Advertisement

ಕೊರೊನಾ ಸೋಂಕಿತರ ಸಂಖ್ಯೆ 30ಕ್ಕೆ ; ಪಿಎಂ ಮೋದಿ ಬ್ರಸೆಲ್ಸ್‌ ಪ್ರವಾಸ ರದ್ದು

11:09 PM Mar 20, 2020 | Hari Prasad |

ಹೊಸದಿಲ್ಲಿ: ಮಾರಣಾಂತಿಕ ಕೊರೊನಾ ವೈರಸ್‌ ಇಡೀ ಜಗತ್ತಿನ ನಿದ್ದೆಗೆಡಿಸಿದೆ. ಇರಾನ್‌ಗೆ ಹೋಗಿ ಬಂದಿದ್ದ ಗಾಜಿಯಾಬಾದ್‌ನ ವ್ಯಕ್ತಿಗೂ ಸೋಂಕು ತಗುಲಿದ್ದು, ಕೊರೊನಾ ಸೋಂಕಿತರ ಸಂಖ್ಯೆ ಭಾರತದಲ್ಲಿ 30ಕ್ಕೇರಿದೆ.

Advertisement

ಗುರುಗ್ರಾಮದಲ್ಲಿ ಕಾರ್ಯನಿರ್ವಹಿಸುವ ಪೇಟಿಎಂ ಸಿಬಂದಿಯೊಬ್ಬರಿಗೆ ಕೊರೊನಾ ದೃಢ ಪಟ್ಟಿರುವ ಕಾರಣ, ಅವರೊಂದಿಗೆ ಸಂಪರ್ಕ ಹೊಂದಿದ್ದ ಐವರನ್ನು ದಿಲ್ಲಿಯಲ್ಲಿ ತೀವ್ರ ನಿಗಾದಲ್ಲಿ ಇಡಲಾಗಿದೆ.

ಸೋಂಕಿತ ವ್ಯಕ್ತಿ ಒಟ್ಟು 91 ಮಂದಿಯೊಂದಿಗೆ ಸಂಪರ್ಕದಲ್ಲಿದ್ದ ಎಂಬ ಮಾಹಿತಿಯೂ ಹೊರಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ, ಸೋಂಕು ದೃಢಪಟ್ಟಿರುವ 14 ಮಂದಿ ಇಟಲಿ ನಾಗರಿಕರನ್ನು ಐಟಿಬಿಪಿ ನಿಗಾ ಕೇಂದ್ರದಿಂದ ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ಗುರುವಾರ ಶಿಫ್ಟ್ ಮಾಡಲಾಗಿದೆ.

ಮೋದಿ ಪ್ರವಾಸ ರದ್ದು: ಕೊರೊನಾ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬ್ರಸೆಲ್ಸ್‌ ಪ್ರವಾಸ ರದ್ದಾಗಿದೆ. ಭಾರತ- ಐರೋಪ್ಯ ಒಕ್ಕೂಟ ಶೃಂಗದ ದಿನಾಂಕವನ್ನೂ ಬದಲಿಸಲಾಗುವುದು ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ರಾಜ್ಯಗಳಿಗೆ ಸೂಚನೆ: ಕೊರೋನಾ ಸೋಂಕು ಒಬ್ಬರಿಂದ ಒಬ್ಬರಿಗೆ ಅನಿರೀಕ್ಷಿತವಾಗಿ ಹಬ್ಬುವ ಕಾರಣ, ಸಾಮುದಾಯಿಕ ವ್ಯಾಪಿಸುವಿಕೆಗೆ ಕಡಿವಾಣ ಹಾಕಬೇಕಾದ ಅನಿವಾರ್ಯತೆಗೆ ನಾವು ಸಿಲುಕಿದ್ದೇವೆ. ಹಾಗಾಗಿ, ಎಲ್ಲ ಗ್ರಾಮ, ಬ್ಲಾಕ್‌ ಹಾಗೂ ಜಿಲ್ಲಾ ಮಟ್ಟದಲ್ಲಿ ಕ್ಷಿಪ್ರ ಕಾರ್ಯ ಪಡೆಯನ್ನು ರಚಿಸುವಂತೆ ಎಲ್ಲ ರಾಜ್ಯಗಳಿಗೂ ಸೂಚನೆ ರವಾನಿಸಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಮುಂದಿನ 3 ತಿಂಗಳುಗಳ ಕಾಲ ದೇಶದಲ್ಲಿ ಔಷಧಗಳಿಗೆ ಕೊರತೆ ಇರುವುದಿಲ್ಲ ಎಂದೂ ಸರಕಾರ ಸ್ಪಷ್ಟಪಡಿಸಿದೆ.

