Advertisement

ಸಹಕಾರಿ ಸಂಸ್ಥೆಗಳ ಬೆಳೆ ಸಾಲ ಮನ್ನಾ: ಗೊಂದಲದಲ್ಲಿ ರೈತರು

05:05 AM May 26, 2018 | Karthik A |

ಬಂಟ್ವಾಳ : ಸಹಕಾರಿ ಸಂಸ್ಥೆಗಳಿಂದ ರೈತರು ಬೆಳೆ ಉದ್ದೇಶಕ್ಕೆ ಪಡೆದ ಸಾಲವನ್ನು ಮರುಪಾವತಿಸುವಂತೆ ಸಹಕಾರಿ ಸಂಸ್ಥೆಗಳಿಂದ ರೈತರಿಗೆ ಸೂಚನ ಪತ್ರಗಳು ಬಂದಿವೆ. ಅದರಲ್ಲಿ 50 ಸಾವಿರ ರೂ. ಮನ್ನಾ ಆಗಿದೆ ಎಂದು ತಿಳಿಸಿದ್ದು, ಉಳಿದ ಸಾಲದ ಮೊತ್ತವನ್ನು ಪಾವಸಿತುವಂತೆ ಸೂಚಿಸಿದ್ದಾರೆ. ಹೊಸ ಸರಕಾರ ಆಡಳಿತಕ್ಕೆ ಬಂದಿರುವ ಈ ಸಂದರ್ಭದಲ್ಲಿ ಪೂರ್ಣ ಸಾಲ ಮನ್ನಾ ಘೋಷಣೆಯ ಹೊಸ್ತಿಲಲ್ಲಿ ಇಂತಹ ಪತ್ರಗಳಿಂದ ರೈತರು ಸಾಲ ಪಾವತಿ ಮಾಡಿ ಇರುವ ಸೌಲಭ್ಯ ಪಡೆಯುವುದೇ ಅಥವಾ ಮರುಪಾವತಿ ಮಾಡದೆ ಮುಂದಿನ ಬೆಳವಣಿಗೆಯನ್ನು ಕಾಯುವುದೇ ಎಂಬ ಗೊಂದಲ ವ್ಯಕ್ತವಾಗಿದೆ. ನೂತನ ಸರಕಾರ ಅಸ್ತಿತ್ವಕ್ಕೆ ಬರುತ್ತಿರುವ ಈ ಸಂದರ್ಭದಲ್ಲಿ ಪ್ರಸ್ತುತ ಇರುವ ಮನ್ನಾ ಅವಕಾಶ ಮುಂದಿನ ಘೋಷಿತ ಬೆಳೆ ಸಾಲ ಮನ್ನಾಗೂ ಅನ್ವಯಿಸುವುದೇ ಎಂಬುದಾಗಿ ಅನೇಕ ರೈತರು ಪ್ರಶ್ನಿಸಿದ್ದು, ಸಾಲ ಪಾವತಿ ಮಾಡಬೇಕೆ ಬೇಡವೆ ಎಂಬ ಗೊಂದಲ ಪರಿಹಾರ ಆದಂತೆ ಕಾಣುತ್ತಿಲ್ಲ.

Advertisement

ಸಹಕಾರಿ ಸಂಸ್ಥೆಗಳಲ್ಲಿ ಈ ಬಗ್ಗೆ ಪ್ರಶ್ನಿಸಿದರೆ, ನಮಗೂ ಹೆಚ್ಚಿನ ವಿಚಾರ ಗೊತ್ತಿಲ್ಲ ಎನ್ನುತ್ತಾರೆ. 2017 ಜೂನ್‌ 19ಕ್ಕೆ ಒಬ್ಬರು ರೈತ ಒಂದು ಲಕ್ಷ ಸಾಲ ಹೊಂದಿದ್ದರೆ. ಪ್ರಸ್ತುತ ಅವಧಿಯಲ್ಲಿ 50 ಸಾವಿರ ರೂ.ಗಳನ್ನು ಸಂಸ್ಥೆಗೆ ಪಾವತಿಸಿದರೆ, ಅವರಿಗೆ 50 ಸಾವಿರ ರೂ. ಮನ್ನಾ ಆಗುವುದು. ಜೊತೆಗೆ ಶೂನ್ಯ ಬಡ್ಡಿ ಸೌಲಭ್ಯವೂ ದೊರೆಯುವುದು ಎಂಬುದಾಗಿ ಇಲ್ಲಿ ವಿಷಯ ಪ್ರಸ್ತಾವ ಆಗಿದೆ.

