ಬಳ್ಳಾರಿ: ಜಿಲ್ಲೆಯಲ್ಲೂ ಶಂಕಿತ ಕೊರೊನಾ ವೈರಸ್ ಪತ್ತೆಯಾಗಿದ್ದು, ಮೂವರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸ್ಪಷ್ಟಪಡಿಸಿದರು.
ನಗರದ ಡಿಸಿ ಕಚೇರಿ ಆವರಣದಲ್ಲಿ ಗ್ರಾಮೀಣ ಭಾಗದಲ್ಲಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ವಾಹನಕ್ಕೆ ಶುಕ್ರವಾರ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ನೋವೆಲ್ ಕೊರೊನಾ ವೈರಸ್ ಲಕ್ಷಣಗಳುಳ್ಳ ಪಟ್ಟಿಯಲ್ಲಿದ್ದಂತೆ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಜಿಂದಾಲ್ ವಿಮಾನ ನಿಲ್ದಾಣ ಮತ್ತು ಹೊಸಪೇಟೆಯಲ್ಲಿ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ರಕ್ತದ ಮಾದರಿಗಳನ್ನು ಪಡೆದು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಈ ಕುರಿತು ವರದಿ ಬರಲು 24 ಗಂಟೆಯಾಗಲಿದ್ದು, ವರದಿ ಬಂದ ನಂತರ ಸ್ಪಷ್ಟಪಡಿಸಲಾಗುವುದು ಎಂದರು.
ಕೊರೊನಾ ವೈರಸ್ ಗೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಟಾಸ್ಕ್ ಫೋರ್ಸ್ ಸಮಿತಿ ಸಭೆಯನ್ನೂ ಮಾಡಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸ್ವಲ್ಪ ಮುನ್ನೆಚ್ಚರಿಕೆ ಬೇಕು ಎಂದ ಡಿಸಿ ನಕುಲ್, ಇದಕ್ಕಾಗಿ ಡಿಸಿ ಕಚೇರಿ ಆವರಣದಲ್ಲಿನ ಸ್ಪಂದನ ಕೇಂದ್ರದಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದ್ದು, 08392-277100, 8277888866ಗೆ ದೂರವಾಣಿ ಕರೆ ಮಾಡಿ ಕೊರೊನಾ ವೈರಸ್ ಗೆ ಮಾಹಿತಿ ಪಡೆಯಬಹುದಾಗಿದೆ ಎಂದರು.
ಇದಕ್ಕೂ ಮುನ್ನ ಕೊರೊನಾ ವೈರಸ್ ಬಗ್ಗೆ ಗ್ರಾಮೀಣ ಭಾಗದ ಜನರಲ್ಲಿ ಜಾಗೃತಿ ಮೂಡಿಸುವ ಎಲ್ ಇಡಿ ಪರದೆಯುಳ್ಳ ವಾಹನಕ್ಕೆ ಚಾಲನೆ ನೀಡಿದರು. ಈ ವಾಹನ ಜಿಲ್ಲೆಯ 175 ಗ್ರಾಮಗಳ್ಳಿ 25 ದಿನಹಳ ಸಂಚಾರ ನಡೆಸಲಿದೆ. ಈ ಬಗ್ಗೆ ಕರಪತ್ರಗಳನ್ನೂ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಚ್.ಎಲ್.ಜನಾರ್ಧನ್, ಜಿಲ್ಲಾ ಶಸ್ರ್ತ ಚಿಕಿತ್ಸಕ ಡಾ. ಬಸರೆಡ್ಡಿ, ಡಾ.ಇಂದ್ರಾಣಿ, ಡಾ.ಆರ್.ಅನಿಲ್ ಕುಮಾರ್, ಡಾ.ವಿಜಯಲಕ್ಷ್ಮಿ, ಈಶ್ವರ ದಾಸಪ್ಪನವರ ಸೇರಿದಂತೆ ಹಲವರು ಇದ್ದರು.