Advertisement

ಸಹಕಾರ ವ್ಯವಸೆ ಪರಸ್ಪರ ಸಹಬಾಳ್ವೆಯ ಪ್ರತೀಕ

12:15 PM Mar 02, 2022 | Team Udayavani |

ಬೀದರ: ಜಿಲ್ಲೆಯಲ್ಲಿ ಸಹಕಾರಿ ವ್ಯವಸ್ಥೆ ಭದ್ರ ಮತ್ತು ಆಳವಾಗಿ ಬೇರೂರಿದ್ದು, ಸಮಾಜದ ಕೈಗನ್ನಡಿಯಾಗಿದೆ. ಪ್ರತಿ ಹಳ್ಳಿ ತಲುಪಿರುವ ಸಹಕಾರಿ ವ್ಯವಸ್ಥೆಯ ಪ್ರಯೋಜನವನ್ನು 5.6 ಲಕ್ಷ ಗ್ರಾಹಕರು ಪಡೆಯುತ್ತಿದ್ದು, ಸಹಕಾರಿ ಮನೋಭಾವವನ್ನು ಮೂಡಿಸುವಲ್ಲಿ ಮತ್ತು ಸಮಾಜದಲ್ಲಿ ಸಾಮರಸ್ಯ ತರುವಲ್ಲಿಯೂ ಪ್ರಮುಖ ಪಾತ್ರವಹಿಸುತ್ತಿದೆ. ಸಹಬಾಳ್ವೆಯ ಪ್ರತೀಕವೂ ಆಗಿದೆ ಎಂದು ಡಿಸಿಸಿ ಬ್ಯಾಂಕ್‌ ಸಿಇಒ ಮಹಾಜನ ಮಲ್ಲಿಕಾರ್ಜುನ ನುಡಿದರು.

Advertisement

ನಗರದ ಸೌಹಾರ್ದ ತರಬೇತಿ ಸಂಸ್ಥೆಯಲ್ಲಿ ಸಹಕಾರಿ ಬ್ಯಾಂಕ್‌ಗಳ ಸಿಬ್ಬಂದಿಗೆ ನಬಾರ್ಡ್‌ ವತಿಯಿಂದ ನಡೆದ ಕಾರ್ಯಾಲಯ ನಿರ್ವಹಣೆ ಮತ್ತು ಸಿಬ್ಬಂದಿ ಪುನಶ್ಚೇತನಾ ತರಬೇತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕುಟುಂಬಗಳ ಆರ್ಥಿಕ ಪ್ರಗತಿಯಲ್ಲೂ ಸಹಕಾರಿ ಬ್ಯಾಂಕಿಂಗ್‌ ಮಹತ್ತರ ಜವಾಬ್ದಾರಿಯನ್ನು ನಿಭಾಯಿಸುತ್ತಿದೆ. ಕಡಿಮೆ ದರದ ಸಾಲ, ಜನರ ಠೇವಣಿ ಗಳಿಗೆ ಉತ್ತಮ ಬಡ್ಡಿದರ ನೀಡುವುದರಿಂದ ಸಮಾಜದಲ್ಲಿ ಸ್ಥಿರತೆಗೂ ಕಾರಣವಾಗುತ್ತದೆ. ದೇಶದ ಆರ್ಥಿಕ ವ್ಯವಸ್ಥೆ ಸುಭದ್ರವಾಗಿರಲು ಸಹ ಕಾರಣವಾಗುತ್ತದೆ ಎಂದರು.
ಸಮಾಜದ ಆರ್ಥಿಕ ಸಬಲೀಕರಣದಲ್ಲಿ ಬ್ಯಾಂಕಿಂಗ್‌ ವ್ಯವಸ್ಥೆ ಪ್ರಧಾನ ಪಾತ್ರವಹಿಸುತ್ತಿದೆ. ಇಷ್ಟು ಮಹತ್ವ ಪೂರ್ಣವಾದ ಕ್ಷೇತ್ರದಲ್ಲಿ ಕೆಲಸ ಮಾಡುವ ಬ್ಯಾಂಕ್‌ ಸಿಬ್ಬಂದಿಗಳಿಗೆ ಉತ್ತಮ ಗ್ರಾಹಕ ಸೇವೆ ನೀಡುವಲ್ಲಿ ತರಬೇತಿಗಳ ಅಗತ್ಯವಿದೆ. ವೃತ್ತಿಯಲ್ಲಿ ಹೆಚ್ಚಿನ ಜ್ಞಾನ ಮತ್ತು ಕೆಲಸದ ಉತ್ಕ್ರಷ್ಟತೆಗಾಗಿ ಪುನಶ್ಚೇತನ ತರಬೇತಿ ಹಮ್ಮಿಕೊಳ್ಳಲಾಗಿದೆ. ಬ್ಯಾಂಕಿಂಗ್‌ ವ್ಯವಸ್ಥೆ ಇಂದು ತಂತ್ರಜ್ಞಾನ ಆಧಾರಿತವಾಗಿ ಬದಲಾಗುತ್ತಿದ್ದು, ಗ್ರಾಹಕರ ಅಗತ್ಯಗಳಿಗೆ ಸ್ಪಂದಿಸುವಂತಿರಬೇಕಾಗಿದೆ. ಅದಕ್ಕಾಗಿ ಉದ್ಯೋಗಿಗಳು ಕೂಡಾ ಹೊಸ ವಿಷಯ ಕಲಿತು ಕಾರ್ಯಕ್ಷಮತೆ ವೃದ್ಧಿಸಿಕೊಳ್ಳಬೇಕಾದ ಅಗತ್ಯವಿದೆ ಎಂದರು.

