Advertisement

ಕಾಪಿ ವೀರ ನಾ ಹೃದಯ ಚೋರ ನಾ!

06:05 PM Jul 11, 2017 | Harsha Rao |

ನಮ್ಮಿಬ್ಬರ ನಡುವೆ ಪ್ರೀತಿ ಹುಟ್ಟಿದ್ದೇ ಒಂದು ವಿಚಿತ್ರ ಸಂದರ್ಭದಲ್ಲಿ. ಅದನ್ನು ನೆನೆಸಿಕೊಂಡರೆ ಇದೆಲ್ಲವೂ ನಾನು ಕಂಡ ಕನಸೇ ಎಂದೆನಿಸುತ್ತದೆ. ನೀನು ಎದುರಿಗೆ ಬಂದಾಗ ಇದು ಕನಸಲ್ಲಾ ನಿಜಾ ಎಂದು ಈ ಹೃದಯ ಕುಣಿದು ಕುಪ್ಪಳಿಸುತ್ತದೆ. ನೀನು ನನ್ನ ಹೃದಯ ಕದ್ದ ಕಥೆಯನ್ನು ಹೇಳಲೇಬೇಕೆಂಬ ಆಸೆ ಮೂಡಿದೆ.

Advertisement

ನಾನು ಶಾಂತ ಸ್ವಭಾವದ ಹುಡುಗನಲ್ಲದಿದ್ದರೂ, ತುಂಬಾ ತುಂಟನೂ ಅಲ್ಲ. ನಾವು ಮಾಡುವ ತುಂಟಾಟಗಳು ಪ್ರಿನ್ಸಿಪಾಲರವರೆಗೆ ಹೋಗುತ್ತಿರಲಿಲ್ಲ. ಬರೀ ಲೆಕ್ಚರರ್‌ ಹೇಳುವ ಬುದ್ಧಿಮಾತಿಗೆ ಸೀಮಿತವಾಗಿದ್ದವು. ತುಂಟಾಟದಲ್ಲಿಯೇ ಕಾಲ ಕಳೆಯುತ್ತಿದ್ದ ಹೃದಯದ ಬಲೆಗೆ ಬಿದ್ದ ಹೊಳೆಯುವ ನಕ್ಷತ್ರದ ಮೀನು ನೀನು.

ಪ್ರಥಮ ಸೆಮಿಸ್ಟರ್‌ನ ಪರೀಕ್ಷೆಗಳು ಪ್ರಾರಂಭವಾಗಿದ್ದವು. ರಾತ್ರಿಪೂರ್ತಿ ನಿದ್ದೆಗೆಟ್ಟು ಓದುವ ವಿದ್ಯಾರ್ಥಿ ನಾನಲ್ಲ. ಕಾಪಿಚೀಟಿ ಸಿದ್ಧಪಡಿಸಿಟ್ಟುಕೊಂಡರೂ, ಅದನ್ನು ತೆರೆದು ನೋಡಿ ಬರೆಯುವ ಧೈರ್ಯ ನನಗಿಲ್ಲದ ಕಾರಣ ಅವುಗಳನ್ನು ಸ್ನೇಹಿತರಿಗೆ ಕೊಟ್ಟು ಎಕ್ಸಾಮ್‌ ಹಾಲ್‌ನಲ್ಲಿ ಪೆಚ್ಚುಮೋರೆ ಹಾಕಿಕೊಂಡು ಕುಳಿತಿದ್ದೆ. ನನ್ನ ಪಕ್ಕದಲ್ಲಿಯ ಸೀಟ್‌ ಖಾಲಿ ಇತ್ತು.

ಗಾಳಿಯಲ್ಲಿ ತೇಲಿ ಬರುವ ಹೂವಿನಂತೆ ಅವಸರದಿಂದ ಬಂದ ನೀನು ನನ್ನ ಪಕ್ಕದಲ್ಲಿ ಕುಳಿತು ಸುತ್ತಲೂ ನೋಡುತ್ತಿದ್ದೆ. ನಿನ್ನನ್ನೇ ನೋಡುತ್ತ ಕುಳಿತಿದ್ದ ನನ್ನನ್ನು ನೋಡಿ “ಒಂದು ಹೆಲ್ಪ್ ಮಾಡುತ್ತೀರಾ ಪ್ಲೀಸ್‌’ ಎಂದು ಕೇಳಿದೆ. “ಏನು?’ ಎಂದು ಕೇಳುವಷ್ಟರಲ್ಲಿ ನಿನ್ನ ಹತ್ತಿರವಿದ್ದ ಕಾಪಿ ಚೀಟಿಗಳನ್ನು ನನ್ನ ಕೈಗೆ ಕೊಟ್ಟು “ದಯವಿಟ್ಟು ಇವುಗಳನ್ನು ಇಟ್ಕೊಳಿ. ನನಗೆ ಭಯವಾಗುತ್ತಿದೆ’ ಎಂದು ಹೇಳಿ ಏನು ಅರಿಯದವರಂತೆ ಕುಳಿತುಕೊಂಡೆ.

