Advertisement

ಜಗತ್ತಿಡೀ ವ್ಯಾಪಿಸುತ್ತಿದೆ ಕೊರೊನಾ

10:32 PM Mar 20, 2020 | Hari Prasad |

ಬೀಜಿಂಗ್‌/ಹೊಸದಿಲ್ಲಿ: ಚೀನದಲ್ಲಿ ಮರಣ ಮೃದಂಗ ನುಡಿಸಿರುವ ಕೊರೊನಾ ವೈರಸ್‌ ಜಗತ್ತಿನಾದ್ಯಂತ ವ್ಯಾಪಿಸುತ್ತಿದ್ದು, ಮತ್ತಷ್ಟು ರಾಷ್ಟ್ರಗಳಿಗೆ ಲಗ್ಗೆಯಿಡುತ್ತಿದೆ. ಬುಧ ವಾರ ಫ್ರಾನ್ಸ್‌ ನಲ್ಲಿ ಕೊರೊನಾಗೆ ಮೊದಲ ಬಲಿಯಾಗಿದ್ದು, ಗ್ರೀಸ್‌ನಲ್ಲೂ ಪ್ರಥಮ ಬಾರಿಗೆ ಮಹಿಳೆಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.

Advertisement

ದಕ್ಷಿಣ ಕೊರಿಯಾದಲ್ಲಿ ಸೋಂಕಿತರ ಸಂಖ್ಯೆ ಏರುತ್ತಲೇ ಇದ್ದು, ಬುಧವಾರ ಇದು 1,261 ಆಗಿದೆ. 11 ಮಂದಿ ಈವರೆಗೆ ಮೃತಪಟ್ಟಿದ್ದಾರೆ. ಇಲ್ಲಿರುವ ಅಮೆರಿಕದ ಯೋಧರೊಬ್ಬರಿಗೆ ಸೋಂಕಿರುವುದು ದೃಢಪಟ್ಟಿದೆ. ಇರಾನ್‌ನಲ್ಲಿ ಮತ್ತೆ ನಾಲ್ವರು ಕೋವಿಡ್‌-19ಗೆ ಬಲಿಯಾಗಿದ್ದು, ಮೃತರ ಸಂಖ್ಯೆ 19ಕ್ಕೇರಿದೆ. ಚೀನದಲ್ಲಿ ಈವರೆಗೆ 2,715 ಮಂದಿ ಸಾವಿಗೀಡಾಗಿದ್ದು, ಸೋಂಕಿತರ ಸಂಖ್ಯೆ 78064 ಆಗಿದೆ.

ಇನ್ನು, ರಕ್ತದ ಮಾದರಿಯ ಪರೀಕ್ಷೆಯಲ್ಲಿ ನೆಗೆಟಿವ್‌ ಎಂದು ವರದಿ ಬಂದ ಕಾರಣ ಜಪಾನ್‌ನ ಕ್ರೂಸ್‌ ನೌಕೆಯಿಂದ ತಮ್ಮ ತಮ್ಮ ಮನೆಗಳಿಗೆ ವಾಪಸಾಗಿದ್ದ 12ಕ್ಕೂ ಹೆಚ್ಚು ಮಂದಿಯಲ್ಲಿ ಮತ್ತೆ ರೋಗ
ಲಕ್ಷಣ ಕಂಡುಬಂದಿದೆ. ಇದು ಮತ್ತಷ್ಟು ಆತಂಕ ಸೃಷ್ಟಿಸಿದೆ.

ಆರೋಗ್ಯ ಸಚಿವಾಲಯದಿಂದ ಸೂಚನೆ: ಭಾರತಕ್ಕೆ ಕೊರೊನಾ ಎಂಟ್ರಿಯಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ, ಸೋಂಕು ಭೀತಿ ಮಾತ್ರ ಇದ್ದೇ ಇದೆ. ಹೀಗಾಗಿ, ದಕ್ಷಿಣ ಕೊರಿಯಾ, ಇಟಲಿ, ಇರಾನ್‌ ಸೇರಿದಂತೆ ಸೋಂಕು ವ್ಯಾಪಿಸಿರುವಂಥ ದೇಶಗಳಿಗೆ ಅನಗತ್ಯ ಪ್ರಯಾಣ ಕೈಗೊಳ್ಳದಂತೆ ನಾಗರಿಕರಿಗೆ ಬುಧವಾರ ಕೇಂದ್ರ ಆರೋಗ್ಯ ಸಚಿವಾಲಯ ಸಲಹೆ ನೀಡಿದೆ.

ವಿಮಾನ ಸಂಚಾರ ರದ್ದು: ಕೊರೊನಾವೈರಸ್‌ನಿಂದಾಗಿ ವಿಮಾನಗಳಲ್ಲಿ ಪ್ರಯಾಣಿಕರ ಸಂಖ್ಯೆಯೂ ಇಳಿಮುಖವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ತಿಂಗಳು 54 ಅಂತಾರಾಷ್ಟ್ರೀಯ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸುತ್ತಿರುವುದಾಗಿ ವಿಸ್ತಾರಾ ಘೋಷಿಸಿದೆ.

Advertisement

ಮಾರ್ಚ್‌ನಿಂದ ದಿಲ್ಲಿ-ಬ್ಯಾಂಕಾಕ್‌ ನಡುವೆ ಸಂಚರಿಸುವ 20 ವಿಮಾನಗಳು, ಮುಂಬಯಿ-ಸಿಂಗಾಪುರ ನಡುವಿನ 26 ಮತ್ತು ದಿಲ್ಲಿ-ಸಿಂಗಾಪುರ ನಡುವಿನ 8 ವಿಮಾನಗಳ ಸಂಚಾರ ರದ್ದುಮಾಡುತ್ತಿದ್ದೇವೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next