Advertisement

ಕೊರೊನಾ.. ಕರೋನಾ.. ಕೆರೋನಾ..?

11:29 PM Mar 08, 2020 | Lakshmi GovindaRaj |

ಎಲ್ಲೆಡೆ ಕೊರೊನಾ ಸೋಂಕು ಭೀತಿ ಹೆಚ್ಚಾಗಿದ್ದು, ರಾಜ್ಯದಲ್ಲಿ ಸೋಂಕು ಹರಡದಂತೆ ಸರ್ಕಾರ ಅಗತ್ಯ ಕ್ರಮಗಳ ಕೈಗೊಳ್ಳುತ್ತಿರುವುದು ತಿಳಿದಿರುವ ವಿಚಾರ. ರೋಗ ಹರಡುವ ವೈರಸ್‌ ಬಗ್ಗೆ ಪದ ಬಳಕೆಯನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮಾಡುತ್ತಿದ್ದಾರೆ. ಅನೇಕರು ಕೊರೊನಾ ಎಂಬುದನ್ನು ಕರೋನಾ, ಕರನಾ, ಕೋರನಾ ಎಂದೆಲ್ಲಾ ಪದ ಬಳಕೆ ಮಾಡುತ್ತಿದ್ದಾರೆ. ಈ ನಡುವೆ ಸಚಿವರೊಬ್ಬರು ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ “ಕೆರೋನಾ” ಎನ್ನುವ ಮೂಲಕ ಈ ಸಾಲಿಗೆ ಹೊಸ ಪದ ಸೃಷ್ಟಿಸಿದರು. ಅಲ್ಲದೇ ನೊವೆಲ್‌ ಕೊರೊನಾ ವೈರಸ್‌ ಸೋಂಕು ಡಿಸೆಂಬರ್‌ನಿಂದ ಇತ್ತೀಚೆಗೆ ಕಾಣಿಸಿಕೊಂಡಿದೆ.

Advertisement

ಆದರೆ ಸಚಿವರು ಮಾತನಾಡು ವಾಗ “ಕೆರೋನಾ ವೈರಸ್‌ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳು ಒಟ್ಟೊಟ್ಟಾಗಿ ಸೇರಿಕೊಂಡು ಆರು ತಿಂಗಳಿಂದ ಅಧ್ಯಯನ ಮಾಡಿದ್ದೇವೆ, ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ’ ಎನ್ನುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು. ಈ ಎರಡು ಅಂಶಗಳಿಂದ ಸುದ್ದಿಗೋಷ್ಠಿಯಲ್ಲಿದ್ದವರಿಗೆ ಯಾವುದು ಈ ಆರು ತಿಂಗಳಿಂದ ರಾಜ್ಯ ಸರ್ಕಾರದ ಎರಡು ಇಲಾಖೆಗಳು ಅಧ್ಯಯನ ನಡೆಸುತ್ತಿರುವ “ಕೆರೋನಾ ವೈರಸ್‌’ ಎಂಬ ಗೊಂದಲ ಮೂಡಿತು.

ಸಂಚಾರ ಪೊಲೀಸರಿಗೇ ಹವಾ!
ಕೊರೊನಾ ಭೀತಿಗೆ ಎಚ್ಚೆತ್ತುಕೊಂಡಿರುವ ಕೆಲವರು ಮಾಸ್ಕ್ಗಳ ಮೊರೆ ಹೋಗಿದ್ದಾರೆ. ಮತ್ತೂಂದೆಡೆ, ಸಂಚಾರ ಪೊಲೀಸರು ಡ್ರಿಂಕ್‌ ಆಂಡ್‌ ಡ್ರೈವ್‌ ಪ್ರಕರಣಗಳಲ್ಲಿ ವಾಹನ ಸವಾರರು ಮದ್ಯ ಸೇವಿಸಿದ್ದಾರಾ? ಇಲ್ಲವೇ? ಎಂಬುದನ್ನು ತಿಳಿಯಲು ಯಂತ್ರಗಳನ್ನು ಊದಲು ಹೇಳುತ್ತಾರೆ. ಅಲ್ಲದೆ, ಮದ್ಯಪಾನ ಬಗ್ಗೆ ಖಚಿತ ಪಡಿಸಿಕೊಳ್ಳಲು ಮುಖದ ಹತ್ತಿರ ಬಂದು ನಿಮ್ಮ ಹೆಸರು ಏನು? ಎಲ್ಲಿಂದ ಬಂದಿದ್ದಿರಿ? ಎಂದು ಕೇಳುತ್ತಿದ್ದ ಸಂಚಾರ ಪೊಲೀಸರಿಗೆ ವಾಹನ ಸವಾರರೇ “ಕೊರೊನಾ’ ಶಾಕ್‌ ಕೊಟ್ಟಿದ್ದಾರೆ!

