Advertisement

ಅಡುಗೆ ಬಂಧನ

06:00 AM Dec 05, 2018 | |

ಇಂದು ದುಡಿಯುವ ಹೆಣ್ಣು ಮಕ್ಕಳು ಹೆಚ್ಚಿದ್ದು ಅವರು ಹೊರ ಜಗತ್ತಿಗೆ ತೆರೆದುಕೊಂಡಿದ್ದಾರೆ. ಅವಳು ಎಲ್ಲ ಕ್ಷೇತ್ರಗಳಲ್ಲೂ ದಾಪುಗಾಲಿಡುತ್ತಿದ್ದಾಳೆ. ಜಗತ್ತು ವೇಗವಾಗಿ ಮುಂದುವರಿಯುತ್ತಿದೆ. ಕಂಪ್ಯೂಟರ್‌ ಯುಗದಿಂದ ರೋಬೊಟ್‌ ಯುಗಕ್ಕೆ ಬಂದಿದ್ದೇವೆ. ಮಂಗಳನ ಅಂಗಳಕ್ಕೆ ಹಾರಿದ್ದೇವೆ. ಆದರೆ, ಹೆಣ್ಣಿಗೆ ಅಡುಗೆ ಮನೆ ಅಂಗಳದಿಂದ ಮುಕ್ತಿ ದೊರಕುವುದೆಂದು?

Advertisement

ಡಾಕ್ಟರ್‌ ಆಗಬೇಕೆಂಬುದು ನನ್ನ ಕನಸಾಗಿತ್ತು. ಅದಕ್ಕಾಗಿ ಪಿಯುಸಿಯಲ್ಲಿ ವಿಜ್ಞಾನ ವಿಷಯ ತೆಗೆದುಕೊಂಡಿದ್ದೆ. ಪ್ರಥಮ ಶ್ರೇಣಿಯಲ್ಲಿ ಪಾಸಾದರೂ ಪಿಯುಸಿ ಮುಗಿದ ತಕ್ಷಣ ತಂದೆ ನನಗೆ ಮದುವೆ ಮಾಡಿಸಿದರು. ಆ ಸಮಯದಲ್ಲಿ ಮುಂದೆ ಓದಲಾಗುತ್ತಿಲ್ಲ ಎಂಬ ಕಾರಣದಿಂದ ಅತ್ತದ್ದಕ್ಕೆ ನನ್ನ ಅಜ್ಜಿ “ಹೆಣ್ಣು ಎಷ್ಟು ಕಲಿತರೇನು? ಒಲೆಯಿಂದ ಬೂದಿ ತೆಗೆಯುವ ಕೆಲಸ ಮಾತ್ರ ತಪ್ಪುವುದಿಲ್ಲ’ ಎಂದು ಹೇಳಿ ಸಮಾಧಾನ ಪಡಿಸಿದ್ದರು. ಅವರ ಪ್ರಕಾರ, ಹೆಣ್ಣು ಎಷ್ಟೇ ಕಲಿತರೂ ಕೊನೆಗೂ ಮಾಡಬೇಕಾದದ್ದು ಅಡುಗೆ ಕೆಲಸ. ಇದರಿಂದ ಅವಳಿಗೆ ಬಿಡುಗಡೆ ಇಲ್ಲ. ಅಜ್ಜಿಯ ಹಳೆಕಾಲದ ಈ ಮಾತು, ನಾಲ್ಕು ಗೋಡೆಯ ಬಂಧನದಿಂದ ಹೊರಗೆ ಬಂದ ಇಂದಿನ ಆಧುನಿಕ ಮಹಿಳೆಯರಿಗೂ ಅನ್ವಯಿಸುತ್ತದೆ.