Advertisement

ಅಂತ್ಯಕ್ರಿಯೆ: ಕೊರೊನಾ ವರದಿ ನೆಗೆಟಿವ್‌ ಎಂದು ಬಂದಿದ್ದರೂ, ಸಾವಿಗೀಡಾದ 36 ವರ್ಷದ ಕೇರಳದ ವ್ಯಕ್ತಿಯ ಅಂತ್ಯಕ್ರಿಯೆ ಗುರುವಾರ ನೆರವೇರಿತು. ಆ ವ್ಯಕ್ತಿಯ ಕುಟುಂಬ ಸದಸ್ಯರಿಗೂ ಮೃತದೇಹವನ್ನು ಸಮೀಪಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ತಿಳಿಸಿದ್ದಾರೆ.

ಹೆಚ್ಚುವರಿ ನಿರ್ಬಂಧ: ಇಟಲಿ ಮತ್ತು ದಕ್ಷಿಣ ಕೊರಿಯಾದಿಂದ ಆಗಮಿಸುವ ಎಲ್ಲ ಪ್ರಯಾಣಿಕರಿಗೂ ಕೇಂದ್ರ ಸರಕಾರವು ಹೆಚ್ಚುವರಿ ವೀಸಾ ನಿರ್ಬಂಧವನ್ನು ವಿಧಿಸಿದೆ. ಆಯಾ ದೇಶಗಳ ಆರೋಗ್ಯ ಪ್ರಾಧಿಕಾರದಡಿ ಬರುವ ಪ್ರಯೋಗಾಲಯಗಳಿಂದ ತಮಗೆ ಕೋವಿಡ್‌-19 ಸೋಂಕು ಇಲ್ಲ ಎಂದು ದೃಢಪಡಿಸಿದ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ತೋರಿಸಿದರಷ್ಟೇ, ಅಂಥ ವರಿಗೆ ಭಾರತ ಪ್ರವೇಶಿಸಲು ಅವಕಾಶ ನೀಡಲಾಗುವುದು ಎಂದು ಸರಕಾರ ಹೇಳಿದೆ.

ಏರುತ್ತಿದೆ ಸೋಂಕಿತರ ಸಂಖ್ಯೆ: ಚೀನದಲ್ಲಿ ಗುರು ವಾರ 31 ಮಂದಿ ಮೃತಪಟ್ಟಿದ್ದು, ಮೃತರ ಸಂಖ್ಯೆ 3 ಸಾವಿರಕ್ಕೇರಿ, ಸೋಂಕಿತರ ಸಂಖ್ಯೆ 80,400 ಆಗಿದೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ಜಪಾನ್‌ ಭೇಟಿ ರದ್ದಾಗಿದೆ. ಸ್ವಿಜರ್ಲೆಂಡ್‌ನ‌ಲ್ಲಿ 74ರ ವೃದ್ಧೆ ಕೊರೊನಾದಿಂದ ಸಾವಿಗೀಡಾಗಿದ್ದು, ದೇಶದಲ್ಲಿ ಕೊರೊನಾಗೆ ಮೊದಲ ಬಲಿ ಆದಂತಾಗಿದೆ.

