Advertisement

SCDCC Bank ಸಹಕಾರ ಕ್ಷೇತ್ರ ಜನರ ಕ್ಷೇತ್ರವಾಗಿದೆ: ಡಾ| ರಾಜೇಂದ್ರಕುಮಾರ್‌

12:03 AM Nov 01, 2023 | Team Udayavani |

ಬಂಟ್ವಾಳ: ದ.ಕ. ಜಿಲ್ಲಾ ಕೇಂದ್ರ ಸಹಕಾರಿ (ಎಸ್‌ಸಿಡಿಸಿಸಿ) ಬ್ಯಾಂಕಿನ 113ನೇ ನೂತನ ಮಾಣಿ ಶಾಖೆಯು ಮಂಗಳವಾರ ಬಂಟ್ವಾಳ ತಾಲೂಕಿನ ಮಾಣಿಯ ಶ್ರೀ ಲಕ್ಷ್ಮೀನಾರಾಯಣ ಕಾಂಪ್ಲೆಕ್ಸ್‌ನ ಪ್ರಥಮ ಅಂತಸ್ತಿನಲ್ಲಿ ಆರಂಭಗೊಂಡಿತು.

Advertisement

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ, ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ| ಎಂ.ಎನ್‌.ರಾಜೇಂದ್ರ ಕುಮಾರ್‌ ಮಾತನಾಡಿ, ಸಹಕಾರಿ ಸಂಘಗಳ ಮೂಲಕ ಪಡೆದ ಕೃಷಿ ಸಾಲಗಳು ಶೇ. 100 ಮರುಪಾವತಿಯಾಗಿ ಅವಿಭಜಿತ ದ.ಕ. ಜಿಲ್ಲೆಯು ದೇಶದಲ್ಲೇ ಮಾದರಿಯಾಗಿದ್ದು, ಜನರಿಗೆ ಬೇಕಾದ ಸೇವೆಯನ್ನು ನೀಡಿ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಜನರ ಕ್ಷೇತ್ರವಾಗಿ ಬೆಳೆದಿದೆ. ಜತೆಗೆ ಜಿಲ್ಲೆಯಲ್ಲಿ ಆರ್ಥಿಕ ಸೌಲಭ್ಯ ಸಿಕ್ಕಿಲ್ಲ ಎಂದು ರೈತರು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳೇ ಇಲ್ಲದಿರುವುದು ನಮ್ಮ ಹೆಮ್ಮೆಯಾಗಿದೆ.

ನಮ್ಮ ಬ್ಯಾಂಕಿನ ಶಾಖೆಯು ಮಾಣಿಗೆ ಬಂದಾಗ ಇಲ್ಲಿನ ಸಹಕಾರಿಗಳು 22 ಕೋ.ರೂ. ಠೇವಣಿ, 1,300 ಖಾತೆಗಳನ್ನು ನೀಡಿ ಸ್ವಾಗತಿಸಿದ್ದಾರೆ. ನಿರ್ದೇಶಕರಾದ ರಾಜಾರಾಮ್‌ ಭಟ್‌, ಶಶಿಕುಮಾರ್‌ ರೈ ನೇತೃತ್ವ ವಹಿಸಿ ಉತ್ತಮ ಶಾಖೆಯ ಆರಂಭಕ್ಕೆ ಶ್ರಮಿಸಿದ್ದಾರೆ. ನ. 30ರಂದು ಪುತ್ತೂರಿನಲ್ಲಿ ಶಾಸಕರು, ಎಲ್ಲ ಸಹಕಾರಿಗಳ ಸಹಕಾರದಿಂದ ಕ್ರೀಡಾ ಕೂಟ ನಡೆಯಲಿದೆ ಎಂದರು.

ಶಾಖೆಯ ಗಣಕೀಕರಣವನ್ನು ಉದ್ಘಾಟಿಸಿದ ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಮಾತನಾಡಿ, ಎಸ್‌ಸಿಡಿಸಿಸಿ ಬ್ಯಾಂಕಿನ 13,500 ಕೋ.ರೂ.ಗಳ ವ್ಯವಹಾರ ನಮ್ಮ ಜಿಲ್ಲೆ ಹೆಮ್ಮೆ ಪಡುವ ವಿಚಾರವಾಗಿದೆ ಎಂದರು.
ಅವರು ಬ್ಯಾಂಕನ್ನು ಬೆಳೆಸುವ ಜತೆಗೆ ಸಾಮಾಜಿಕ ಕ್ಷೇತ್ರಕ್ಕೂ ದೊಡ್ಡ ಸಹಕಾರ ನೀಡಿದ್ದಾರೆ. ಈ ಬಾರಿ ನಮ್ಮ ಸರಕಾರ ಕೂಡ ಸಹಕಾರಿಗಳಂತೆ ಗೃಹಲಕ್ಷ್ಮೀ ಯೋಜನೆ ಮೂಲಕ ಮಹಿಳೆಯರ ಕೈ ಬಲಪಡಿಸುವ ಕಾರ್ಯ ಮಾಡಿದ್ದಾರೆ ಎಂದರು.

