ಚಳ್ಳಕೆರೆ: ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರಕ್ಕೆ ಅಡುಗೆ ಎಣ್ಣೆ ಮಾರುತ್ತಿದ್ದ ಕೆಲವೆಡೆ ಅಧಿಕಾರಿಗಳು ದಾಳಿ ನಡೆಸಿ ದಂಡ ವಿಧಿಸಿದ್ದಾರೆ.
ನಗರದ ಮಹದೇವಿ ರಸ್ತೆಯಲ್ಲಿನ ಕೆಲವು ಟ್ರೇಡಿಂಗ್ ಕಂಪನಿಯಲ್ಲಿ ಹೆಚ್ಚಿಗೆ ಹಣ ಪಡೆದು ಅಡುಗೆ ಎಣ್ಣೆ ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದ್ದನ್ನು ಆಧರಿಸಿ ಇಲ್ಲಿನ ತೂಕ ಮತ್ತು ಅಳತೆ ಇಲಾಖೆ ನಿರೀಕ್ಷಕ ಎಂ.ಎಚ್. ಸಂಪತ್‌ಕುಮಾರ್ ಸಿಬ್ಬಂದಿಯೊಂದಿಗೆ ಅಂಗಡಿಗಳಿಗೆ ತೆರಳಿ ಪರಿಶೀಲಿಸಿ ದಂಡ ವಿಧಿಸಿದ್ದಾರೆ.
ಪಾವಗಡ ರಸ್ತೆಯಲ್ಲಿರುವ ಗುರು ಟ್ರೇಡರ್, ಮೋಹನ್ ಆ್ಯಂಡ್ ಕೋ ಮತ್ತು ಎಂ.ಎಸ್.ಸ್ಟೋರ್ ಇಲ್ಲಿ ಪ್ರತಿನಿತ್ಯ ವಿವಿಧ ಅಡುಗೆ ಎಣ್ಣೆ ಟಿನ್ ಒಂದಕ್ಕೆ 2315 ಮೂಲ ಬೆಲೆ ಇದ್ದರೂ ಅದನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಬಂದ ದೂರುಗಳನ್ನು ಆಧರಿಸಿ ಗುರುವಾರ ಮಧ್ಯಾಹ್ನ ಸಹಾಯಕ ನಿಯಂತ್ರಕರಾದ ಗುರುಪ್ರಸಾದ್ ಮಾರ್ಗದರ್ಶನದಲ್ಲಿ ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮೂರು ಅಂಗಡಿ ಮಾಲೀಕರು ಹೆಚ್ಚಿನ ದರಕ್ಕೆ ಎಣ್ಣೆ ಟಿನ್, ಪಾಕೇಟ್‌ಗಳನ್ನು ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಎಲ್ಲರಿಗೂ ಎಚ್ಚರಿಕೆ ನೀಡಿ ಪ್ರತಿ ಅಂಗಡಿಗೆ 5 ಸಾವಿರದಂತೆ 15 ಸಾವಿರ ದಂಡ ವಿಧಿ ಸಲಾಗಿದೆ ಎಂದು ಸಂಪತ್‌ಕುಮಾರ್ ತಿಳಿಸಿದರು.
ಈ ಸಂದರ್ಭದಲ್ಲಿ ಪಿಎಸ್‌ಐ ಮಹೇಶ್‌ಗೌಡ, ಪೊಲೀಸ್ ಸಿಬ್ಬಂದಿ ಏಕಾಂತರೆಡ್ಡಿ, ಮಂಜುನಾಥ ಮಡುಗಿ, ತೂಕ ಮತ್ತು ಅಳತೆ ಇಲಾಖೆ ಸಿಬ್ಬಂದಿ ನವಾಜ್ ಆಹಮ್ಮದ್, ಪ್ರಭುದೇವ್ ಮುಂತಾದವರು ಇದ್ದರು.