ಇನ್ನು, ದಕ್ಷಿಣ ಕೊರಿಯಾದಲ್ಲಿ ಸಾವಿನ ಸಂಖ್ಯೆ 35ಕ್ಕೇರಿದ್ದು, ಸೋಂಕಿತರ ಸಂಖ್ಯೆ 6 ಸಾವಿರ ದಾಟಿದೆ. ಇರಾನ್‌ನಲ್ಲಿ ಸಾವಿನ ಸಂಖ್ಯೆ ಗುರುವಾರ 107 ಆಗಿದ್ದು, 3,513 ಮಂದಿಗೆ ಸೋಂಕಿ ರುವುದು ಖಚಿತವಾಗಿದೆ. ಹೀಗಾಗಿ, ದೇಶಾದ್ಯಂತ ಎಲ್ಲ ಶಾಲೆ, ಕಾಲೇಜುಗಳಿಗೆ ಎಪ್ರಿಲ್‌ವರೆಗೂ ರಜೆ ಘೋಷಿಸಲಾ ಗಿದೆ. ಅಮೆರಿಕದಲ್ಲಿ 11 ಮಂದಿ ಮೃತಪಟ್ಟಿದ್ದಾರೆ.

ಚಿಕನ್‌, ಮಟನ್‌ ತಿಂದರೆ ಏನೂ ಆಗದು: ಕೋಳಿ ಮಾಂಸ, ಮಟನ್‌ ಮತ್ತು ಮೀನು ತಿನ್ನುವುದರಿಂದ ಕೊರೊನಾ ಹರಡುತ್ತದೆ ಎಂಬ ವಾದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳು ಸಿಕ್ಕಿಲ್ಲ. ಇವುಗಳನ್ನು ತಿನ್ನುವುದರಿಂದ ಸೋಂಕು ಹರಡುವುದಿಲ್ಲ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧ್ಯಕ್ಷ ಜಿ.ಎಸ್‌.ಜಿ. ಅಯ್ಯಂಗಾರ್‌ ತಿಳಿಸಿದ್ದಾರೆ.

ಅಲ್ಲದೆ, ಅತ್ಯಧಿಕ ತಾಪಮಾನದಲ್ಲಿ ವೈರಸ್‌ ಉಳಿಯುವುದೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮಾರಣಾಂತಿಕ ವೈರಸ್‌ನಿಂದಾಗಿ ಜಗತ್ತಿನಾದ್ಯಂತ 29 ಕೋಟಿ ಮಕ್ಕಳು ಶಾಲೆಯಿಂದ ದೂರ ಉಳಿಯು ವಂತಾಗಿದೆ ಎಂದು ಮೂಲಗಳು ತಿಳಿಸಿವೆ.

