Advertisement

ವಿಐಪಿ ಮೂವ್‌ಮೆಂಟಿಗೂ ತಟ್ಟಿದ ಕೊರೊನಾ ಎಫೆಕ್ಟ್ !

11:18 PM Mar 10, 2020 | Lakshmi GovindaRaj |

ಬೆಂಗಳೂರು: ಕೊರೊನಾ ಪರಿಣಾಮ ಗಣ್ಯರು, ಅತಿಗಣ್ಯರ ಪ್ರವಾಸಕ್ಕೂ ತಟ್ಟಿದ್ದು, ರಾಜ್ಯಕ್ಕೆ ಆಗಮಿಸುವ ದೇಶ ಮತ್ತು ವಿದೇಶಿ ಗಣ್ಯರ ಸಂಖ್ಯೆಯ ಶೇಕಡಾ ಪ್ರಮಾಣದಲ್ಲಿ ಇಳಿಮುಖವಾಗಿದೆ. ಸಾಮಾನ್ಯವಾಗಿ ಗಣ್ಯ ವ್ಯಕ್ತಿಗಳು ಆಗಮಿಸುವ ಹಿನ್ನೆಲೆಯಲ್ಲಿ ರಾಜ್ಯದ ಗುಪ್ತಚರ ವಿಭಾಗ, ವಿಐಪಿ, ವಿವಿಐಪಿ ವಿಭಾಗದ ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿಗಳು ಇರುತ್ತವೆ.

Advertisement

ಬೆಂಗಳೂರು ಸೇರಿ ರಾಜ್ಯಕ್ಕೆ ಬೇಸಿಗೆ, ದಸರಾ, ದೀಪಾವಳಿ ಹಾಗೂ ವರ್ಷಾರಂಭದಲ್ಲಿ ದೇಶದ ನಾನಾ ರಾಜ್ಯಗಳಿಂದ ಹಾಗೂ ವಿದೇಶಗಳಿಂದ ನೂರಾರು ವ್ಯಕ್ತಿಗಳು ಆಗಮಿಸುತ್ತಾರೆ. ಆದರೆ, ಈ ಬಾರಿ ಬೇಸಿಗೆ ಆರಂಭದಲ್ಲೇ ಕೊರೊನಾ ವೈರಸ್‌ ಭಾದಿಸಿರುವುದರಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ.

ಇದೇ ಅವಧಿಯಲ್ಲಿ ಕಳೆದ ವರ್ಷಕ್ಕೆ ಹೊಲಿಸಿದರೆ ಈ ಬಾರಿಯ ದೇಶಿಯ ಪ್ರಯಾಣಿಕರ ಸಂಖ್ಯೆ ಶೇ.20-25ರಷ್ಟು ಹಾಗೂ ವಿದೇಶಿ ಪ್ರಯಾಣಿಕರ ಸಂಖ್ಯೆ ಶೇ.35-40 ರಷ್ಟು ಕುಸಿದಿದ್ದು, ಇದು ನಾನಾ ಕ್ಷೇತ್ರಗಳ ಆರ್ಥಿಕತೆ ಮೇಲೆ ಪೆಟ್ಟು ಬಿದ್ದಿದೆ ಎಂದು ಹೇಳಲಾಗಿದೆ.

ಪ್ರತಿನಿತ್ಯ ಒಂದಿಲ್ಲೊಂದು ಕಾರ್ಯಕ್ರಮ ಅಥವಾ ರಾಜ್ಯದ ಪ್ರವಾಸೋದ್ಯಮ ಸ್ಥಳಗಳಿಗೆ ಭೇಟಿ ನೀಡುವ ಸಲುವಾಗಿ ದೇಶ ಮತ್ತು ವಿದೇಶಿ ಗಣ್ಯರು ಹಾಗೂ ಅತಿಗಣ್ಯರು ಬೆಂಗಳೂರಿಗೆ ಆಗಮಿಸುತ್ತಿದ್ದರು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಬಹಳಷ್ಟು ಮಂದಿ ತಮ್ಮ ಪ್ರವಾಸ ಮೊಟಕುಗೊಳಿಸಿದ್ದು, ಮುಂಗಡ ಕಾಯ್ದಿರಿಸಿದ್ದ ವಿಮಾನ ಟಿಕೆಟ್‌ಗಳನ್ನು ರದ್ದುಗೊಳಿಸಿದ್ದಾರೆ.

