Advertisement

ಅಡುಗೆ ಎಂದರೆ ಖುಷಿಯೂ ಬೇಸರವೂ

06:00 AM Dec 07, 2018 | |

ನನ್ನ ಅಕ್ಕ ಫೋನ್‌ ಮಾಡುವಾಗಲೆಲ್ಲ ಆ ದಿನ ತಾನೇನು ಅಡುಗೆ ಮಾಡಿದೆ ಎಂದು ವಿವರಿಸುತ್ತಿದ್ದಳು. ಮುಂಬಯಿಯಲ್ಲಿ ವಾಸವಿದ್ದ ಅವಳು ಸಾಮಾನ್ಯವಾಗಿ ಭಾನುವಾರ ಫೋನ್‌ ಮಾಡುತ್ತಿದ್ದಳು. ಆ ದಿನ ಹೆಚ್ಚಾಗಿ ಏನಾದರೂ ಸ್ಪೆಷಲ್ ಅಡುಗೆ ಇರುತ್ತಿತ್ತು. ತನಗೆ ತಿಳಿದಿದ್ದ ಚಿಕನ್‌ ವೆರೈಟಿಗಳ ಬದಲು ಇಂಟರ್ನೆಟ್‌ನಲ್ಲಿ ಹೊಸ ರೆಸಿಪಿಗಳನ್ನು ಹುಡುಕಿ, ಟಿವಿ ಚಾನೆಲ್ಗಳ ಅಡುಗೆ ಕಾರ್ಯಕ್ರಮಗಳ ರೆಸಿಪಿಗಳನ್ನು ಬರೆದಿಟ್ಟುಕೊಂಡು ವೈವಿಧ್ಯಮಯ ಅಡುಗೆ ತಯಾರಿಸುತ್ತಿದ್ದಳು. ಜೊತೆಗೆ ಅದನ್ನು ಮಾಡುವ ಕ್ರಮವನ್ನು ನನಗೆ ವಿವರಿಸಿ, “ನೀನೂ ಟ್ರೈ ಮಾಡು’ ಎನ್ನುತ್ತಿದ್ದಳು. ಗೊತ್ತಿರುವ ಅಡುಗೆ ಮಾಡಲು ಸಮಯವಿಲ್ಲ ಎನ್ನುವ ಸ್ಥಿತಿಯಲ್ಲಿರುವ ನಾನು, “ಏನಾದರೊಂದು ಅಡುಗೆ ಆದರೆ ಸಾಕು ನನ್ನ ಮೂವರು ಪುಟ್ಟ ಮಕ್ಕಳಿಗೆ ತಿನ್ನಿಸಿ ಶಾಲೆಗೆ ಹೊರಡಿಸಿ, ನಾನೂ ಸಮಯಕ್ಕೆ ಸರಿಯಾಗಿ ಹೊರಡುವಂತಾದರೆ ಸಾಕು’ ಎಂದು ಬೇಡುತ್ತಿದ್ದೆ. ಅವಳ ಮಾತಿಗೆ “ಹಾ, ಹೂಂ’ ಎಂದು ಫೋನಿಟ್ಟರೆ ತಂಗಿಯ ಫೋನ್‌. ಅವಳಿಗೂ ಹೀಗೇ ಏನಾದರೊಂದು ಹೊಸರುಚಿ ಪರೀಕ್ಷಿಸುವ ಹುಚ್ಚು. ಕೆಲಸಕ್ಕೆ ಹೋಗದೇ ಮನೆಯಲ್ಲೇ ಇದ್ದ ಇವರಿಬ್ಬರೂ ಹೀಗೇ ಮನೆಯನ್ನು ಲಕಲಕ ಹೊಳೆಯುವಂತಿಟ್ಟು, ರುಚಿರುಚಿಯಾದ ಅಡುಗೆಯನ್ನು ಖುಷಿಯಿಂದ ಮಾಡುತ್ತಾ ತಮ್ಮ ಗಂಡ, ಅವರ ಗೆಳೆಯರು, ನೆಂಟರು ಹೀಗೇ ಎಲ್ಲರ ಮೆಚ್ಚುಗೆ ಪಡೆಯುತ್ತಿದ್ದರು. ಶಿಕ್ಷಕ ವೃತ್ತಿಯ ನಾನು ಹಾಗೂ ನನ್ನ ದೊಡ್ಡಕ್ಕನ ಪಾಡು ನಾಯಿಪಾಡು. ಹಾಗೂ ಹೀಗೂ ಏಗುತ್ತಾ ಜಟ್ಪಟ್ ಎಂದು ಅಡುಗೆ ಮಾಡಿ, ಉಳಿದ ಮನೆಕೆಲಸ ಮುಗಿಸಿ ಕೆಲಸಕ್ಕೆ ಹೋಗುವ ಧಾವಂತ. 