ಮಾನವನಿಂದ ನಾಯಿಗೆ ಸೋಂಕು!
ಅಚ್ಚರಿಯೆಂಬಂತೆ, ಕೊರೊನಾ ದೃಢಪಟ್ಟಿದ್ದ ಮಾಲೀಕನಿಂದ ಅವರ ಸಾಕು ನಾಯಿಗೂ ಸೋಂಕು ಹರಡಿರುವ ಪ್ರಕರಣ ಹಾಂಕಾಂಗ್‌ನಲ್ಲಿ ನಡೆದಿದೆ. 60 ವರ್ಷದ ಮಹಿಳೆಗೆ ಸೋಂಕಿರುವುದು ದೃಢಪಟ್ಟಿತ್ತು, ಈಗ ಅವರ ನಾಯಿಯ ರಕ್ತದ ಪರೀಕ್ಷೆಯ ವರದಿಯೂ ಪಾಸಿಟಿವ್‌ ಎಂದು ಬಂದಿದೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ, ಮಾನವನಿಂದ ನಾಯಿ, ಬೆಕ್ಕು ಮುಂತಾದ ಸಾಕು ಪ್ರಾಣಿಗಳಿಗೆ ಸೋಂಕು ಹರಡಬಹುದೇ ವಿನಾ, ಅಂಥ ಪ್ರಾಣಿಗಳಿಂದ ಮಾನವನಿಗೆ ಸೋಂಕು ತಗುಲದು ಎಂದು ಹಾಂಕಾಂಗ್‌ನ ತಜ್ಞರು ಹೇಳಿದ್ದಾರೆ. ಪ್ರಾಣಿಗಳಿಗೆ ಕೊರೊನಾ ಪಾಸಿಟಿವ್‌ ಬರುವ ಸಾಧ್ಯತೆಯಿರುತ್ತದೆ. ಹಾಗಂತ, ಆ ಪ್ರಾಣಿಯೊಂದಿಗೆ ಸಂಪರ್ಕ ಸಾಧಿಸುವ ಮನುಷ್ಯರಿಗೆ ಸೋಂಕು ಹರಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವ್ಯಾಪಾರ ನಷ್ಟ
ಕೊರೊನಾವೈರಸ್‌ನಿಂದಾಗಿ ಚೀನದಲ್ಲಿನ ಉತ್ಪಾದನಾ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದು, ಇದು ಜಗತ್ತಿನ ಅನೇಕ ರಾಷ್ಟ್ರಗಳ ಆರ್ಥಿಕತೆಯ ಮೇಲೂ ದುಷ್ಪರಿಣಾಮ ಬೀರಲಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ಈ ರೀತಿಯ ಪರಿಣಾಮ ಎದುರಿಸುವ ಟಾಪ್‌ 15 ರಾಷ್ಟ್ರಗಳಲ್ಲಿ ಭಾರತವೂ ಸೇರಿದ್ದು, ಭಾರತದ ವ್ಯಾಪಾರ ಕ್ಷೇತ್ರವು ಅಂದಾಜು 348 ದಶಲಕ್ಷ ಡಾಲರ್‌ ನಷ್ಟ ಅನುಭವಿಸಲಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.

ಭಾರತೀಯ ಬಾಲಕಿಗೆ ಸೋಂಕು
ದುಬಾೖನಲ್ಲಿನ 16 ವರ್ಷದ ಭಾರತೀಯ ಬಾಲಕಿಗೆ ಕೊರೊನಾ ಸೋಂಕು ತಗುಲಿದೆ. ಈ ಮೂಲಕ ಯುಎಇಯಲ್ಲಿ ಒಟ್ಟು 28 ಮಂದಿಗೆ ಸೋಂಕು ದೃಢಪಟ್ಟಂತಾಗಿದೆ. ದುಬಾೖನ ಇಂಡಿಯನ್‌ ಸ್ಕೂಲ್‌ನ ಬಾಲಕಿಗೆ ತನ್ನ ತಂದೆಯ ಮೂಲಕ ವೈರಸ್‌ ತಗುಲಿದ್ದು, ಗುರುವಾರದಿಂದಲೇ ಮುಂಜಾಗ್ರತಾ ಕ್ರಮವಾಗಿ ಶಾಲೆಗೆ ರಜೆ ಘೋಷಿಸಲಾಗಿದೆ.

ಕೊರೊನಾಪ್ರೂಫ್ ಕಾರು ಬಿಡುಗಡೆ!
ಕೊರೊನಾ ವೈರಸ್‌ ತಡೆಗಟ್ಟಬಲ್ಲ ಕಾರೊಂದನ್ನು ತಾನು ಬಿಡುಗಡೆ ಮಾಡಿರುವುದಾಗಿ ಚೀನದ ಕಾರು ತಯಾರಿಕಾ ಕಂಪೆನಿಗಳಲ್ಲೊಂದಾದ ‘ಗೀಲಿ’ ತಿಳಿಸಿದೆ. ಜನಪ್ರಿಯ ಐಶಾರಾಮಿ ಕಾರು ಬ್ರಾಂಡ್‌ಗಳಾದ ವೋಲ್ವೋ ಹಾಗೂ ಲೋಟಸ್‌ನ ಮಾತೃಸಂಸ್ಥೆಯಾದ ಈ ಕಂಪೆನಿ, ‘ ಐಕಾನ್‌’ ಹೆಸರಿನ ಎಸ್‌ಯುವಿ ಕಾರೊಂದನ್ನು ಗುರುವಾರ ಚೀನದ ಮಾರುಕಟ್ಟೆಗೆ ಪರಿಚಯಿಸಿದೆ.