ಸರಕಾರ ಹೊಸದಾಗಿ ಮನ್ನಾ ಘೋಷಿಸಿದರೆ ಪೂರ್ಣ ಮನ್ನಾ ಆಗುವುದೇ? ಸಾಲ ಮರುಪಾವತಿ ಮಾಡಿದ ರೈತನಿಗೆ ಉಳಿಕೆ 50 ಸಾವಿರ ರೂ. ಮನ್ನಾ ಸೌಲಭ್ಯವು ಪುನಃ ದೊರೆಯುವುದೇ ಎಂಬಿತ್ಯಾದಿ ಪ್ರಶ್ನೆಗಳು ರೈತರಲ್ಲಿವೆ. ಅನೇಕ ರೈತರು ಸಾಲ ಪಾವತಿ ಬಗ್ಗೆ ತಮ್ಮ ಗೊಂದಲಗಳನ್ನು ಹೇಳಿಕೊಂಡಿದ್ದು, ರಾಜಕೀಯ ಮುಖಂಡರ ಹೇಳಿಕೆಯಂತೆ ಸಾಲ ನವೀಕರಿಸಿದರೆ ಮನ್ನಾಕ್ಕೆ ಅರ್ಹರಾಗುವುದಿಲ್ಲ ಎಂಬ ಭಯ ಮೂಡಿದೆ. ಈ ಬಗ್ಗೆ ಸರಕಾರದಿಂದ ಸ್ಪಷ್ಟ ಮಾಹಿತಿ ಪ್ರಕಟಿಸಿದ್ದಲ್ಲಿ ರೈತರ ಸಂಕಷ್ಟಕ್ಕೆ ಪರಿಹಾರ ಸಿಗಬಹುದು.

ಹೊಸ ಪ್ರಸ್ತಾಪವಲ್ಲ
ಪ್ರಸ್ತುತ ಸಹಕಾರ ಸಂಸ್ಥೆಗಳು ನೀಡುವ 50 ಸಾವಿರ ರೂ. ಸಾಲಮನ್ನಾ ಹೊಸ ಸರಕಾರದ ಮನ್ನಾ ವಿಚಾರಕ್ಕೆ ಸಂಬಂಧಿಸಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ರೈತರ ಸಹಕಾರಿ ಬ್ಯಾಂಕ್‌ಗಳ 50 ಸಾವಿರ ರೂ. ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ಅಧಿಕೃತ ಆದೇಶವನ್ನು ಅವರು ಅಧಿಕಾರದಲ್ಲಿ ಇರುವಾಗಲೇ ಹೊರಡಿಸಿದ್ದರು. ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ಒಟ್ಟು 14 ಷರತ್ತುಗಳನ್ನು ವಿಧಿಸಿದ್ದರು. ರೈತರ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ, ಪಶು ಭಾಗ್ಯ ಸಾಲ, ಕೃಷಿಯೇತರ ಸಾಲಗಳು, ಮಧ್ಯಮಾವಧಿ, ದೀರ್ಘಾವಧಿ ಸಾಲಗಳು ಮನ್ನಾ ಇಲ್ಲ ಎಂದು ಸ್ಪಷ್ಟಪಡಿಸಲಾಗಿತ್ತು. ಸುತ್ತೋಲೆಯ ಪ್ರಮುಖ ಷರತ್ತುಗಳಂತೆ 50 ಸಾವಿರ ರೂ.ಗಳಿಗಿಂತ ಹೆಚ್ಚು ಅಲ್ಪಾವಧಿ ಸಾಲ ಪಡೆದವರು 2018 ಜೂನ್‌ ಒಳಗೆ ಅಸಲು ಪಾವತಿಸಿದರೆ ಮಾತ್ರ 50 ಸಾವಿರ ರೂ. ಸಾಲ ಮನ್ನಾ ದೊರೆಯುವುದು.