Advertisement

ಇತ್ತೀಚೆಗೆ ನನ್ನ ಅಕ್ಕನಿಗೆ ಕೆಲಸಕ್ಕೆ ಸೇರುವುದು ಅನಿವಾರ್ಯವಾಯಿತು. ಮಕ್ಕಳೊಂದಿಗೆ ಮುಂಬಯಿಯಿಂದ ಬೆಂಗಳೂರಿಗೆ ಶಿಫ್ಟ್ ಆಗಿ ಕೆಲಸಕ್ಕೆ ಸೇರಿದ ಅಕ್ಕನಿಗೆ ಈಗ ಕೆಲಸದ ಒತ್ತಡ ಹಾಗೂ ಇತರ ಕಾರಣಗಳಿಂದ ಅಡುಗೆಯ ಮೇಲೆ ಮೊದಲಿದ್ದ ಆಸಕ್ತಿ ಹೊರಟು ಹೋಗಿದೆ. ಈಗ ಅವಳ ಫೋನ್‌ ಮಾತುಕತೆಯಲ್ಲಿ ಅಡುಗೆಯ ಪ್ರಸ್ತಾಪವೇ ಇಲ್ಲ. ನನ್ನ ತಂಗಿಗೂ ಎರಡನೆಯ ಮಗು ಹುಟ್ಟಿತು. ಇಬ್ಬರು ಮಕ್ಕಳ ಲಾಲನೆ-ಪಾಲನೆ, ಮನೆಕೆಲಸ, ಜೊತೆಗೆ ಗಂಡನ ಕಚೇರಿಯ ಕೆಲಸಗಳಲ್ಲಿ ಸಹಕಾರ ಇಷ್ಟಾದಾಗ ಅವಳಿಗೂ ಅಡುಗೆಯ ಮೇಲೆ ಮೊದಲಿದ್ದ ಅದಮ್ಯ ಆಸಕ್ತಿ ಸ್ವಲ್ಪ ಕಡಿಮೆಯಾಯಿತು. ನನ್ನ ತವರು ಮನೆಯಲ್ಲಿ ನನ್ನ ಅಮ್ಮನಿಗೆ ಅಡುಗೆ ಕೋಣೆಯಲ್ಲಿ ಕೆಲಸವಿಲ್ಲದಿದ್ದ ಸಮಯವೇ ವಿರಳ. ನನ್ನ ತವರೂರಲ್ಲಿರುವ ನೆಂಟರಿಷ್ಟರು, ನೆರೆಯವರ ಮನೆಗಳಲ್ಲೂ ಹೆಂಗಸರು ದಿನವಿಡೀ ತರಹೇವಾರಿ ಅಡುಗೆಗಳ ತಯಾರಿಯಲ್ಲಿ ಮುಳುಗಿರುತ್ತಿದ್ದುದನ್ನೇ ನೋಡಿದ್ದೆ. ಅವರಿಗೆಲ್ಲ ಅಡುಗೆ, ಜೀವನದ ಒಂದು ಅವಿಭಾಜ್ಯ ಅಂಗವೇ ಆಗಿದೆ. ಅವರ ಐಡೆಂಟಿಟಿಯೇ ಅಡುಗೆಯೊಂದಿಗೆ ತಳುಕು ಹಾಕಿಕೊಂಡಿದೆಯೆನಿಸುತ್ತದೆ. ನಮ್ಮ ಊರಲ್ಲಿ (ಬಹುಶಃ ಎಲ್ಲ ಊರುಗಳಲ್ಲೂ) ಹೆಂಗಸರ ಕುಶಲೋಪರಿಯಲ್ಲಿ ಅಡುಗೆಯ ವಿಷಯ ಇಣುಕದಿದ್ದರೆ ಅದು ಏನೋ ಗಹನವಾದ ಮಾತುಕತೆ ಎಂದೇ ಅರ್ಥ. ಅಡುಗೆಯನ್ನು ಮೆಚ್ಚಿಕೊಂಡವರು, ಅಡುಗೆಯಿಂದಾಗಿ  ಇತರರ ಮೆಚ್ಚುಗೆ ಪಡೆದುಕೊಂಡವರು, ಅಡುಗೆಯನ್ನೇ ಆಟವಾಗಿ ತಿಳಿದುಕೊಂಡವರೂ ಆದ ಹೆಂಗಸರ ಮಧ್ಯೆ ಅಡುಗೆಯೆಂದರೆ ಅಯ್ಯೋ, ಕರ್ಮ ಎನ್ನುವಂತಹ ನನ್ನಂತಹ ಕೆಲವರೂ ಇದ್ದಾರೆ.