ನ್ಯಾಯಾಧೀಶರ ಪ್ರವಾಸ ರದ್ದು: ಈ ಮಧ್ಯೆ, ಕಳೆದೊಂದು ವಾರದಲ್ಲಿ ಬೆಂಗಳೂರಿಗೆ ಆಗಮಿಸಬೇಕಿದ್ದ ಹತ್ತಾರು ಮಂದಿ ಗಣ್ಯರು, ಅತಿಗಣ್ಯರು ತಮ್ಮ ಪ್ರವಾಸ ರದ್ದುಗೊಳಿಸಿದ್ದಾರೆ. ಪ್ರತಿ ವರ್ಷ ಮಾರ್ಚ್‌ನಲ್ಲಿ ಉತ್ತರ ಭಾರತದ ಹಲವು ರಾಜ್ಯಗಳ ಹೈಕೋರ್ಟ್‌ ನ್ಯಾಯಮೂರ್ತಿಗಳು, ಸರ್ಕಾರಗಳ ಸಚಿವರು ಬೆಂಗಳೂರು ಅಥವಾ ರಾಜ್ಯದ ಇತರ ಜಿಲ್ಲೆಗಳ ಪ್ರವಾಸ ಕೈಗೊಂಡು ಬೇಸಿಗೆ ರಜೆ ಕಳೆಯುತ್ತಿದ್ದರು.

Advertisement

ಆದರೆ, ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಪ್ರವಾಸ ಮೊಟಕುಗೊಳಿಸಿದ್ದು, ಈಗಾಗಲೇ ಮುಂಗಡ ಕಾಯ್ದಿರಿಸಿದ್ದ ಟಿಕೆಟ್‌ನ್ನು ಸಹ ರದ್ದುಗೊಳಿಸಿದ್ದಾರೆ. ಈ ಪೈಕಿ ಆರಕ್ಕೂ ಅಧಿಕ ಮಂದಿ ನ್ಯಾಯಾಧೀಶರು ಹಾಗೂ ಮಹಾರಾಷ್ಟ್ರ, ತೆಲಂಗಾಣ, ಕೇರಳ ರಾಜ್ಯದ ಸಚಿವರು ಇದ್ದಾರೆ.

ನೆರೆ ರಾಜ್ಯಗಳಿಂದ ಬೆಂಗಳೂರಿಗೆ ಆಗಮಿಸುವವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಹಾಗೆಯೇ ಬೆಂಗಳೂರಿನಿಂದ ದೆಹಲಿ, ಉತ್ತರ ಪ್ರದೇಶ, ಜಮ್ಮು-ಕಾಶ್ಮೀರ ಸೇರಿ ನಾನಾ ರಾಜ್ಯಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಸಹ ತಮ್ಮ ಪ್ರವಾಸ ರದ್ದುಗೊಳಿಸಿದ್ದಾರೆ. ಹೀಗಾಗಿ, ಕೆಲ ವಿಮಾನಯಾನ ಸಂಸ್ಥೆಗಳು ಟಿಕೆಟ್‌ ರದ್ದು ದರವನ್ನು ಕಡಿಮೆ ಮಾಡಿವೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ಪ್ರವಾಸೋದ್ಯಮಕ್ಕೂ ಕುತ್ತು: ವಿದೇಶಿ ಪ್ರವಾಸಿಗರು ಕಡಿಮೆಯಾಗುತ್ತಿರುವುದು ಪ್ರವಾಸೋದ್ಯಮದ ಮೇಲೂ ಗಂಭೀರ ಪರಿಣಾಮ ಬೀರಿದೆ. ರಾಜ್ಯದ ಪ್ರವಾಸಿ ಸ್ಥಳಗಳು ಹಾಗೂ ಪಂಚತಾರಾ ಹೋಟೆಲ್‌ಗ‌ಳಲ್ಲಿ ಮುಂಗಡವಾಗಿ ಕಾಯ್ದಿರಿಸಿದ್ದ ಕೊಠಡಿಗಳನ್ನು ವಿದೇಶಿಗರು ರದ್ದುಪಡಿಸುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಇದು ಅಷ್ಟಾಗಿ ಪರಿಣಾಮ ಬೀರಿದಿದ್ದರೂ ಏಪ್ರಿಲ್‌ ನಂತರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಕುಮಾರ್‌ ಪುಷ್ಕರ್‌ ಹೇಳಿದರು.

ಕೊರೊನಾ ಭೀತಿಯಿಂದ ವಿದೇಶಿ ಪ್ರವಾಸಿಗರು ಪ್ರವಾಸ ಗಳನ್ನು ರದ್ದು ಪಡಿಸುತ್ತಿದ್ದಾರೆ. ಇದು ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರುತ್ತಿದೆ. ಇದೇ ರೀತಿ ಭೀತಿ ಮುಂದು ವರಿದರೆ ಐಪಿಎಲ್‌ ವಿಷಯದಲ್ಲಿಯೂ ಸರ್ಕಾರ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಜಾತ್ರೆ ಹಾಗೂ ಉತ್ಸವಗಳ ಮೇಲೂ ಪರಿಣಾಮ ಬೀರಲಿದೆ.
-ಸಿ.ಟಿ.ರವಿ, ಪ್ರವಾಸೋದ್ಯಮ ಸಚಿವ

* ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next