ಶಿವಮೊಗ್ಗ: ಕರ್ನಾಟಕದ ಯುವ ಕ್ರಿಕೆಟ್ ಆಟಗಾರ ಪ್ರಖರ್ ಚತುರ್ವೇದಿ ಅವರು ಕೂಚ್ ಬೆಹಾರ್ ಟ್ರೋಫಿ ಪಂದ್ಯದಲ್ಲಿ 404 ರನ್ ಗಳಿಸಿ ದಾಖಲೆ ಬರೆದಿದ್ದಾರೆ.
ಶಿವಮೊಗ್ಗದ ಕೆಎಸ್ ಸಿಎ ನವುಲೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ವಿರುದ್ಧದ ಪ್ರತಿಷ್ಠಿತ U-19 ದೇಶೀಯ ನಾಲ್ಕು ದಿನಗಳ ಫೈನಲ್ ಪಂದ್ಯದಲ್ಲಿ ಪ್ರಖರ್ ಚತುರ್ವೇದಿ ಈ ದಾಖಲೆ ಬರೆದರು. ಪಂದ್ಯಾವಳಿಯ ಫೈನಲ್ ನಲ್ಲಿ 400 ಅಥವಾ ಅದಕ್ಕಿಂತ ಹೆಚ್ಚಿನ ರನ್ ಗಳಿಸಿದ ಮೊದಲ ಕ್ರಿಕೆಟಿಗರಾದರು.
ಪ್ರಖರ್ ಚತುರ್ವೇದಿ 46 ಬೌಂಡರಿಗಳು ಮತ್ತು 3 ಸಿಕ್ಸರ್‌ಗಳನ್ನು ಹೊಡೆದು ಕರ್ನಾಟಕ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಲು ಮತ್ತು ಪ್ರಶಸ್ತಿ ಗೆಲ್ಲಲು ನೆರವಾದರು. ಪ್ರಖರ್ ಅವರು 638 ಎಸೆತಗಳಲ್ಲಿ 404 ರನ್ ಗಳಿಸಿ ಅಜೇಯರಾಗುಳಿದರು. ಯುವ ಆರಂಭಿಕ ಆಟಗಾರ 100 ಕ್ಕೂ ಹೆಚ್ಚು ಓವರ್ ಗಳನ್ನು ಸ್ವತಃ ಎದುರಿಸಿದರು.
ಪ್ರಖರ್ ಚತುರ್ವೇದಿ ಒಬ್ಬರೇ ಮುಂಬೈ ತಂಡದ ಮೊತ್ತವಾದ 380 ಕ್ಕಿಂತ 24 ರನ್ ಗಳಿಸಿದರು. ಕರ್ನಾಟಕ 223 ಓವರ್‌ಗಳಲ್ಲಿ 8 ವಿಕೆಟ್‌ಗೆ 890 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತು.
ಹರಿಶಿಲ್ ಧರ್ಮಾನಿ 169 ರನ್ ಬಾರಿಸಿದರೆ, ಕಾರ್ತಿಕೇಯ ಕೆಪಿ 72 ರನ್ ಹೊಡೆದರು. ಕೂಚ್ ಬೆಹಾರ್ ಟ್ರೋಫಿ ಫೈನಲ್ ನಲ್ಲಿ ದಾಖಲೆಯ ಇನ್ನಿಂಗ್ಸ್ ಆಡಿದ ಪ್ರಖರ್ ಗೆ ಉತ್ತಮ ಬೆಂಬಲ ನೀಡಿದರು.