ಉದ್ಯೋಗಿಗಳು ನಿಂತ ನೀರಾಗದೆ ನಿರಂತರ ಕಲಿಕೆಯ ವಿದ್ಯಾರ್ಥಿಗಳಾಗಬೇಕು. ಇದರಿಂದ ಸಂಸ್ಥೆಯ ಬೆಳವಣಿಗೆ ಮಾತ್ರವಲ್ಲ ವ್ಯಕ್ತಿತ್ವದ ಅಭಿವೃದ್ಧಿಯೂ ಅಗತ್ಯತೆಯಿದೆ. ಸಮಾಜಕ್ಕೆ ಉತ್ತಮ ಸೇವೆ ನೀಡಲು ಸಾಧ್ಯವಿದೆ. ಆದ್ದರಿಂದ ನಾವು ಕೇವಲ ಸಂಬಳಕ್ಕಾಗಿ ದುಡಿಯುವುದಲ್ಲದೆ, ಸಮಾ ಜದ ಒಳಿತು ಯೋಚಿಸಿ ಕೆಲಸ ಮಾಡಬೇಕು. ಮನಸಿದ್ದಲ್ಲಿ ಮಾರ್ಗ ಭಕ್ತಿಯಿದ್ದಲ್ಲಿ ದೇವರು ಎಂಬಂತೆ ನಿಷ್ಠೆಯಿಂದ ಕೆಲಸ ಮಾಡಿದರೆ ಅಭಿವೃದ್ಧಿ ಸಾಧ್ಯವಿದೆ ಎಂದರು.

ಎಂಜಿನಿಯರ್ ಅಸೋಸಿಯೇಶನ್‌ ಅಧ್ಯಕ್ಷ ಹಾವಶೆಟ್ಟಿ ಪಾಟೀಲ ಮಾತನಾಡಿ, ಬ್ಯಾಂಕಿಗೆ ಠೇವಣಿ ಮತ್ತು ಸಾಲಗಳು ಮುಖ್ಯ ಹಣಕಾಸಿನ ವ್ಯವಹಾರಗಳಿದ್ದು, ಇದನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಕಟ್ಟಡಕ್ಕೆ ಬುನಾದಿ ಭದ್ರವಾಗಿರುವಂತೆ ಬ್ಯಾಂಕಿಗೆ ಗ್ರಾಹಕ ಸೇವೆಯೇ ಬುನಾದಿಯಾಗಿದೆ. ಸಿಬ್ಬಂದಿಗಳು ಮತ್ತು ಆಡಳಿತ ಮಂಡಳಿ ಜೊತೆಗೂಡಿ ಸಾಗಿದಾಗ ಬ್ಯಾಂಕ್‌ ಉತ್ತಮ ಪ್ರಗತಿ ಸಾಧಿಸುತ್ತದೆ. ನಾಗಮಾರಪಳ್ಳಿ ಅವರ ಆದರ್ಶ ಮತ್ತು ಮುಂದಾಲೋಚನೆಯ ಕ್ರಮಗಳಿಂದ ಬೀದರ ಡಿಸಿಸಿ ಬ್ಯಾಂಕ್‌ ಉತ್ತಮವಾಗಿ ಸೇವೆ ಸಲ್ಲಿಸುತ್ತಿದೆ ಎಂದರು.

Advertisement

ಡಿಸಿಸಿ ಬ್ಯಾಂಕ್‌ ಪ್ರಧಾನ ವ್ಯವಸ್ಥಾಪಕ ವಿಠuಲ ರೆಡ್ಡಿ, ಉಪ ಪ್ರಧಾನ ವ್ಯವಸ್ಥಾಪಕ ರಾಜಕುಮಾರ ಮಾತನಾಡಿದರು. ಅಧಿಕಾರಿಗಳಾದ ಶ್ರೀಧರ ಕುಲಕರ್ಣಿ, ಬಸವರಾಜ ಕಲ್ಯಾಣಿ, ನಿವೇದಿತಾ ಮನ್ನಳ್ಳಿ, ಅರ್ಚನಾ ಪರೇಶನೆ, ಪ್ರಫುಲ್ಲಾ ಪ್ರಭು, ಪ್ರತಾಪ ಸಿಂಗ ರಾಜಪೂತ, ಕಾವೇರಿ ರೆಡ್ಡಿ, ಶರಣ ಬಸಪ್ಪ ಚೆಲುವಾ, ಆನಂದ ದೋದ್ಯಾಲ, ಚಂದ್ರಕಲಾ, ರಶ್ಮಿ ಇದ್ದರು. ಸೌಹಾರ್ದ ಸಂಸ್ಥೆಯ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಅನಿಲ ಪಿ. ಮತ್ತು ಅಪ್ಪಣ್ಣ ನಿರೂಪಿಸಿದರು. ಉಪನ್ಯಾಸಕ ಎಸ್‌.ಜಿ. ಪಾಟೀಲ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next