Advertisement

ಜೋಳದ ಹುಡುಗ ಲಾಭ ಮಾಡ್ಯಾನೆ!

11:03 AM Oct 16, 2017 | |

ಬಿಳಿರಂಗನ ಬೆಟ್ಟದ ಸೋಲಿಗರು ಮಾತ್ರ ಬೆಲೆಯುತ್ತಿದ್ದ, ಕಣ್ಮರೆಯಾಗುತ್ತಿದ್ದ ಬಹುವರ್ಣದ ಮುಸುಕಿನ ಜೋಳದ ತಳಿಯನ್ನು ಹುಡುಕಿ ತಂದು, ಬೆಳೆದು, ಆಸಕ್ತರಿಗೆ ಹಂಚುತ್ತಿರುವ  ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಯುವಕ ಅಭಿಲಾಷ್‌ರ ಯಶೋಗಾಥೆ ಇಲ್ಲಿದೆ.

Advertisement

ಪದವಿ ಮುಗಿದ ಮೇಲೆ ಯಾರದೇ ಕೈ ಕೆಳಗೆ ಕೆಲಸ ಮಾಡಲು ಅಭಿಲಾಷ್‌ನ ಮನಸ್ಸು ಒಲ್ಲೆ ಎಂದಿತು. ಆಗಲೇ ಅವನು ಕೃಷಿ ಕಡೆಗೆ ಮುಖ ಮಾಡಿದ್ದು.  ಕೃಷಿ ಕುಟುಂಬದಿಂದ ಬಂದ ಅಭಿಲಾಷ್‌ ತಂದೆ  ರೇಚಣ್ಣ ಕೃಷಿ ಪಂಡಿತರು. ಅವರು ದೇಸಿ ಬೀಜಗಳ ಬೆಳೆಯವುದರಲ್ಲಿ ನಿರತರಾಗಿದ್ದಾರೆ. ವಿಷಮುಕ್ತ ಕೃಷಿಯನ್ನು ಕಲಿಯಲೆಂದು ರೈತ ನಾಯಕ ಎಂ.ಡಿ ನಂಜುಂಡಸ್ವಾಮಿಯವರು ಚಾಮರಾಜನಗರದಲ್ಲಿ ಕಟ್ಟಿದ ಅಮೃತಭೂಮಿಗೆ ಹೋಗಿ ಅಲ್ಲಿ ತರಬೇತಿ ಪಡೆದು ಬಿಳಿರಂಗನ ಬೆಟ್ಟದ ಸೋಲಿಗರ ಪೋಡುಗಳಿಂದ ಸಂಗ್ರಹಿಸಿ ತಂದ ಬಣ್ಣದ ಮುಸುಕಿನ ಜೋಳವನ್ನು ಬೆಳೆಯಲಾಗಿತ್ತು.

ಯಾವುದೇ ರಾಸಾಯನಿಕ ಬಳಸದೇ, ಹುಲುಸಾಗಿ ಬೆಳೆದಿದ್ದ ಈ ಜೋಳ ಅಭಿಲಾಷ್‌ ಅವರ ಗಮನ ಸೆಳೆಯಿತು. ಅಮೃತಭೂಮಿಗೆ ಬಂದವರೆಲ್ಲ ಬಣ್ಣದ ಮುಸುಕಿನಜೋಳದ ಗುಣಗಾನ ಮಾಡುತ್ತಿರುವುದು ಅಭಿಲಾಷ್‌ ಅವರಲ್ಲಿ ಅದನ್ನು ಬೆಳೆಸುವ ಆಸೆಯನ್ನು ಮತ್ತಷ್ಟು ಹೆಚ್ಚಿಸಿತು. ತರಬೇತಿ ಮುಗಿಸಿಕೊಂಡು ಊರಿಗೆ ಬಂದು ಹಿಂಗಾರಿ  ಜೋಳದ ರೀತಿ ಬೇಸಿಗೆಯಲ್ಲೇ ಬಣ್ಣದ ಜೋಳ ಬೆಳೆಯಲು ಅಪ್ಪನ ಮನವೊಲಿಸಿದರು.ಮಾವಿನ ತೋಟದ ನಡುವಿನ ಎರಡು ಎಕರೆ ಖಾಲಿ ಜಾಗದಲ್ಲಿ ಬಣ್ಣದ ಮುಸುಕಿನ ಜೋಳ ಬೆಳೆಯಲು ತೀರ್ಮಾನಿಸಿ, ಮಿತ್ರ ನವೀನ ಅವರಿಂದ ಇಪ್ಪತ್ತು ಸೇರು ಬೀಜವನ್ನು ಎರವಲು ಪಡೆದುಕೊಂಡರು.