ದೀಪ ಬೆಳಗಿಸಿದ ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಕೃಷಿಕರ ಅಭ್ಯುದಯಕ್ಕೆ ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್‌ಗಳು ದೊಡ್ಡ ಕೊಡುಗೆ ನೀಡಿದ್ದು, ಎಸ್‌ಸಿಡಿಸಿಸಿ ಬ್ಯಾಂಕ್‌ ಸೇರಿದಂತೆ ಸಹಕಾರಿ ಸಂಘಗಳಿಂದ ಆರ್ಥಿಕ ಚಟುವಟಿಕೆಗೆ ಸಿಕ್ಕಿದ ಪ್ರೋತ್ಸಾಹದ ಪರಿಣಾಮ ಜಿಲ್ಲೆಯ ಬೆಳವಣಿಗೆ ಸಾಧ್ಯವಾಗಿದೆ ಎಂದರು.
ಮಾಣಿ ಗ್ರಾ.ಪಂ. ಅಧ್ಯಕ್ಷ ಇಬ್ರಾಹಿಂ ಕೆ. ಮಾಣಿ ಅವರು ಸಾಲ ಪತ್ರ ವಿತರಿಸಿದರು. ನೇರಳಕಟ್ಟೆ ಸಹಕಾರಿ ವ್ಯಾವಸಾಯಿಕ ಸಂಘದ ಅಧ್ಯಕ್ಷ ಪುಷ್ಪರಾಜ್‌ ಚೌಟ ಭದ್ರತಾಕೋಶ ಉದ್ಘಾಟಿಸಿದರು. ವೇದಿಕೆಯಲ್ಲಿ ಶಾಖಾ ಕಟ್ಟಡದ ಮಾಲಕ ಎಂ. ನಾರಾಯಣ ಪೈ, ಬ್ಯಾಂಕಿನ ಉಪಾಧ್ಯಕ್ಷ ವಿನಯಕುಮಾರ್‌ ಸೂರಿಂಜೆ, ಸಿಇಒ ಗೋಪಾಲಕೃಷ್ಣ ಭಟ್‌ ಕೆ, ನಿರ್ದೇಶಕರಾದ ಎಸ್‌.ಬಿ. ಜಯರಾಮ್‌ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಸದಾಶಿವ ಉಳ್ಳಾಲ, ಕೆ. ಹರಿಶ್ಚಂದ್ರ, ಸ್ಕಾ ಡ್ಸ್‌ ಅಧ್ಯಕ್ಷ ರವೀಂದ್ರ ಕಂಬಳಿ ಮೊದಲಾದವರು ಉಪಸ್ಥಿತರಿದ್ದರು.
ನಿರ್ದೇಶಕರಾದ ಟಿ.ಜಿ. ರಾಜಾರಾಮ್‌ ಭಟ್‌ ಸ್ವಾಗತಿಸಿ, ಶಶಿಕುಮಾರ್‌ ರೈ ಬಿ. ವಂದಿಸಿದರು. ಆರ್‌ಜೆ ಪ್ರಸನ್ನ ಕಾರ್ಯಕ್ರಮ ನಿರ್ವಹಿಸಿದರು.

Advertisement

ರಾಜೇಂದ್ರಕುಮಾರ್‌ಗೆ ಸಮ್ಮಾನ
ಬಂಟ್ವಾಳ ತಾಲೂಕಿನ ಸಹಕಾರಿಗಳ ಪರವಾಗಿ ಡಾ| ಎಂ.ಎನ್‌.ರಾಜೇಂದ್ರ ಕುಮಾರ್‌ ಅವರನ್ನು ಸಮ್ಮಾನಿಸಲಾಯಿತು. ಪುಷ್ಪರಾಜ್‌ ಚೌಟ, ಎಂ. ನಾರಾಯಣ ಪೈ, ಸಹಕಾರಿಗಳ ಕ್ರೀಡಾಕೂಟದ ಉಸ್ತುವಾರಿ ದಯಾನಂದ ರೈ, ಶಾಖಾ ವ್ಯವಸ್ಥಾಪಕಿ ವತ್ಸಲಾ ಹಾಗೂ ಶಾಖೆಯ ಅನುಷ್ಠಾನಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು. ನವೋದಯ ಸ್ವಸಹಾಯ ಸಂಘಗಳ ಉದ್ಘಾಟನೆ, ಪ್ರಥಮ ಗ್ರಾಹಕರಿಗೆ ಠೇವಣಿ ಪತ್ರ, ಲಾಕರ್‌ ವ್ಯವಸ್ಥೆ ಕೀ ಹಸ್ತಾಂತರಿಸಲಾಯಿತು. ಲಕ್ಕಿ ಡ್ರಾ ಮೂಲಕ ಅದೃಷ್ಟವಂತ ಠೇವಣಿದಾರರು, ಎಫ್‌ಡಿ ಖಾತೆದಾರರನ್ನು ಆರಿಸಿ ಗೋಲ್ಡ್‌ ಕಾಯಿನ್‌ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next