ಮೊನ್ನೆ ಉನ್ನತ ಹುದ್ದೆಯಲ್ಲಿರುವ ನನ್ನ ಗೆಳತಿ ಒಬ್ಬಳು ಹೇಳಿದಳು, “ಈಚೆಗೆ ಕೆಲಸದ ನಿಮಿತ್ತ ನಾನು ನಾಲ್ಕೈದು ದಿನ ದೂರ ಹೋಗಬೇಕಾಯಿತು. ಅಷ್ಟೂ ದಿನಕ್ಕಿರುವ ಅಡುಗೆಯ ಬಹುಪಾಲು ಮಾಡಿ ಫ್ರಿಡ್ಜ್ನಲ್ಲಿ ಇರಿಸಿ ಹೋದೆ’. ವಿವರಿಸು ಎಂದಾಗ “ಉಪ್ಪಿಟ್ಟು ಮಾಡಲು ಬೇಕಾದ ರವೆ ಹುರಿದು ಒಗ್ಗರಣೆ ಕೊಟ್ಟು ಇಟ್ಟೆ. ಆಗ ಗಂಡನಿಗೆ ಹೆಚ್ಚು ಕೆಲಸ ಇರುವುದಿಲ್ಲ ನೋಡು. ನೀರು ಕುದಿಸಿ ಅದಕ್ಕೆ ಸೇರಿಸಿದರೆ ಮುಗಿಯಿತು. ದೋಸೆ ಮಾಡಲು ಅಕ್ಕಿ ರುಬ್ಬಿ ಫ್ರಿಡ್ಜ್ನಲ್ಲಿಟ್ಟಿದ್ದೆ. ತಿನ್ನಬೇಕಾದಾಗ ತೆಗೆದು ಕಾವಲಿಯಲ್ಲಿ ಹೊಯ್ದರಾಯಿತು. ಅವಲಕ್ಕಿ ಮಸಾಲೆಯನ್ನೂ ಮಾಡಿ ಇರಿಸಿದ್ದೆ. ಅವಲಕ್ಕಿ ಬೆರೆಸಿ ತಿಂದರಾಯಿತು. ಸಾಂಬಾರು, ಸಾರು ಮಾಡಿದ್ದೆ. ಬೇಕಾದಾಗ ತೆಗೆದು ಬಿಸಿ ಮಾಡಿ ಬಳಸುತ್ತಾರೆ…’ ಹೇಳುತ್ತಾ ಹೋದಳು. 

ಇದು ಅವಳ ಒಬ್ಬಳ ಕತೆಯಲ್ಲ ಮನೆ ಮನೆ ಕತೆ. 
ಹೊರಗೆ ಹೋಗಬೇಕಾದರೆ ಹೆಚ್ಚಿನ ಎಲ್ಲ ಹೆಂಗಸರಿಗೂ ಈ ಜವಾಬ್ದಾರಿ ಹೆಗಲಿಗೇರಿರುತ್ತದೆ. ನನ್ನಂಥ ಜಮೀನಾªರ ಮಹಿಳೆಯರಿಗೆ ಇನ್ನೂ ಕಷ್ಟ. ಅವಳಿಗೆ ಗಂಡ, ಮಕ್ಕಳಿಗೆ ಮಾತ್ರ ಅಲ್ಲ ತೋಟದ ಕೆಲಸಕ್ಕೆ ಬರುವ ಕಾರ್ಮಿಕರಿಗೂ ಅಡುಗೆ ಮಾಡಬೇಕಾದ ಪರಿಸ್ಥಿತಿ. ನಾನು ನಾಳೆ ಹೊರಗೆ ಹೋಗಲು ಇದೆಯೆಂದಾದರೆ, ಇಂದೇ ರಾತ್ರಿ ಉಗಿಯಲ್ಲಿ ಬೇಯಿಸಿ ಮಾಡುವ ಪುಂಡಿ, ಕಡುಬು, ಪತ್ರೊಡೆಯಂಥ ತಿಂಡಿಯನ್ನು ಮಾಡಿಡುತ್ತೇನೆ. ಯಾಕೆ ಹೀಗೆ? ಒಂದು ದಿನದ ಮಟ್ಟಿಗಾದರೂ ಅಡುಗೆ ಮನೆ ಹೊಣೆಯನ್ನು ಗಂಡಿಗೆ ಹೊತ್ತುಕೊಳ್ಳಲು ಆಗುವುದಿಲ್ಲವಾ? ಅದೂ ಅಲ್ಲದೆ ಹೊರಗೆ ದುಡಿಯುವ ಹೆಣ್ಣಿಗೆ ಸಾಮಾನ್ಯ ಗೃಹಿಣಿಯರಿಗಿಂತ ಹೆಚ್ಚು ಕೆಲಸ ಇರುತ್ತದೆ. ಗಂಡನಾದವನು, “ನೀನೇನೂ ಮಾಡಿ ಇಡಬೇಡ. ಒಂದೆರಡು ದಿನ ಅಲ್ವಾ, ನಾನೇ ಮಾಡಿಕೊಳ್ಳುತ್ತೇನೆ’ ಎಂದು ಏಕೆ ಹೇಳುವುದಿಲ್ಲ? ಒಂದು ವೇಳೆ ಹೇಳಿದರೆ ಅವಳೆಷ್ಟು ಖುಷಿ ಪಡುತ್ತಾಳೆ ಎಂದು ಅವನಿಗೆ ಗೊತ್ತಾಗುವುದು ಯಾವಾಗ?