ಅಡುಗೆಯ ಬಗ್ಗೆ ಸಾಮಾನ್ಯವಾಗಿ ಹೆಣ್ಣುಮಕ್ಕಳಿಗೆ ವಿಶೇಷ ಆಸಕ್ತಿ, ಅಭಿರುಚಿ ಇರುತ್ತದೆ. ಕೆಲವು ಗಂಡು ಮಕ್ಕಳಿಗೂ ಅಡುಗೆ ಮಾಡುವುದೆಂದರೆ ಇಷ್ಟ. ಸಣ್ಣವರಿರುವಾಗ ನಮ್ಮಂತಹ ಮಕ್ಕಳೆಲ್ಲಾ ಖಂಡಿತವಾಗಿಯೂ ಅಡುಗೆಯಾಟ ಆಡಿದ್ದೇವೆ. ಆದರೆ, ಅಡುಗೆಯ ಬಗೆಗಿದ್ದ ಆ ತೀವ್ರ ಆಸಕ್ತಿ ಹೊರಟು ಹೋಗಲು ಕಾರಣವಾದದ್ದು ಜಂಜಡದ ಜೀವನ. ಕೆಲಸವೂ ಬೇಕು, ಕೌಟುಂಬಿಕ ಜೀವನವೂ ಬೇಕು ಎಂದು ಎರಡನ್ನೂ ಸಂಭಾಳಿಸಲು ಹೆಣಗಾಡುವಾಗ, ಸಮಯವೆಂಬುದು ಪ್ರಪಂಚದ ಇನ್ಯಾವುದೇ ವಸ್ತುವಿಗಿಂತ ಅಮೂಲ್ಯವಾದದ್ದು ಅನಿಸುವಾಗ ಅಡುಗೆ ಎಂಬುದು ಆಟವಾಗಲು ಹೇಗೆ ಸಾಧ್ಯ? ಹಾಗಾಗಿ ನನ್ನಂತಹ ಉದ್ಯೋಗಿ ಮಹಿಳೆಯರ ಪಾಲಿಗೆ ಅಡುಗೆಯೆಂಬುದು ಒಂದು ಕರ್ಮ. ಯಾಕೆಂದರೆ, ಅಡುಗೆ ಮನೆಯ ಕೆಲಸವೆಂದರೆ ಕೇವಲ ಬೇಯಿಸುವುದಷ್ಟೇ ಅಲ್ಲ. ತರಕಾರಿಗಳನ್ನು ಹೆಚ್ಚುವುದು, ಮಸಾಲೆ, ಹಿಟ್ಟು ಇತ್ಯಾದಿಗಳನ್ನು ತಯಾರು ಮಾಡುವುದು, ಪಾತ್ರೆ ತೊಳೆಯುವುದು, ವಸ್ತುಗಳನ್ನು ಒಪ್ಪ ಓರಣವಾಗಿಡುವುದು, ಗುಡಿಸಿ, ಒರೆಸುವುದು, ಮಾಡಿಟ್ಟ ಅಡುಗೆಯನ್ನು ಬಡಿಸುವುದು, ಪುನಃ ಪಾತ್ರೆ ತೊಳೆಯುವುದು- ಹೀಗೆ ಅಡುಗೆ ಕೆಲಸದ ಬಾಲದಂತೆ ನೂರಾರು ಕೆಲಸಗಳಿರುತ್ತವೆ. ಸಮಯವೊಂದಿದ್ದರೆ ಬಹುಶಃ ಉದ್ಯೋಗಕ್ಕೆ ಹೋಗುವ ಮಹಿಳೆಯರೂ ಕೂಡ ಅಡುಗೆ ಕೆಲಸವನ್ನು ಇಷ್ಟಪಟ್ಟಾರು. ರಜಾದಿನಗಳಲ್ಲಿ ನಮ್ಮಂಥವರು ಮನಸ್ಸಿಟ್ಟು ಅಡುಗೆ ಕೆಲಸದಲ್ಲಿ ನಿರತರಾಗುತ್ತೇವೆ. ಉಳಿದ ದಿನಗಳಲ್ಲಿ ಒಂದು ದಿನದ ಕೆಲಸ ಮುಗಿಸುವಾಗ ಪುನಃ ಮರುದಿನಕ್ಕೆ ಏನು ಮಾಡುವುದು, ಸುಲಭದ ಅಡುಗೆ ಯಾವುದು ಎಂಬುದರತ್ತ ನಮ್ಮ ಚಿತ್ತ ಹರಿಯುತ್ತದೆ.

