ಕಾಶ್ಮೀರ: ದೇವಸ್ಥಾನದ ಒಳಗೆ ಪ್ರವೇಶಿಸಲು ಯತ್ನಿಸಿದ್ದ ಪೊಲೀಸ್ ಕಾನ್ಸ್ ಟೇಬಲ್ ಅನ್ನು ದೇಶ ವಿರೋಧಿ ಆಗಂತುಕ ಎಂದು ತಪ್ಪಾಗಿ ಭಾವಿಸಿ ಭದ್ರತಾ ಸಿಬಂದಿ ನಡೆಸಿದ ಗುಂಡಿನ ದಾಳಿಗೆ ಸಾವನ್ನಪ್ಪಿರುವ ಘಟನೆ ಕಾಶ್ಮೀರದ ದೇವಸ್ಥಾನದಲ್ಲಿ ನಡೆದಿದೆ.
ಇದನ್ನೂ ಓದಿ:1.2 ಕೋಟಿ ವೈದ್ಯಕೀಯ ಸಲಹೆ; ಟೆಲಿಮೆಡಿಸಿನ್ ಬಳಕೆ ಕರ್ನಾಟಕ ನಂ.2
ಮೃತ ಕಾನ್ಸ್ ಟೇಬಲ್ ಅನ್ನು ಅಜಯ್ ಧಾರ್ ಎಂದು ಗುರುತಿಸಲಾಗಿದ್ದು, ಇವರು ಹಂದ್ವಾರಾ ಲಂಗೇಟ್ ನಿವಾಸಿ. ಇದೊಂದು ದುರದೃಷ್ಟಕರ ಘಟನೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಗಳವಾರ(ಸೆ.21) ರಾತ್ರಿ ಕಾನ್ಸ್ ಟೇಬಲ್ ಧಾರ್ ಅವರು ದೇವಸ್ಥಾನದ ಬಾಗಿಲನ್ನು ಬಡಿದು, ಒಳ ಹೋಗಲು ಪ್ರಯತ್ನಿಸಿದ್ದರು. ಈ ಸಂದರ್ಭದಲ್ಲಿ ಗಸ್ತು ತಿರುಗುತ್ತಿದ್ದ ಭದ್ರತಾ ಸಿಬಂದಿ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.
ಗಾಳಿಯಲ್ಲಿ ಗುಂಡು ಹಾರಿಸಿದ ನಂತರವೂ ಕಾನ್ಸ್ ಟೇಬಲ್ ಧಾರ್ ಅವರು ತಮ್ಮ ಗುರುತನ್ನು ಬಹಿರಂಗಪಡಿಸದೇ ಬಾಗಿಲು ಬಡಿಯುವುದನ್ನು ಮುಂದುವರಿಸಿದ್ದರು. ಈ ಸಂದರ್ಭದಲ್ಲಿ ಇದೊಂದು ದಾಳಿ ಯತ್ನ ಎಂದು ಭಾವಿಸಿದ ಭದ್ರತಾ ಸಿಬಂದಿ ಗುಂಡಿನ ದಾಳಿ ನಡೆಸಿದ್ದರು. ನಿಜಕ್ಕೂ ಇದೊಂದು ಗುರುತನ್ನು ತಪ್ಪಾಗಿ ಪರಿಗಣಿಸಿದ ಘಟನೆಯಾಗಿದೆ ಎಂದು ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ವಿಜಯ್ ಕುಮಾರ್ ತಿಳಿಸಿದ್ದಾರೆ.
ಕಾಶ್ಮೀರದಲ್ಲಿನ ಬಹುತೇಕ ದೇವಸ್ಥಾನಗಳಿಗೆ ಪೊಲೀಸರ ಕಾವಲು ಇದ್ದು, ಕಾಶ್ಮೀರದಲ್ಲಿ ನಡೆಯುತ್ತಿರುವ ಸಂಶಯದ ಭದ್ರತಾ ಘಟನೆಗೆ ಇದು ಮತ್ತೊಂದು ಸೇರ್ಪಡೆಯಾಗಿದೆ ಎಂದು ವರದಿ ಹೇಳಿದೆ. ಈ ಹಿಂದೆಯೂ ಭದ್ರತಾ ಪಡೆ ಸಿಬಂದಿಗಳು ರಾತ್ರಿ ವೇಳೆ ತಪ್ಪು ತಿಳಿದು ನಾಗರಿಕರನ್ನು ಗುಂಡಿಟ್ಟು ಹತ್ಯೆಗೈದ ಪ್ರಕರಣಗಳು ಇದೆ ಎಂದು ವರದಿ ವಿವರಿಸಿದೆ.