ಅಡುಗೆ ಎಂದಾಗ ಇನ್ನೊಂದು ವಿಷಯ ನೆನಪಿಗೆ ಬರುತ್ತಿದೆ. ಈಚೆಗೆ ನನ್ನ ಗೆಳತಿಯೊಬ್ಬಳಿಗೆ ಪ್ರಸಿದ್ಧ ದಿನಪತ್ರಿಕೆಯೊಂದು ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಬಂತು. ಅವಳು ಬರೆದ ಪ್ರಬಂಧದ ಹೆಸರು “ಉರಿವ ಒಲೆಯ ಮುಂದೆ’. ಅದೇ ಸಮಯದಲ್ಲಿ ಇದನ್ನು ಪತ್ರಿಕೆಯಲ್ಲಿ ನೋಡಿದ, ನನಗೂ ಅವಳಿಗೂ ಪರಿಚಯವಿರುವ ಲೇಖಕ ಮಿತ್ರರೊಬ್ಬರು ಯಾವುದೋ ಕಾರ್ಯಕ್ರಮದಲ್ಲಿ ನನಗೆ ಸಿಕ್ಕಿ ಆ ನನ್ನ ಗೆಳತಿಗೆ ಅಭಿನಂದನೆ ತಿಳಿಸುವಂತೆ ಹೇಳಿದರು.

Advertisement

ನಾನು ಖುಷಿಯಿಂದ “ಆಯ್ತು’ ಎಂದು ಹೇಳಿದೆ. ನಂತರ “ಆ ಪ್ರಬಂಧದ ಬಗ್ಗೆ ನಿಮ್ಮ ಅನಿಸಿಕೆ ಏನು?’ ಎಂದು ಕೇಳಿದಾಗ ಅವರು “ಶೀರ್ಷಿಕೆ ನೋಡಿಯೇ ಬಿಟ್ಟುಬಿಟ್ಟೆ. ಮುಂದೆ ಓದಲಿಲ್ಲ. ನೀವು ಎಷ್ಟೂಂತ ಅಡುಗೆ ಮನೆಯ ಬಗ್ಗೆಯೇ ಬರೆಯುತ್ತೀರಿ? ಶತ ಶತಮಾನಗಳಿಂದಲೂ ನಿಮಗೆ ಅದೇ ವಿಷಯ. ಪ್ರಪಂಚ ಎಷ್ಟು ದೊಡ್ಡದಾಗಿದೆ! ಹೊರ ಜಗತ್ತಿನ ಬಗ್ಗೆ ಬರೆಯಿರಿ. ಹೊಸಹೊಸ ವಿಷಯಗಳ ಬಗ್ಗೆ ಬರೆಯಿರಿ. ಇನ್ನೂ ಅದೇ ಅಡುಗೆ ಮನೆ… ಒಲೆ… ಉರಿ… ನೀವು ಬದಲಾಗುವುದು ಯಾವಾಗ?’ ಎಂದರು. 

ನಾನು ಉತ್ತರ ಕೊಡಲಿಲ್ಲ. ಆದರೆ, ಮನಸ್ಸು ಹೇಳಿತು, ಯಾವಾಗ ನೀವು ಅಡುಗೆ ಮನೆ ಜವಾಬ್ದಾರಿಯನ್ನು ಸಮಾನವಾಗಿ ಹೊತ್ತುಕೊಳ್ಳುತ್ತೀರೋ ಆಗ ನಾವು ಬದಲಾಗುತ್ತೇವೆ. ಪ್ರಸಿದ್ಧ ಕವಯತ್ರಿ ಗೆಳತಿಯೊಬ್ಬಳ ಕವನದ ಸಾಲು ಹೀಗಿದೆ- “ಒಲೆ ಬದಲಾದರೂ ಉರಿ ಬದಲಾಗದು’. ಈ ಮಾತು ಎಷ್ಟು ನಿಜ!

ಸಹನಾ ಕಾಂತಬೈಲು

Advertisement

Udayavani is now on Telegram. Click here to join our channel and stay updated with the latest news.

Next