ಇದರ ಲೋಕಾರ್ಪಣೆ ಕಾರ್ಯಕ್ರಮವನ್ನು ಕೊರೊನಾ ವೈರಸ್‌ ಮೊದಲು ಪತ್ತೆಯಾಗಿದ್ದ ಚೀನದ ವುಹಾನ್‌ ನಗರದಲ್ಲೇ ನಡೆಸಲಾಗಿದೆ. ಆ ವೇಳೆ ಪ್ರಕಟನೆ ಹೊರಡಿಸಿರುವ ಸಂಸ್ಥೆ, ‘ಗಾಳಿಯಿಂದ ಹರಡುವಂಥ ವೈರಸ್‌ಗಳನ್ನು ತಡೆಹಿಡಿಯುವಂಥ ಅತ್ಯಾಧುನಿಕ ತಂತ್ರಜ್ಞಾನವನ್ನು ಈ ಕಾರು ಒಳಗೊಂಡಿದ್ದು, ಕಾರೊಳಗೆ ಕುಳಿತ ಪ್ರಯಾಣಿಕರಿಗೆ ಪರಿಶುದ್ಧ ಗಾಳಿಯನ್ನು ಈ ಕಾರು ಸರಬರಾಜು ಮಾಡುತ್ತದೆ ಎಂದು ಹೇಳಿಕೊಂಡಿದೆ.

– ಜಗತ್ತಿನಾದ್ಯಂತ ಮೃತರ ಸಂಖ್ಯೆ 3,200ಕ್ಕೇರಿಕೆ, ಕೊರೊನಾ ಸೋಂಕಿತರು 95,300.

– ವೈರಸ್‌ನಿಂದಾಗಿ ಪ್ರಸಕ್ತ ವರ್ಷ ವಿಮಾನಯಾನ ಸಂಸ್ಥೆಗಳಿಗಾಗುವ ಅಂದಾಜು ನಷ್ಟ 113 ಶತಕೋಟಿ ಡಾಲರ್‌

– ದಿಲ್ಲಿಯಲ್ಲಿ ಎಲ್ಲ ಪ್ರಾಥಮಿಕ ಶಾಲೆಗಳಿಗೂ ಮಾ.31ರವರೆಗೆ ರಜೆ ಘೋಷಣೆ

– ಕಚೇರಿಗಳಲ್ಲಿ ಬಯೋಮೆಟ್ರಿಕ್‌ ಹಾಜರಾತಿಗೆ ತಾತ್ಕಾಲಿಕ ನಿರ್ಬಂಧ ಹೇರಿದ ದಿಲ್ಲಿ ಸರಕಾರ

– ಆರೋಗ್ಯ ವಿಮೆಯ ಬಗ್ಗೆ ವಿಚಾರಿಸುತ್ತಿರುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ

– ಚೀನದಿಂದ ಬಂದ ನೌಕೆಯಲ್ಲಿ ಇರುವ 16,076 ಪ್ರಯಾಣಿಕರು, ಸಿಬಂದಿಯನ್ನು ಭಾರತದ ಬಂದರು ಪ್ರವೇಶಿಸದಂತೆ ತಡೆದ ಅಧಿಕಾರಿಗಳು

– ಶಂಕಿತ ಕೊರೊನಾ ಪ್ರಕರಣ ಪತ್ತೆ ಹಿನ್ನೆಲೆ ಯೇಸುಕ್ರಿಸ್ತನ ಜನ್ಮಸ್ಥಳವಾದ ಜೆರುಸಲೇಂನ ಬೆತ್ಲೆಹೆಮ್‌ ಚರ್ಚ್‌ಗೆ ಬೀಗ

Advertisement

Udayavani is now on Telegram. Click here to join our channel and stay updated with the latest news.

Next