುಷ್ಯನಿಗೆ ಸೋಂಕು ಹರಡಲು ಕಾರಣವಾಗಬಲ್ಲದು ಎಂಬ ಬಗ್ಗೆ ಸಾಕ್ಷಿ ದೊರಕಿರುವುದಾಗಿ ವಿಜ್ಞಾನಿಗಳು ತಿಳಿಸಿದ್ದು, ಇದನ್ನು ಮುಂದಿನ ವಾರ ವಿಜ್ಞಾನ ಜರ್ನಲ್ ನಲ್ಲಿ ಪ್ರಕಟಿಸುವುದಾಗಿ ಹೇಳಿದ್ದಾರೆ.
ಸೋಂಕು ಗಾಳಿಯಲ್ಲಿ ಹರಡಲಿದೆ ಎಂಬ ಬಗ್ಗೆ ವಿಶ್ವಸಂಸ್ಥೆಗೆ ಬಹಿರಂಗ ಪತ್ರ ಬರೆದಿದ್ದು, ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಮನೆಯ ಹೊರಗಾಗಲಿ ಅಥವಾ ಕೋಣೆಯ ಒಳಗಾಗಲಿ ಸೀನಿದ ನಂತರ ಗಾಳಿಯಲ್ಲಿ ದೊಡ್ಡ ಪ್ರಮಾಣದಲ್ಲಿ ದ್ರವ ಪ್ರಮಾಣ ಗಾಳಿಯಲ್ಲಿ ಹರಡುತ್ತದೆ…ಅದರಲ್ಲಿನ ಅತಿ ಸಣ್ಣ ಕಣಗಳಿಂದಲೂ ಸೋಂಕು ಹರಡುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.