ನಿನ್ನನ್ನು ನೋಡುತ್ತಲೇ ಈ ಹೃದಯ ಪ್ರೀತಿಯ ತಂಗಾಳಿಯಲ್ಲಿ ತೇಲತೊಡಗಿತು. ನಾನೇ ಬರೆದುಕೊಂಡು ಬಂದಿದ್ದ ಕಾಪಿ ಚೀಟಿಗಳನ್ನು ಇಟ್ಟುಕೊಳ್ಳಲು ಹೆದರಿ, ಅವನ್ನೆಲ್ಲಾ ಗೆಳೆಯರಿಗೆ ದಾಟಿಸಿದ್ದ ನಾನು, ಈಗ ನಿನ್ನ ಕಾಪಿ ಚೀಟಿಗಳನ್ನು ಬಚ್ಚಿಟ್ಟುಕೊಳ್ಳುವ ಧೈರ್ಯ ಮಾಡಿದ್ದೆ! ಇದೇ ನಮ್ಮಿಬ್ಬರ ಮೊದಲ ಬೇಟಿ. ಓರೆಗಣ್ಣಿನಿಂದ ನೋಡುತ್ತಿದ್ದ ನಿನ್ನ ನೋಟ ನನ್ನ ಹೃದಯವನ್ನು ಲೂಟಿ ಮಾಡಿಬಿಟ್ಟಿತು.

Advertisement

ಈ ಪರೀಕ್ಷೆಗೆ ಮುಂಚೆ ಒಂದು ಸಾರಿಯೂ ಕಾಣಿಸಿಕೊಳ್ಳದ ನೀನು ನಂತರದ ದಿನಗಳಲ್ಲಿ ಪ್ರತಿದಿನ ಕಾಲೇಜಿನ ಕಾರಿಡಾರ್‌ನಲ್ಲಿ ಭೇಟಿಯಾಗುತ್ತಿದ್ದೆ. ಒಬ್ಬರನ್ನೊಬ್ಬರು ನೋಡಿದಾಗ ಕೈ ಸನ್ನೆ ಮಾಡಿ ಮುಗುಳ್ನಗುತ್ತಿದ್ದೆ. ಒಂದು ದಿನ ಗ್ರಂಥಾಲಯದಲ್ಲಿ ಬೇಟಿಯಾದಾಗ ಮಾತಿನಿಂದ ಪ್ರಾರಂಭವಾದ ಸ್ನೇಹ ಮೊಬೈಲ್‌ವರೆಗೆ ಹೋಯಿತು.

ದಿನಗಳು ಕಳೆದಂತೆ ನಮ್ಮಿಬ್ಬರ ನಡುವಿನ ಅಂತರ ಕಡಿಮೆಯಾಗುತ್ತಾ, ಸ್ನೇಹದ ಆಶ್ರಯದಲ್ಲಿ ಪ್ರೀತಿಯೂ ಮೊಳಕೆ ಒಡೆಯಿತು. ಮೊದಮೊದಲು ತಮಾಷೆಗೆ “ಐ ಲವ್‌ ಯು’ ಹೇಳುತ್ತಿದ್ದ ನನಗೆ ಈಗ ಹೇಳಲು ನಾಲಗೆ ತಡವರಿಸಲಾರಂಭಿಸಿತು.

ಹಳೆಯ ಸ್ನೇಹಿತೆ ಎನ್ನುವ ಧೈರ್ಯದಿಂದ ಕಾಲೇಜಿನ ಪಾರ್ಕಿನಲ್ಲಿ ಮಾತನಾಡುತ್ತಾ ಕುಳಿತಾಗ ಧೈರ್ಯ ಮಾಡಿ ಐ ಲವ್‌ ಯು ಎಂದು ಹೇಳಿಯೇ ಬಿಟ್ಟೆ. ಆಗ ನೀನು ನೋಡಿದ ನೋಟಕ್ಕೆ ಕೈಕಾಲುಗಳು ನಡುಗುತಿದ್ದವು. ನಂತರ ಮುಗುಳ್ನಕ್ಕು ತಲೆಗೆ ಹೊಡೆದು ಅಲ್ಲಿಂದ ಓಡಿ ಹೋದಾಗ ನನಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ.

ಒಂದೇ ಹೃದಯ, ಎರಡು ದೇಹದಂತೆ ಸಾಗುತ್ತಿರುವ ನಮ್ಮ ಪ್ರೀತಿಯ ಪಯಣಕ್ಕೆ ಒಂದು ವರ್ಷ ತುಂಬಿದೆ. ಈ ಸೆಮಿಸ್ಟರ್‌ ಎಕ್ಸಾಮ್‌ನಲ್ಲಿ ಪಕ್ಕದಲ್ಲಿ ಕುಳಿತ ಹುಡುಗನ ಕೈಯಲ್ಲಿದ್ದ ಕಾಪಿ ಚೀಟಿಯು ನಮ್ಮ ಪ್ರೀತಿಯನ್ನು ಮೆಲುಕು ಹಾಕುವಂತೆ ಮಾಡಿತು. 

ಲವ್‌ ಯು ಮೈ ಡಿಯರ್‌ ಸ್ವೀಟ್‌ ಹಾರ್ಟ್‌.

– ಮಹಾಂತೇಶ ದೊಡವಾಡ, ಬೆಳಗಾವಿ

Advertisement

Udayavani is now on Telegram. Click here to join our channel and stay updated with the latest news.

Next