Advertisement

ಗಂಡನಿಗೆ ಗಂಡಾಂತರ ವದಂತಿಗೆ ತಾಳಿಯಲ್ಲಿದ್ದ ಹವಳ ಪುಡಿ ಪುಡಿ!

09:00 AM Jul 06, 2017 | |

ದಾವಣಗೆರೆ: ಮಾಂಗಲ್ಯ ಸರದ ಜತೆಗೆ ಕೆಂಪು  ಹವಳ ಇದ್ದರೆ ನಿಮ್ಮ ಗಂಡನಿಗೆ ಗಂಡಾಂತರ ತಪ್ಪಿದ್ದಲ್ಲ. ತಕ್ಷಣ ಅವುಗಳನ್ನು ಜಜ್ಜಿ ಹಾಕಿ, ಇಲ್ಲವಾದರೆ ಬೆಳಗಾಗುವುದರೊಳಗೆ ನಿಮ್ಮ ಪತಿಗೆ ಪ್ರಾಣಾಪಾಯ ಆಗಲಿದೆ…! 
ಇಂತಹದ್ದೊಂದು ಸುದ್ದಿ ಕೇಳಿ ಜಿಲ್ಲೆಯ  ಗ್ರಾಮೀಣ ಭಾಗದ ಮಹಿಳೆಯರು ತಾಳಿಯಲ್ಲಿದ್ದ (ಮಾಂಗಲ್ಯ ಸರ)ಹವಳಗಳನ್ನು ಜಜ್ಜಿ ಪುಡಿ ಪುಡಿ ಮಾಡಿದ ಘಟನೆ ಬುಧವಾರ ನಡೆದಿದೆ.

Advertisement

ಗ್ರಾಮೀಣ ಭಾಗದ ಹರಪನಹಳ್ಳಿ, ಜಗಳೂರು  ತಾಲೂಕಿನ ವಿವಿಧೆಡೆ ಸೇರಿ ಪಾಲಿಕೆ ವ್ಯಾಪ್ತಿಯ ಹಳೆ ಕುಂದುವಾಡ, ಹೊಸ ಕುಂದುವಾಡ, ಎಸ್‌.ಎ. ರವೀಂದ್ರನಾಥ ನಗರ, ಅಮೃತ ನಗರದಲ್ಲಿ ಈ ವಿದ್ಯಮಾನ ನಡೆದಿದೆ. ಅದರಲ್ಲೂ
ವಿಶೇಷವಾಗಿ ಕುಂದುವಾಡ ಗ್ರಾಮದಲ್ಲಿ ಶೇ.80ರಷ್ಟು ಸುಮಂಗಲೆಯರು ತಮ್ಮ ತಾಳಿಯಲ್ಲಿದ್ದ ಹವಳಗಳನ್ನು ಕಲ್ಲಿನಿಂದ ಜಜ್ಜಿ ಹಾಕಿದ್ದಾರೆ. 

ಮಂಗಳವಾರ ರಾತ್ರಿ 11ರಿಂದ ಈ ಹವಳದ ಸುದ್ದಿ ಹಬ್ಬಿದೆ. ಅನೇಕರು ದೂರವಾಣಿ ಕರೆ, ಸಾಮಾಜಿಕ ಜಾಲತಾಣಗಳ ಮೂಲಕ ಈ ಸುದ್ದಿ ಹಬ್ಬಿಸಿದ್ದಾರೆ. ಹೀಗೆ ಸುದ್ದಿ ಹಬ್ಬಿಸಿದವರು ಈಗೊಂದು ದೊಡ್ಡ ಗಂಡಾಂತರ ಬಂದಿದೆ.
ತಾಳಿಯಲ್ಲಿನ ಕೆಂಪು ಹವಳ ಜಜ್ಜದೇ ಇದ್ದುದಕ್ಕೆ ಅಲ್ಲಿ ಇಷ್ಟು ಜನ ಸತ್ತಿದ್ದಾರೆ, ಇಲ್ಲಿ ಅಷ್ಟು ಜನ ಸತ್ತಿದ್ದಾರೆ ಅಂದೆಲ್ಲಾ ಪುಕಾರು ಸೃಷ್ಟಿಸಿದ್ದಾರೆ. ಇದನ್ನು ಕೇಳಿದ ಜನ 10-15 ರೂ.ನ ಹವಳ ಹೋದರೆ ಹೋಗಲಿ, ನಮ್ಮ ಗಂಡಂದಿರು 
ಕ್ಷೇಮವಾಗಿದ್ದರೆ ಸಾಕು ಎಂದು ಈ ರೀತಿ ಮಾಡಿದ್ದಾರೆ. 

