ಲಕ್ಷ್ಮೇಶ್ವರ: ತಾಲೂಕಿನ ಅಡರಕಟ್ಟಿ, ಬಡ್ನಿ, ಬಟ್ಟೂರ, ಹರದಗಟ್ಟಿ ಗ್ರಾಮ ವ್ಯಾಪ್ತಿಯ ಹಿಂಗಾರಿನ ಜೋಳದ ಬೆಳೆಯನ್ನು ಕಳ್ಳರು ರಾತ್ರೋರಾತ್ರಿ ಕಟಾವು ಮಾಡುತ್ತಿರುವುದು ರೈತರ ನಿದ್ದೆ ಮತ್ತು ನೆಮ್ಮದಿ ಕೆಡಿಸಿದೆ.
ಅತಿವೃಷ್ಟಿ, ಅನಾವೃಷ್ಟಿ, ರೋಗಬಾಧೆ, ಸಾಲಬಾಧೆ, ಬೆಲೆ ಕುಸಿತ ಹೀಗೆ ಹತ್ತಾರು ಸಮಸ್ಯೆಗಳ ನಡುವೆ ರೈತ ಸಂಕಷ್ಟದ ಜೀವನ ನಡೆಸುವುದು ಸಾಮಾನ್ಯ. ಆದರೆ, ಕಳೆದೆರಡು ವರ್ಷಗಳಿಂದ ತಾಲೂಕಿನ ರೈತರು ಕಳ್ಳರ ಕಾಟಕ್ಕೆ ನಲುಗಿ ಹೋಗಿದ್ದಾರೆ.
ಪ್ರಸಕ್ತ ಮುಂಗಾರಿನಲ್ಲಿ ಅತಿಯಾದ ಮಳೆಯಿಂದ ಬಹುತೇಕ ಬೆಳೆಗಳು ಹಾನಿಗೀಡಾಗಿವೆ. ಹಿಂಗಾರಿನಲ್ಲಿ ಬೆಳೆದ ಜೋಳ, ಕಡಲೆ, ಗೋಧಿ ಇತರೇ ಬೆಳೆಗಳು ಇತ್ತೀಚೆಗೆ ಸುರಿದ ಅಕಾಲಿಕ ಮಳೆಗೆ ಹಾಳಾಗಿವೆ. ಈನಡುವೆ ಅಳಿದುಳಿದ ಜೋಳದ ಬೆಳೆ ಈಗ ತೆನೆ ಕಟ್ಟಿ ಕೊಯ್ಲಿಗೆ ಬಂದಿದೆ. ಆದರೆ, ಕಳ್ಳರು ರಾತ್ರೋರಾತ್ರಿಜೋಳದ ತೆನೆಗಳನ್ನು ಮಾತ್ರ ಕೊಯ್ದುಕೊಂಡುಹೋಗುತ್ತಿರುವ ಘಟನೆ ರೈತರನ್ನು ಚಿಂತೆಗೀಡು ಮಾಡಿದೆ.
ರೈತರ ಮತ್ತು ರೈತರ ಜೀವನಾಡಿಗಳ ಪ್ರಮುಖ ಆಹಾರ ಬೆಳೆ ಜೋಳದ ತೆನೆಯನ್ನುಕೊಯ್ದುಕೊಂಡು ಹೋಗುತ್ತಿರುವುದರಿಂದ ರೈತರು ರಾತ್ರಿ ಭಯದೊಂದಿಗೆ ಬೆಳೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷವೂ ಲಕ್ಷ್ಮೇಶ್ವರ, ಅಡರಕಟ್ಟಿ ಭಾಗದಲ್ಲಿ ಕಳ್ಳರು ಅನೇಕ ರೈತರ ಬೆಳೆ ಕೊಯ್ದುಕೊಂಡು ಹೋಗಿದ್ದರು. ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಲಿಲ್ಲ. ಇದರಿಂದ ಕಳ್ಳರು ಈ ವರ್ಷವೂ ತಮ್ಮ ಕೈಚಳಕಮುಂದುವರೆಸಿದ್ದು, ಈಗಾಗಲೇ ಹತ್ತಾರು ಎಕರೆಜಮೀನಿನಲ್ಲಿ ಉತ್ತಮವಾಗಿ ಬೆಳೆದ ತೆನೆಗಳನ್ನು ಮಾತ್ರ ಕತ್ತರಿಸಿಕೊಂಡು ಹೋಗಿದ್ದಾರೆ. ಇದರಿಂದಾಗಿ ವರ್ಷಪೂರ್ತಿ ತಿನ್ನುವ ಅನ್ನಕ್ಕೂ ಬರ ಬಂದಂತಾಗಿದೆ.
ಇರುವ ಎರಡ್ಮೂರು ಎಕರೆ ಜಮೀನಿನಲ್ಲಿನ ಬೆಳೆ ಕೊಯ್ಲಿಗೆ ಬಂದ ವೇಳೆ ರಾತ್ರೋರಾತ್ರಿ ಕಳವು ಮಾಡಿದರೆ ಏನೂ ಮಾಡಬೇಕು ಎಂದು ಬಡ್ನಿ ಗ್ರಾಮದ ದಾನಪ್ಪಗೌಡ ಸಾಲಮನಿ, ನಿಂಗನಗೌಡ ಪಾಟೀಲ, ಶರಣಪ್ಪ ಚಕಾರದ, ರಾಮಣ್ಣ ಅಣ್ಣಿಗೇರಿ, ಬಸನಗೌಡ ಸಾಲಮನಿ ಸೇರಿ ಅವಲತ್ತುಕೊಳ್ಳುತ್ತಿದ್ದಾರೆ.
ಬೆಳೆ ಕಳ್ಳರ ಹಿಡಿತೇವೆ: ಈ ಕುರಿತು ಸಿಪಿಐ ವಿಕಾಸ ಲಮಾಣಿ ಅವರನ್ನು ಸಂಪರ್ಕಿಸಿದಾಗ, ಜೋಳದ ಬೆಳೆ ಕಳ್ಳತನ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದಾಗ್ಯೂ, ಈ ಹಿಂದೆ ಕುರಿ, ಮೇಕೆ ಕಳ್ಳರನ್ನು ಹಿಡಿದ ಶೈಲಿಯಲ್ಲಿ ಬೆಳೆ ಕಳ್ಳರನ್ನು ಹಿಡಿಯಲು ಜಾಲ ಬೀಸುತ್ತೇವೆ ಎಂದರು.