Advertisement

ಮೈತ್ರಿಕೂಟ ಮುಖಂಡರ ಸಮನ್ವಯ ಸಭೆ

02:20 PM Oct 18, 2018 | |

ಶಿವಮೊಗ್ಗ: ಹಳ್ಳಿಗಳಲ್ಲಿ ಪ್ರತಿ 20 ಮನೆಗಳಿಗೆ ಕಾಂಗ್ರೆಸ್‌- ಜೆಡಿಎಸ್‌ ಕಾರ್ಯಕರ್ತರ ಮೂವರ ತಂಡ ರಚಿಸಿ ಅವರಿಗೆ ಪ್ರಚಾರದ ಜವಾಬ್ದಾರಿ ನೀಡಲು ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿಕೂಟದ ಮುಖಂಡರ ಸಮನ್ವಯ ಸಮಿತಿ ತೀರ್ಮಾನಿಸಿದೆ.

Advertisement

ನಗರದ ಶರಾವತಿ ದಂತ ವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಎರಡೂ ಪಕ್ಷಗಳ ಮುಖಂಡರು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆಯಲ್ಲಿ ನಡೆಸಿದ ಸಮನ್ವಯ ಸಭೆಯಲ್ಲಿ ಪ್ರಚಾರಕ್ಕೆ ಸಂಬಂಧಿಸಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಲಾಯಿತು. 

ಸಮನ್ವಯ ಸಭೆಯಲ್ಲಿ ಪ್ರಚಾರ ಹೇಗೆ ನಡೆಸಬೇಕು, ಯಾರ್ಯಾರಿಗೆ ಜವಾಬ್ದಾರಿ ನೀಡಬೇಕು, ಪ್ರತಿ ಮನೆ ಮತ್ತು ಮತದಾರನನ್ನು ಹೇಗೆ ತಲುಪಬೇಕೆಂಬ ಬಗ್ಗೆ ಹಲವು ಮುಖಂಡರು ಸಲಹೆ ನೀಡಿದರು. ಪ್ರತಿ ಗ್ರಾಮಗಳಲ್ಲಿ 20 ಮನೆಗಳಿಗೆ ಕಾಂಗ್ರೆಸ್‌- ಜೆಡಿಎಸ್‌ ಕಾರ್ಯಕರ್ತರ ಮೂವರ ತಂಡ ರಚಿಸಬೇಕು. ತಂಡವು ಪ್ರತಿದಿನ ಪ್ರಚಾರದ ಜತೆಗೆ ಮತದಾನ ಮಾಡಿದ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಬೂತ್‌ ಸಮಿತಿಯು ತಂಡಗಳನ್ನು ರಚಿಸಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾದರಿಯಲ್ಲಿ ಮತದಾನದ ಹಿಂದಿನ ದಿನವರೆಗೆ ಪ್ರತಿಮನೆಗೆ ಪ್ರತಿದಿನವೂ ಭೇಟಿ ನೀಡಿ ಮತ ಯಾಚಿಸಬೇಕು. ಈ ಪ್ರಕ್ರಿಯೆ ಗುರುವಾರದಿಂದಲೆ ಆರಂಭಿಸಬೇಕು ಎಂದು ತೀರ್ಮಾನಿಸಲಾಯಿತು. 

 ಅ.18ರಂದು ಆಯುಧ ಪೂಜೆ ಮತ್ತು 19ರಂದು ವಿಜಯದಶಮಿ ಇರುವುದರಿಂದ ಈ ಎರಡು ದಿನ ಮಧು ಬಂಗಾರಪ್ಪ ಅವರು ಜಿಲ್ಲಾದ್ಯಂತ ಇರುವ ಎರಡೂ ಪಕ್ಷಗಳ ಪ್ರಮುಖ ಮುಖಂಡರು, ರಾಜಕೀಯದಿಂದ ತಟಸ್ಥವಾದ ಮುಖಂಡರನ್ನು ಭೇಟಿ ಮಾಡಿ ಅವರ ವಿಶ್ವಾಸ ಮತ್ತು ಆಶೀರ್ವಾದ ಪಡೆಯುವಂತೆ ಸೂಚಿಸಲಾಯಿತು.