ಕುಂದುವಾಡದ ಪೈಲ್ವಾನ್‌ ಗಣೇಶ್‌ರಿಗೂ ಸಹ ಮೊಬೈಲ್‌ಗೆ ಈ ರೀತಿಯ ಕರೆಬಂದಿದೆ. ಬಳ್ಳಾರಿಯಿಂದ ಅವರ ಸಂಬಂಧಿಕರೊಬ್ಬರು ಕರೆಮಾಡಿ, ಯಾಕೆ? ಏನು? ಎಂದು ಕೇಳಬೇಡ. ಮೂಢನಂಬಿಕೆಯೋ, ವೈಜ್ಞಾನಿಕವೋ 
ಕೆದಕಬೇಡ. ತಕ್ಷಣ ನಿಮ್ಮ ಮನೆಯವರ ತಾಳಿಯಲ್ಲಿರುವ ಹವಳವನ್ನು ಜಜ್ಜಿ ಹಾಕಿಸು ಎಂಬುದಾಗಿ ಮಧ್ಯರಾತ್ರಿ 12.30ರ ಸುಮಾರಿಗೆ ತಿಳಿಸಿದ್ದಾರೆ. ಇದನ್ನು ಗಣೇಶ್‌ ಒಪ್ಪದೇ ಇದ್ದಾಗ, ಎಲ್ಲಾ ಊರುಗಳಲ್ಲಿ ಆಗುತ್ತಿದೆ. ನಿಮ್ಮ ಊರಲ್ಲೂ ಇದು ನಡೆಯುತ್ತಿದೆ ಎಂದಿದ್ದಾರೆ. ಆಯಿತು ನೋಡೋಣ ಎಂದು ಅವರು ಸುಮ್ಮನಾಗಿದ್ದಾರೆ.  ಆದರೆ, ಮತ್ತದೇ ವ್ಯಕ್ತಿ ಬೆಳಗ್ಗೆ 4 ಗಂಟೆಗೆ ಮತ್ತೆ ಕರೆ ಮಾಡಿ, ಉದಾಸೀನ ಮಾಡಬೇಡ. ಇದೀಗ ಹರಪನಹಳ್ಳಿಯಲ್ಲಿ 5 ಜನ ಸತ್ತಿದ್ದಾರಂತೆ ಎಂದು ಎಚ್ಚರಿಸಿದ್ದಾರೆ. ಕೊನೆಗೆ ಗಣೇಶ್‌ ಮನೆಯಿಂದ ಹೊರಬಂದಿದ್ದಾರೆ. ಕರೆ ಮಾಡಿದ ವ್ಯಕ್ತಿ
ಹೇಳಿದಂತೆ ಗ್ರಾಮದ ಅನೇಕ ಮಹಿಳೆಯರು ಅಷ್ಟು ಹೊತ್ತಲ್ಲೇ ಎಚ್ಚರಗೊಂಡು ಹವಳ ಒಡೆದು ಹಾಕುತ್ತಿದ್ದುದು ಕಂಡುಬಂದಿದೆ. ಇದರಿಂದ ಚಕಿತರಾದ ಗಣೇಶ್‌, ಹಲವರಿಗೆ ತಿಳಿಹೇಳುವ ಯತ್ನಮಾಡಿದ್ದಾರೆ. ಆದರೆ, ಯಾರೂ ಸಹ
ಅವರ ಮಾತು ನಂಬಿಲ್ಲ. ಗ್ರಾಮದ ಬಹುತೇಕ ಮುತ್ತೆ$çದೆಯರು ತಮ್ಮ ತಾಳಿಯಲ್ಲಿದ್ದ ಹವಳ ಜಜ್ಜಿ ಹಾಕಿದ್ದಾರೆ. ಕೊನೆಗೆ ಇದು ಮಾಧ್ಯಮಗಳಿಗೆ ಗೊತ್ತಾಗಿದೆ. ಒಂದಷ್ಟು ಜನ ತಿಳಿ ಹೇಳಿದರೂ ಗೃಹಿಣಿಯರು ಕಿವಿಗೊಟ್ಟಿಲ್ಲ. ಜಿಲ್ಲೆಯ
ಅನೇಕ ಗ್ರಾಮಗಳಲ್ಲಿ ಈ ರೀತಿಯ ಘಟನೆ ನಡೆದಿರುವುದು ತಿಳಿದುಬಂದಿದೆ. ಹರಪನಹಳ್ಳಿ, ಜಗಳೂರು ತಾಲೂಕಿನ ಗ್ರಾಮಗಳಲ್ಲಿ ಸುದ್ದಿ ಕಾಳಿYಚ್ಚಿನಂತೆ ಹಬ್ಬಿದೆ.

ಅವಿದ್ಯಾವಂತ, ಗ್ರಾಮೀಣ ಮಹಿಳೆಯರೇ ಈ ವದಂತಿ ನಂಬಿ ಕೆಂಪು ಹವಳ ಜಜ್ಜಿ ಹಾಕಿದ್ದಾರೆ. ಕೆಲವರಿಗೆ ತವರು ಮನೆಯವರೇ ದೂರವಾಣಿ ಕರೆ ಮಾಡಿದ್ದಾರಂತೆ. ರಾತ್ರೋ ರಾತ್ರಿ ಹಬ್ಬಿದ ಪುಕಾರು ತಾಳಿಯಲ್ಲಿದ್ದ ಹವಳಕ್ಕೆ ಕಂಟಕ ತಂದಿದೆ.  

Advertisement
Advertisement

Udayavani is now on Telegram. Click here to join our channel and stay updated with the latest news.

Next