ಧಾರವಾಡ: ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ 12ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕಾರ್ಬೆವ್ಯಾಕ್ಸ್ ಲಸಿಕೆ ಅಭಿಯಾನಕ್ಕೆ ಬುಧವಾರ ಚಾಲನೆ ದೊರೆಯಿತು.
ಚಾಲನೆ ನೀಡಿದ ಡಿಸಿ ನಿತೇಶ ಪಾಟೀಲ ಮಾತನಾಡಿ, ಜಿಲ್ಲೆಯ 12 ರಿಂದ 14 ವರ್ಷದ ಮಕ್ಕಳಿಗೆ ಕಾರ್ಬೆವ್ಯಾಕ್ಸ್ ಲಸಿಕೆ ನೀಡುವ ಅಭಿಯಾನ ಆರಂಭಿಸಲಾಗಿದೆ. ಪ್ರಸ್ತುತ 72,695 ಮಕ್ಕಳಿಗೆ ಕಾರ್ಬೆವ್ಯಾಕ್ಸ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಲಸಿಕಾ ಅಭಿಯಾನಕ್ಕೆ ಅಗತ್ಯವಿರುವ ಆರೋಗ್ಯ ಸಿಬ್ಬಂದಿ, ಇತರೆ ಸೌಲಭ್ಯಗಳನ್ನು ಆರೋಗ್ಯ ಇಲಾಖೆ ಸಿದ್ಧಪಡಿಸಿಕೊಂಡಿದೆ ಎಂದರು.
ಈ ಅಭಿಯಾನ ಯಶಸ್ವಿಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಣ ಸಂಸ್ಥೆಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಶಾಲಾ ಮುಖ್ಯಸ್ಥರು ತಮ್ಮ ಶಾಲೆಯಲ್ಲಿ ಕಲಿಯುತ್ತಿರುವ 12 ರಿಂದ 14 ವರ್ಷದೊಳಗಿನ ಮಕ್ಕಳ ಮಾಹಿತಿ, ಅವರ ಆಧಾರ ಕಾರ್ಡ್, ಮೊಬೈಲ್ ಸಂಖ್ಯೆ ಪಡೆದು ಸಿದ್ಧಪಡಿಸಿಕೊಳ್ಳಬೇಕು. ಲಸಿಕೆ ನೀಡಲು ಆಗಮಿಸುವ ಕುರಿತು ಆರೋಗ್ಯ ಇಲಾಖೆ ನೀಡುವ ದಿನಗಳಂದು ಖುದ್ದು ಹಾಜರಿದ್ದು, ಸಹಕಾರ ನೀಡಬೇಕು ಎಂದರು.
ಜಿಪಂ ಸಿಇಒ ಡಾ|ಸುರೇಶ ಇಟ್ನಾಳ, ಜಿಲ್ಲಾ ಆರೋಗ್ಯಾಧಿಕಾರಿ ಡಾ|ಬಿ.ಸಿ.ಕರಿಗೌಡರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ|ಶಿವಕುಮಾರ ಮಾನಕರ, ಎಸ್‌ಎಂಒ ಡಬ್ಲೂಎಚ್‌ಒ ಡಾ|ಸಿದ್ಧಲಿಂಗಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ|ಸುಜಾತಾ ಹಸವಿಮಠ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ|ಶಶಿ ಪಾಟೀಲ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ|ಅಯ್ಯನಗೌಡ ಪಾಟೀಲ, ಧಾರವಾಡ ತಾಲೂಕು ವೈದ್ಯಾ ಧಿಕಾರಿ ಡಾ|ತನುಜಾ. ಕೆ.ಎನ್, ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ ಸೇರಿದಂತೆ ಸೇರಿದಂತೆ ಹಲವರು ಇದ್ದರು. ಜಿಲ್ಲಾ ಆರ್‌ಸಿಹೆಚ್‌ಒ ಅಧಿಕಾರಿ ಡಾ|ಎಸ್.ಎಂ. ಹೊನಕೇರಿ ನಿರೂಪಿಸಿ, ವಂದಿಸಿದರು.