ಇದೀಗ ಸಂಚಾರ ಪೊಲೀಸರು ಮತ್ತು ವಾಹನ ಸವಾರರ ನಡುವಿನ ವಾಕ್ಸಮರಕ್ಕೂ ಕಾರಣವಾಗಿದೆ. ಊದಲು ಹೇಳುವಾಗ ಹೊಸ ಪೈಪ್‌ ಹಾಕಿ ಎಂದು ವಾಹನ ಸವಾರ ಪಟ್ಟು ಹಿಡಿದರೆ, ಸಂಚಾರ ಪೊಲೀಸರು ಮೊದಲು ಊದಬೇಕು. ನಂತರ ಪೈಪ್‌ ಹಾಕಿ ಎಷ್ಟು ಪ್ರಮಾಣದಲ್ಲಿ ಕುಡಿದಿದ್ದಿರಾ ಎಂದು ಖಚಿತ ಪಡಿಸಿಕೊಳ್ಳುತ್ತೇವೆ ಎಂದು ಹೇಳುತ್ತಾರೆ. ಇಬ್ಬರ ನಡುವೆ ವಾಗ್ವಾದ ನಡೆಯುತ್ತಿದೆ. ಯಂತ್ರ ಊದಿದಾಗ ಸೋಂಕು ಹರಡುವ ಸಾಧ್ಯತೆಯಿದೆ. ನಿಮಗೂ ರೋಗ ಅಂಟಿಕೊಳ್ಳುತ್ತದೆ ಎಚ್ಚರಿಕೆಯಿಂದ ಇರುವಂತೆ ವಾಹನ ಸವಾರರೇ ಸಂಚಾರ ಪೊಲೀಸರಿಗೆ ಸಲಹೆ ನೀಡುತ್ತಿದ್ದಾರೆ. ಅದರಿಂದ ವಿಚಲಿತಗೊಂಡ ಸಂಚಾರ ಪೊಲೀಸರು ಪ್ರತಿಯೊಬ್ಬರಿಗೂ ಹೊಸ ಪೈಪ್‌ ಹಾಕಿ ಡ್ರಿಂಕ್‌ ಆ್ಯಂಡ್‌ ಡ್ರೈವ್‌ ಪರಿಶೀಲನೆ ಮಾಡುತ್ತಿದ್ದಾರಂತೆ.

ಯಾವ ಕಡೆ ಧಿಕ್ಕಾರ?
ಸರ್‌.ಪುಟ್ಟಣ್ಣ ಚೆಟ್ಟಿ ಪುರಭವನದ ಮುಂದೆ ಪ್ರತಿಭಟನೆಗೆ ಅವಕಾಶ ನೀಡದೆ ಇರುವುದನ್ನು ವಿರೋಧಿಸಿ ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯ ಕೌನ್ಸಿಲ್‌ ಕಟ್ಟಡದ ಎದುರು ವಿರೋಧ ಪಕ್ಷದ ಸದಸ್ಯರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಇದೇ ಸಮಯಕ್ಕೆ ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ತಮ್ಮ ಬೇಡಿಕೆ ಈಡೇರಿಸುವಂತೆ ಕೌನ್ಸಿಲ್‌ ಕಟ್ಟಡದ ಸಮೀಪವೇ ಪ್ರತಿಭಟನೆ ಮಾಡಲು ಪ್ರಾರಂಭಿಸಿದರು. ವಿರೋಧ ಪಕ್ಷದ ಸದಸ್ಯರ ಪ್ರತಿಭಟನೆ ವರದಿ ಮಾಡುತ್ತಿದ್ದ ಕ್ಯಾಮರಾದ ಕಣ್ಣುಗಳು ನೌಕರರ ಸಂಘದ ಪ್ರತಿಭಟನೆಯತ್ತ ತಿರುಗಿದವು.ಆದರೆ, ಮಾಧ್ಯಮ ಪ್ರತಿನಿಧಿಗಳು ಮಾತ್ರ ಯಾವ ಧಿಕ್ಕಾರದ ಕಡೆ ಹೋಗಬೇಕು ಎಂದು ತಿಳಿಯದೆ ಗೊಂದಲಕ್ಕೆ ಬಿದ್ದರು. ಮಾಧ್ಯಮಗಳ ಗಮನ ಸೆಳೆಯಲು ಎರಡೂ ಕಡೆ ಪೈಪೋಟಿಯ ಮೇಲೆ ಧಿಕ್ಕಾರದ ಕೂಗು ಕೇಳಿಸಿತು!

Advertisement

* ಲಕ್ಷ್ಮಿ, ಪಾಗೋಜಿ, ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next