ಕೆ.ಆರ್.ಪುರ: ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಭೈರತಿ ಬಸವರಾಜ ಅವರು ಶುಕ್ರವಾರ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಹೊರಮಾವು ವಾರ್ಡ್‌ನ ಚೇಳಕೆರೆ, ಮೇಘನಪಾಳ್ಯ, ಬಾಬುಸಪಾಳ್ಯ, ಹೊಯ್ಸಳನಗರ, ಕೊತ್ತನೂರು, ಬ್ಯಾಂಕ್ ಅವೆನ್ಯೂ ಬಡಾವಣೆ ಸೇರಿ ವಿವಿಧೆಡೆ ಮತ ಯಾಚಿಸಿದರು. ಚೇಳಕೆರೆ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಮಹಿಳೆಯರು ಆರತಿ ಬೆಳಗಿ ಶಾಸಕರನ್ನು ಬರಮಾಡಿಕೊಂಡರು.
ತಮ್ಮ ಐದು ವರ್ಷ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಟ್ಟ ಭೈರತಿ ಬಸವರಾಜ, ಕ್ಷೇತ್ರದ ಮತ್ತಷ್ಟು ಅಭಿವೃದ್ಧಿಗಾಗಿ ಮೇ 12ರಂದು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಕೋರಿದರು.
ಈ ವೇಳೆ ಮಾತನಾಡಿದ ಅವರು, ಕ್ಷೇತ್ರದ ಬಡವರು, ಹಿಂದುಳಿದವರು, ಅಲ್ಪ ಸಂಖ್ಯಾತರು ಸೇರಿ ಎಲ್ಲ ವರ್ಗದವರ ಕುಂದು ಕೊರತೆ ಆಲಿಸಿ, ರಾಜ್ಯ ಸರ್ಕಾರದಿಂದ ಹೆಚ್ಚು ಅನುದಾನ ತಂದು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಮಾಣಿಕವಾಗಿ ಕೆಲಸ ಮಾಡಿದ್ದೇನೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದೆ. ಸಾಮಾಜಿಕ ನ್ಯಾಯಕ್ಕೆ ವಿಶೇಷ ಒತ್ತು ನೀಡಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಪರಿಣಾಮ ರಾಜ್ಯದಾದ್ಯಂತ ಕಾಂಗ್ರೆಸ್‌ಗೆ ಜನ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಸಮರ್ಪಕ ಕಸ ವಿಲೇವಾರಿ, ರಸ್ತೆಗಳ ಡಾಂಬರೀಕರಣ, ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡ 600 ಬಡ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ, ಕ್ಷೇತ್ರದ ಬಹುತೇಕ ವಾರ್ಡ್‌ಗಳಿಗೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸಿದ್ದು, ಟ್ಯಾಂಕರ್‌ಗಳ ಹಾವಳಿ ತಡೆಯಲು ಕೊಳೆವೆಬಾವಿಗಳನ್ನು ಕೊರೆಸಲಾಗಿದೆ. ಜತೆಗೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನವೀಕರಣ,
ಸುಸಜ್ಜಿತ ಆಡಿಟೋರಿಯಂ ನಿರ್ಮಾಣ, ಬೆಂಗಳೂರು ಒನ್ ಕೇಂದ್ರಗಳು, ಸ್ಕೈವಾಕ್‌ಗಳು, ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಕೆ, ಪಶು ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆಗಳ ನಿರ್ಮಾಣ, ಪೊಲೀಸ್ ವಸತಿ ಗೃಹಗಳ ನಿರ್ಮಾಣ ಮಾಡುವ ಜತೆಗೆ ಕೆರೆ, ರಾಜಕಾಲುವೆಗಳ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ವಿವರಿಸಿದರು.
ಈ ವೇಳೆ ಪಾಲಿಕೆ ಸದಸ್ಯೆ ರಾಧಮ್ಮ ವೆಂಕಟೇಶ, ವಾರ್ಡ್ ಅಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ಸಂಪತ್‌ಕುಮಾರ್, ಡಿಸಿಸಿ ಸದಸ್ಯ ಶ್ರೀನಿವಾಸ, ವಿ.ಡಿ.ಎಸ್.ಪ್ರದೀಪ್ ಕುಮಾರ್ ಇತರರು ಇದ್ದರು.