ಭುವನೇಶ್ವರ : ಒಡಿಶಾ ಆರೋಗ್ಯ ಸಚಿವ ನಬಾ ದಾಸ್ ಅವರ ಮೇಲೆ ಗುಂಡಿನ ದಾಳಿ ನಡೆಸಿದ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಗೋಪಾಲ್ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ.
ಸಚಿವ ನಬಾ ದಾಸ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಗಾಂಧಿ ಚಕ್ ಕಾರಿನಿಂದ ಇಳಿಯುತ್ತಿದ್ದಾಗ ಅವರನ್ನು ಗುರಿಯಾಗಿಸಿ ದಾಳಿ ಮಾಡಲಾಗಿತ್ತು. ಎದೆಯ ಭಾಗಕ್ಕೆ ಗುಂಡು ತಗುಲಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ಅವರು ಭಾನುವಾರ ಸಂಜೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ:ನೈಟ್ ಕ್ಲಬ್ ಮೇಲೆ ಬಂದೂಕುಧಾರಿಗಳ ಫೈರಿಂಗ್: 8 ಮಂದಿ ಮೃತ್ಯು
ಘಟನೆಯ ಬಳಿಕ ಗೋಪಾಲ್ ದಾಸ್ ರನ್ನು ಬಂಧಿಸಲಾಗಿದ್ದು, ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿರುವ ಗೋಪಾಲ್ ದಾಸ್ ಪತ್ನಿ ಜ್ಯೋತಿದಾಸ್ “ಏನಾಯಿತು ಎಂದು ನನಗೆ ಗೊತ್ತಿಲ್ಲ. ನಾನು ಮನೆಯಲ್ಲಿದ್ದೆ. ಟಿವಿ ನೋಡಿದ ಬಳಿಕ ವಿಚಾರ ಗೊತ್ತಾಯಿತು. ನಾನು ಅವರ ಬಳಿ ಬೆಳಗ್ಗೆಯಿಂದ ಮಾತನಾಡಿಲ್ಲ. ಮಗಳು ವಿಡಿಯೋ ಕಾಲ್ ನಲ್ಲಿ ಮಾತನಾಡಿದ್ದಳು. ಅವರಿಗೆ ಮಾನಸಿಕ ಆರೋಗ್ಯ ಸಮಸ್ಯೆ ಇದೆ. ಕಳೆದ 7-8 ವರ್ಷದಿಂದ ಅವರು ಈ ಸಂಬಂಧ ಚಿಕಿತ್ಸೆ ಪಡೆಯುತ್ತಿದ್ದಾರೆ. ಔಷಧಿ ತೆಗೆದುಕೊಂಡ ಬಳಿಕ ಸರಿಯಾಗಿ ಇರುತ್ತಾರೆ. 5 ತಿಂಗಳ ಹಿಂದೆ ಅವರು ಮನೆಗೆ ಬಂದಿದ್ದರು ಎಂದು ಪತ್ನಿ ಹೇಳಿದ್ದಾರೆ.
ಗೋಪಾಲ್ ದಾಸ್ ಯಾಕೆ ಗುಂಡು ಹಾರಿಸಿದ್ದಾರೆ ಎನ್ನುವುದು ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಿದೆ.