ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಪ್ರಮಾಣ ದಿನೇ ದಿನೇ ಏರಿಕೆಯಾಗುತ್ತಿದ್ದು ಇವರೆಗೂ 47 ಜನರಿಗೆ ಸೊಂಕು ಇರುವುದು ದೃಢಪಟ್ಟಿದೆ ಎಂದು ಮಾನವ ಸಂಪನ್ಲೂಲ ಸಚಿವಾಲಯ ತಿಳಿಸಿದೆ.
ಪಂಜಾಬ್, ಕರ್ನಾಟಕದಲ್ಲಿ ತಲಾ ಒಬ್ಬರು ಮತ್ತು ಪುಣೆಯಲ್ಲಿ ಇಬ್ಬರಿಗೆ ಸೋಂಕು ಇರುವುದು ಸೋಮವಾರ ಖಚಿತವಾಗಿದೆ.
ಇತ್ತೀಚಿಗಷ್ಟೆ ಅಮೆರಿಕಾದಿಂದ ವಾಪಾಸ್ಸಾಗಿದ್ದ ಸಾಫ್ಟ್ ವೇರ್ ಇಂಜಿನಿಯರ್ ಗೂ ಕೊರೊನಾ ಖಚಿತವಾಗಿದ್ದು ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕರ್ನಾಟಕದಲ್ಲಿ ದಾಖಲಾದ ಮೊದಲ ಪ್ರಕರಣ ಇದಾಗಿದೆ.
ಇಟಲಿಯಿಂದ ಹಿಂದಿರುಗಿದ್ದ ಪಂಜಾಬ್ ಮೂಲದ ವ್ಯಕ್ತಿಗೂ ಕೊರೊನಾ ಸೋಂಕು ಇರುವುದು ಧೃಢಪಟ್ಟಿದೆ. ಇತ್ತೀಚಿಗಷ್ಟೆ ದುಬೈನಿಂದ ಹಿಂದಿರುಗಿದ್ದ ಪುಣೆಯ ಇಬ್ಬರು ವ್ಯಕ್ತಿಗಳಿಗೂ ಕೋವಿಡ್-19 ಇರುವುದು ಖಚಿತವಾಗಿದೆ. ಇಬ್ಬರನ್ನೂ ನಾಯ್ಡು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಲಾಗಿದೆ. ಇವರ ಜೊತೆಗೆ ಆಗಮಿಸಿದ ಎಲ್ಲರ ಮೇಲೂ ತೀವ್ರ ನಿಗಾ ಇಡಲಾಗಿದೆ.
COVID-19 ಸೋಂಕು ಪೀಡಿತರ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ, ವಿದೇಶದಿಂದ ಆಗಮಿಸುವ ಪ್ರಯಾಣಿಕರನ್ನು ತೀವ್ರ ತಪಾಸಣೆ ಒಳಪಡಿಸಲಾಗುತ್ತಿದೆ.
ಏತನ್ಮಧ್ಯೆ COVID-19 ನಿಂದ ವಿಶ್ವದಾದ್ಯಂತ 3,800 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸೋಮವಾರ ರಾತ್ರಿಯವರೆಗೆ 1,10,000 ಕ್ಕೂ ಹೆಚ್ಚು ಜನರಿಗೆ ಸೋಂಕು ಇರುವುದು ಖಚಿತವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.