Advertisement
ರಾಜ್ಯ ಸರ್ಕಾರಕ್ಕೆ ವಾಣಿಜ್ಯ ತೆರಿಗೆ, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ ಹಾಗೂ ಸಾರಿಗೆ ವಲಯದಿಂದ ನಿಗದಿತ ಗುರಿ ತಲುಪಲು ಇನ್ನೂ ಸುಮಾರು 10 ರಿಂದ 12 ಸಾವಿರ ಕೋಟಿ ರೂ.ವರೆಗೆ ಸಂಗ್ರಹವಾಗಬೇಕಿದ್ದು, ಥಿಯೇಟರ್, ಮಾಲ್, ಕ್ಲಬ್, ಪಬ್ ಬಂದ್, ಮದುವೆ ಮತ್ತಿತರ ಕಾರ್ಯಕ್ರಮಗಳ ಮುಂದೂಡಿಕೆಯಿಂದಾಗಿ ಸರ್ಕಾರದ ಆದಾಯಕ್ಕೆ ಪೆಟ್ಟು ಬೀಳಲಿದೆ ಎಂಬುದು ಹಣಕಾಸು ಇಲಾಖೆಯ ಅಧಿಕಾರಿಗಳ ಅಳಲು.
Related Articles
Advertisement
ಹಣಕಾಸು ಸ್ಥಿತಿ ಕಷ್ಟಕರ: 2019-20ನೇ ಸಾಲಿನ ಪರಿಸ್ಥಿತಿ ಹೀಗಾದರೆ ಇನ್ನು 2020-21ನೇ ಸಾಲಿನ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಬಹುದು. 2020- 21ನೇ ಸಾಲಿನಲ್ಲಿ 1,28,107 ಲಕ್ಷ ಕೋಟಿ ರೂ.ಸಂಪನ್ಮೂಲ ಕ್ರೋಢೀಕರಣದ ಗುರಿ ಹೊಂದಿದ್ದು, 82,443 ಕೋಟಿ ರೂ.ವಾಣಿಜ್ಯ ತೆರಿಗೆ, 12,655 ಕೋಟಿ ರೂ.ನೋಂದಣಿ ಮತ್ತು ಮುದ್ರಾಂಕ, 22,700 ಕೋಟಿ ರೂ.ಅಬಕಾರಿ, 7,115 ಕೋಟಿ ರೂ. ಸಾರಿಗೆ ವಲಯದಿಂದ ಆದಾಯ ನಿರೀಕ್ಷಿಸಲಾಗಿದೆ.
ಆದರೆ, ಕೊರೊನಾ ಆತಂಕದಿಂದ ಉದ್ಯಮ ವಲಯದ ವಹಿವಾಟು ಕುಸಿದರೆ ಅದು ಮುಂದಿನ ವರ್ಷದ ಆರ್ಥಿಕತೆ ಮೇಲೂ ಪರಿಣಾಮ ಬೀರಬಹುದು. ಕೊರೆನಾ ಹಿನ್ನೆಲೆಯಲ್ಲಿ ವಿವಿಧ ವಲಯಗಳಿಂದ ತೆರಿಗೆ ವಿನಾಯಿತಿ ಮತ್ತಿತರ ಬೇಡಿಕೆಗಳು ಬರಬಹುದು. ಆಗ, ಪರಿಸ್ಥಿತಿ ನಿಭಾಯಿಸುವುದು ಮತ್ತಷ್ಟು ಕಷ್ಟವಾಗುತ್ತದೆ ಎಂದು ಹೇಳಲಾಗುತ್ತಿದೆ.
ಕೇಂದ್ರದಿಂದ ತೆರಿಗೆ ರೂಪದಲ್ಲಿ 28,591 ಕೋಟಿ ರೂ., ಸಹಾಯಾನುಧಾನ ರೂಪದಲ್ಲಿ 15,454 ಕೋಟಿ ರೂ.ನಿರೀಕ್ಷೆ ಮಾಡಲಾಗಿದೆಯಾದರೂ ದೇಶಾದ್ಯಂತ ಈಗಿನ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಅದೂ ನಿರೀಕ್ಷಿತ ಪ್ರಮಾಣದಲ್ಲಿ ಸಿಗುವುದು ಕಷ್ಟವಾಗಬಹುದು. ಹೀಗಾಗಿ, ಇದನ್ನೆಲ್ಲಾ ಸುಧಾರಿಸಿಕೊಳ್ಳಬೇಕಾದರೆ ಒಂದು ವರ್ಷ ಆಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮುಖ್ಯಮಂತ್ರಿ ತಾಕೀತು: ಕೊರೊನಾ ಹಿನ್ನೆಲೆಯಲ್ಲಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಮುಖ ಆದಾಯ ಸಂಗ್ರಹ ಇಲಾಖೆಗಳ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದು, ಪ್ರಸಕ್ತ ವರ್ಷದ ತೆರಿಗೆ ಗುರಿ ತಲುಪುವಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ಕಷ್ಟವಾಗಬಹುದು. ಕೊರೊನಾ ನೆಪ ಹೇಳಿ ತೆರಿಗೆ ಸಂಗ್ರಹ ಕಡೆ ನಿರ್ಲಕ್ಷ್ಯ ವಹಿಸುವುದು ಬೇಡ ಎಂದು ತಾಕೀತು ಸಹ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ನಿರ್ಮಾಣವಾಗಿರುವ ಪರಿಸ್ಥಿತಿ ನಿಜಕ್ಕೂ ರಾಜ್ಯದ ಆರ್ಥಿಕ ವಲಯಕ್ಕೆ ಕಳವಳಕಾರಿಯೇ. ಜನರು ಹೊರಗೆ ಬರದಿದ್ದರೆ ಖರೀದಿ-ಮಾರಾಟ ವಹಿವಾಟು ನಡೆಯದಿದ್ದರೆ ಹಣ ಚಲಾವಣೆಯಾದರೂ ಹೇಗೆ ಸಾಧ್ಯ? ಬಂದ್ ಘೋಷಣೆಯಿಂದ ದಿನಕ್ಕೆ 400 ಕೋಟಿ ರೂ. ವರೆಗೆ ರಾಜ್ಯದ ಖಜಾನೆಗೆ ಆದಾಯಕ್ಕೆ ಕೊಕ್ಕೆ ಬೀಳಬಹುದು. ಆರ್ಥಿಕ ವರ್ಷಾಂತ್ಯದ ಸಂದರ್ಭದಲ್ಲೇ ಈ ರೀತಿಯ ಸ್ಥಿತಿ ಗಂಭೀರ ಪರಿಣಾಮ ಬೀರಲಿದ್ದು, ಮುಂದಿನ ದಿನಗಳಲ್ಲಿ ಆರ್ಥಿಕ ನಿರ್ವಹಣೆ ಕಷ್ಟಕರವಾಗಲಿದೆ. -ಆರ್.ಜಿ.ಮುರಳೀಧರ್, ಆರ್ಥಿಕ ತಜ್ಞ * ಎಸ್.ಲಕ್ಷ್ಮಿನಾರಾಯಣ