ಮಾರ್ಚ್‌ ಆರಂಭದಲ್ಲಿ ಸಾಲಿನಿಂದ ಸಾಲಿಗೆ ಒಂದೂವರೆ ಅಡಿ ಮತ್ತು ಗಿಡದಿಂದ ಗಿಡಕ್ಕೆ ಒಂದು ಅಡಿ ಅಂತರ ಕೊಟ್ಟು ಮುಸುಕಿನ ಜೋಳದ ಬೀಜಗಳನ್ನು ಬಿತ್ತನೆ ಮಾಡಲಾಯಿತು. ಪೈರು ಬೆಳವಣಿಗೆ ಹಂತಕ್ಕೆ ಬರುವ ಹೊತ್ತಿಗೆ, ಕೊಳವೆಬಾವಿಯಲ್ಲಿ ನೀರು ನಿಂತು ಹೋಯಿತು. ತುಂತುರು ನೀರಾವರಿ ಮೂಲಕ ಸಿಕ್ಕಷ್ಟೇ ನೀರನ್ನು ನೀಡಿದರು. ಬರನಿರೋಧಕ ಗುಣವಿದ್ದ ಮುಸುಕಿನ ಜೋಳ ಆರು ಅಡಿ ಎತ್ತರದವರೆಗೂ ಬೆಳೆದು ನಿಂತಿತು.

ಫ‌ಸಲು
ನೀರಿನ ಕೊರತೆಯ ಕಾರಣ ಇಳುವರಿ ಕುಂಠಿತವಾಗಿದೆ. ಎಕರೆಗೆ 8 ರಿಂದ 10 ಕ್ವಿಂಟಾಲ್‌ ಬೀಜ ಸಿಕ್ಕಿದೆ. ನೀರು ಸರಿಯಾಗಿದ್ದೂ, ಸರಿಯಾಗಿ ಕಳೆ ತೆಗೆದಲ್ಲಿ ಎಕರೆಗೆ 10 -15 ಕ್ವಿಂಟಾಲ್‌ ಬೆಳೆಯಬಹುದು. ಈ ಜೋಳ ಎತ್ತರ ಬೆಳೆಯೋದರಿಂದ ಹೆಚ್ಚು ಹಸಿರಾಗಿರುವುದರಿಂದ ದನಕರುಗಳಿಗೆ ಒಳ್ಳೆಯ ಮೇವಾಗುತ್ತದೆ. ಸಾವಯವಕ್ಕೆ ಒಗ್ಗುವ ಬಣ್ಣದ ಮುಸುಕಿನ ಜೋಳ ನಾಲ್ಕರಿಂದ ನಾಲ್ಕೂವರೆ ತಿಂಗಳ ಬೆಳೆ. ಈ ಜೋಳದ ಕಾಳು ಹೆಚ್ಚು ಸಿಹಿಯಾಗಿರುವುದರಿಂದ ಹಕ್ಕಿ, ಹಂದಿಗಳ ಕಾಟ ಇದ್ದೇ ಇದೆ. ಇದಕ್ಕೆ ಯಾವುದೇ ರೋಗಗಳ ಬಾಧೆ ಇರುವುದಿಲ್ಲ.

Advertisement

ಮಾರಾಟ ಹಾಗೂ ಲಾಭ
ಮುಸುಕಿನ ಜೋಳದ ಬೀಜವನ್ನು ರಾಜ್ಯವಲ್ಲದೇ ಮಹಾರಾಷ್ಟ, ತಮಿಳುನಾಡು ರಾಜ್ಯದ ರೈತರು 50 ರೂ.ಗೆ ಕೆಜಿಯಂತೆ ಖರೀದಿಸುತ್ತಿದ್ದಾರೆ. ಕೆಲ ರೈತರು ಈ ವರ್ಷ 10 ಕೆಜಿ ಬೀಜ ತೆಗೆದುಕೊಂಡು ಹೋಗಿ ಮುಂದಿನ ವರ್ಷ 20 ಕೆಜಿ ಬೀಜ ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ಜೋಳದ ಕೃಷಿಯಲ್ಲಿ ಎರಡು ಎಕರೆಯಲ್ಲಿ ಖರ್ಚು ತೆಗೆದು 50 ಸಾವಿರ ರೂಗಳ ಲಾಭ ಈ ಬಾರಿ ಸಿಕ್ಕಿದೆ ಎನ್ನುತ್ತಾರೆ ಅಭಿಲಾಷ್‌. 

ಅಭಿಲಾಷ್‌ ಹಾಗೂ ಅವರ ಮಿತ್ರ ನವೀನ್‌ರಂಥ ಬಿಸಿರಕ್ತದ ಹುಡುಗರು ದೇಸಿ ಮುಸುಕಿನ ಜೋಳವನ್ನು ಹುಡುಕಿ, ಬೆಳೆದು, ಬೀಜ ಹಂಚುವ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಕರ್ನಾಟಕದ ಉದ್ದಕ್ಕೂ ದೇಸಿ ಮುಸುಕಿನ ಜೋಳದ ಕಂಪು ಹಬ್ಬಿಸುವ ಉಮೇದು ಇವರದು. 

* ಗುರುರಾಜ ಬ. ಕನ್ನೂರ
ಕೈ ಜೋಡಿಸುವವರಿಗೆ ಮಾಹಿತಿಗೆ: 9739762973.

Advertisement

Udayavani is now on Telegram. Click here to join our channel and stay updated with the latest news.

Next