ಅಷ್ಟಕ್ಕೂ ಈ ಅಡುಗೆ ಕೆಲಸ ಹೆಂಗಸರಿಗೇ ಮೀಸಲು ಎಂದು ಜನ ಭಾವಿಸುವುದೇಕೋ? ಮಹಿಳೆ ಉದ್ಯೋಗಕ್ಕೂ ಹೋಗಿ ಕುಟುಂಬದ ಆರ್ಥಿಕ ವ್ಯವಹಾರದಲ್ಲಿ ಪಾಲುದಾರಳಾಗುವಾಗ ಗಂಡಸರು ಅವರ ಅಡುಗೆ ಕೆಲಸದಲ್ಲಿ ಪಾಲುಗಾರರಾಗಬೇಕಲ್ಲವೇ? ನನ್ನ ಗಂಡ ಒಮ್ಮೊಮ್ಮೆ ಅಡುಗೆ ಕೆಲಸ ತಾವಾಗಿ ಮಾಡುವುದುಂಟು ಅಥವಾ ನನಗೆ ಸಣ್ಣಪುಟ್ಟ ಸಹಾಯ ಮಾಡುವುದುಂಟು. ಅವರಾಗಿ ಅಡುಗೆ ಮಾಡಿದರೆಂದರೆ ನನಗೆ ಅಡುಗೆ ಮನೆಯನ್ನು ಪೂರ್ವಸ್ಥಿತಿಗೆ ತರುವುದೂ ಒಂದು ಕೆಲಸವಾಗುತ್ತದೆ. ಈರುಳ್ಳಿ ಸಿಪ್ಪೆ, ಇತರ ತರಕಾರಿಗಳನ್ನು ಕತ್ತರಿಸಿದಾಗ ಉಳಿದ ಕಸ ಎಲ್ಲಾ ಅಲ್ಲೇ ಬಿದ್ದಿರುತ್ತದೆ. ಡಬ್ಬಗಳೆಲ್ಲ ಸ್ಥಾನಪಲ್ಲಟವಾಗಿರುತ್ತವೆ. ಆದರೂ ಇಂತಹ ಸಹಾಯದಿಂದ ನನಗೆ ಸ್ವಲ್ಪ ಮಟ್ಟಿಗೆ ವಿಶ್ರಾಂತಿ ಸಿಗುತ್ತದೆ. ಮನೆಯ ಇತರ ಸದಸ್ಯರ ಅಳಿಲು ಸೇವೆ ಇದ್ದರೆ ಅಡುಗೆ ಎಂಬ ಕರ್ಮ ಎಲ್ಲಾ ಹೆಂಗಸರಿಗೂ ಖುಷಿ ತರುವ ಆಟವಾಗುತ್ತದೆ. 

ಜೆಸ್ಸಿ ಪಿ.ವಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next