ಅಲ್ಪಾವಧಿಯ ಸಾಲದಲ್ಲಿ ಸುಸ್ತಿ ಬಾಕಿ ಹೊಂದಿರುವ ರೈತರು 2017 ಡಿ. 31ರೊಳಗಾಗಿ ಮರುಪಾವತಿ ಮಾಡಿದರೆ ಮಾತ್ರ 50 ಸಾವಿರ ರೂ. ಸಾಲ ಮನ್ನಾ, ಅಸಲು ಮತ್ತು ಬಡ್ಡಿ ಸಹಿತ ಸಾಲ ಮನ್ನಾ, ಗಡುವಿನ ಬಳಿಕವಷ್ಟೇ ಸಾಲ ಮನ್ನಾ ಸೌಲಭ್ಯ ಪಡೆದವರಿಗೆ ಮತ್ತೆ ಸಾಲ ಕೊಡುವುದು ಎಂಬುದಾಗಿ ಸ್ಪಷ್ಟಪಡಿಸಿದೆ. ಒಂದಕ್ಕಿಂತ ಹೆಚ್ಚು ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದರೂ ಒಂದು ಕಡೆ ಮಾತ್ರ ಸಾಲ ಮನ್ನಾ ಸೌಲಭ್ಯ ಪಡೆಯಬಹುದು. ಸಾಲ ಪಡೆದ ರೈತ ಮೃತಪಟ್ಟಿದ್ದಲ್ಲಿ ವಾರಸುದಾರರು ಸಾಲ ಕಟ್ಟಿದರೆ ಮಾತ್ರ ಮನ್ನಾ ಎಂಬುದಾಗಿ ಸ್ಪಷ್ಟಪಡಿಸಿದೆ.

Advertisement

ಶೇ. 14 ಬಡ್ಡಿ
ಈ 50 ಸಾವಿರ ರೂ. ಮನ್ನಾ ಯಾವ ಸರಕಾರ ಮಾಡಿದ್ದು ಎಂಬುದು ಅನೇಕ ರೈತರಿಗೆ ಸ್ಪಷ್ಟವಿಲ್ಲ. ನಿರ್ದಿಷ್ಟ ಅವಧಿಯಲ್ಲಿ ಉಳಿಕೆ ಪಾವತಿ ಮಾಡದೆ ಅವಧಿ ಮೀರಿದ ಸಂದರ್ಭದಲ್ಲಿ ಸರಕಾರದಿಂದ ಸಿಗಬೇಕಾದ ಶೂನ್ಯ ಬಡ್ಡಿ ಸೌಲಭ್ಯವು ರೈತರಿಗೆ ಸಿಗುವುದಿಲ್ಲ. ಪ್ರತೀ ಸಾಲಕ್ಕೆ ಶೇ. 14ರಂತೆ ಬಡ್ಡಿ ಪಾವತಿಸಬೇಕಾಗುವುದು ಎಂಬ ಒಕ್ಕಣೆಯೂ ರೈತರಿಗೆ ಬಂದಿರುವ ಪತ್ರದಲ್ಲಿದೆ.

ಮರುಪಾವತಿ ವೇಳೆ ಸೌಲಭ್ಯ
ಕಳೆದ ವರ್ಷ 2017 ಜೂನ್‌ 19ರ ವರೆಗೆ ಯಾರೆಲ್ಲ ರೈತರು ಕೃಷಿ ಉದ್ದೇಶದ ಬೆಳೆ ಸಾಲವನ್ನು ಹೊಂದಿದ್ದರೋ ಅವರಿಗೆ ಪ್ರಸ್ತುತ ಅವಧಿಯಲ್ಲಿ ಸಾಲ ಮರುಪಾವತಿ ಸಂದಾಯದ ಸಂದರ್ಭ 50 ಸಾವಿರ ರೂ. ಮನ್ನಾ ಅವಕಾಶವಿದೆ. ರೈತರು ಪ್ರಸ್ತುತ ಅವಧಿಯಲ್ಲಿ 3 ಲಕ್ಷರೂ. ತನಕ ಬೆಳೆ ಸಾಲದ ಶೂನ್ಯಬಡ್ಡಿ ಸೌಕರ್ಯವನ್ನು ಪಡೆಯಲು ಅರ್ಹರಾಗುತ್ತಾರೆ.
– ಎ. ಜಯಶಂಕರ ಬಾಸ್ರಿತ್ತಾಯ, ಅಧ್ಯಕ್ಷರು, ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘ

— ರಾಜಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next