 ಪ್ರತಿ ತಾಲೂಕಿನಲ್ಲಿ ತಲಾ ಎರಡು ಕಡೆ ಬಹಿರಂಗ ಸಭೆಗಳನ್ನು ನಡೆಸಬೇಕು. ತೀರ್ಥಹಳ್ಳಿ, ಕೋಣಂದೂರು, ನಗರ, ಹೊಸನಗರ, ಆನಂದಪುರ, ಶಿಕಾರಿಪುರ, ಶಿರಾಳಕೊಪ್ಪ, ಸೊರಬ, ಆನವಟ್ಟಿ, ಆನವೇರಿ, ಹೊಳೆಹೊನ್ನೂರು, ಭದ್ರಾವತಿ, ಶಿವಮೊಗ್ಗ, ಆಯನೂರಲ್ಲಿ ಬಹಿರಂಗ ಸಮಾವೇಶಗಳನ್ನು ನಡೆಸಬೇಕು. ಸಮಾವೇಶದಲ್ಲಿ ಎರಡೂ ಪಕ್ಷಗಳ ಜಿಲ್ಲಾ ಮಟ್ಟದ ಮುಖಂಡರು ಭಾಗವಹಿಸಲಿದ್ದಾರೆ. ಇದರ ಜತೆಗೆ ತಾಲೂಕು ಮುಖಂಡರ ನೇತೃತ್ವದಲ್ಲಿ ಹೋಬಳಿ ಮಟ್ಟ ಮತ್ತು ಬೂತ್‌ ಮಟ್ಟದ ಮುಖಂಡರ ನೇತೃತ್ವದಲ್ಲಿ ಪಂಚಾಯತ್‌ ಮಟ್ಟದಲ್ಲೂ ಸಭೆಗಳನ್ನು ನಡೆಸಬೇಕು.

Advertisement

 ತಾಲೂಕು ಮಟ್ಟದ ಸಮಾವೇಶಗಳಲ್ಲಿ ಮೊದಲಿಗೆ ಅ.20ರಂದು ತೀರ್ಥಹಳ್ಳಿ, ಹೊಸನಗರ, ಸಾಗರದಲ್ಲಿ ಅ.21ರಂದು ಬೈಂದೂರಲ್ಲಿ ಸಮಾವೇಶ ನಡೆಸಲಾಗುತ್ತದೆ. ಅ.22 ಮತ್ತು ಆನಂತರದ ಸಮಾವೇಶಗಳನ್ನು ಎಲ್ಲಿ ನಡೆಸಬೇಕೆನ್ನುವುದನ್ನು ಅ.20ರಂದು ತೀರ್ಮಾನಿಸಲಾಗುತ್ತದೆ.
 
 ಬಹಿರಂಗ ಸಮಾವೇಶಗಳಿಗೆ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಡಿಸಿಎಂ ಡಾ| ಜಿ. ಪರಮೇಶ್ವರ್‌, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಡಿ.ಕೆ. ಶಿವಕುಮಾರ್‌ ಸೇರಿದಂತೆ ಹಲವು ಸಚಿವರು ಮತ್ತು ಶಾಸಕರು ಭಾಗವಹಿಸುವರು. ಯಾವ ಊರಿಗೆ ಯಾವ ಮುಖಂಡರನ್ನು ಕರೆಸಬೇಕೆನ್ನುವುದನ್ನು ಕಾಗೋಡು ತಿಮ್ಮಪ್ಪ ಅವರಿಗೆ ತೀರ್ಮಾನಕ್ಕೆ ಬಿಡಲಾಯಿತು. ಸಮನ್ವಯ ಸಭೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ, ಶಾಸಕ ಬಿ.ಕೆ. ಸಂಗಮೇಶ್ವರ್‌, ಮಾಜಿ ಶಾಸಕರಾದ ಎಂ.ಜೆ. ಅಪ್ಪಾಜಿ, ಕೆ.ಬಿ. ಪ್ರಸನ್ನಕುಮಾರ್‌, ಶಾರದಾ ಪೂರ್ಯಾನಾಯ್ಕ, ಜೆಡಿಎಸ್‌ ಜಿಲ್ಲಾಧ್ಯಕ್ಷ ಆರ್‌. ಎಂ. ಮಂಜುನಾಥ ಗೌಡ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ತೀ.ನ. ಶ್ರೀನಿವಾಸ್‌, ಎಂ. ಶ್ರೀಕಾಂತ್‌, ಜಿಪಂ ಸದಸ್ಯ ಕಲಗೋಡು ರತ್ನಾಕರ್‌, ಮಾಜಿ ಸದಸ್ಯ ಎಸ್‌. ಕುಮಾರ್‌, ಕಾಡಾ ಮಾಜಿ ಅಧ್ಯಕ್ಷ ಎಚ್‌.ಎಸ್‌. ಸುಂದರೇಶ್‌, ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಎಲ್ಲ ತಾಲೂಕು ಅಧ್ಯಕ್ಷರು, ಚುನಾಯಿತ ಪ್ರತಿನಿಧಿಗಳು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next