ಲಕ್ನೋ : ಧಾರ್ಮಿಕ ಸ್ಥಳಗಳನ್ನು ಪ್ರವಾಸಿ ತಾಣಗಳನ್ನಾಗಿ ಪರಿವರ್ತಿಸಿ ಹಣ ಗಳಿಸುವುದು ಮೋದಿ ಸರ್ಕಾರದ ಏಕೈಕ ಉದ್ದೇಶವಾಗಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಗುರುವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗಂಗಾ ಕ್ರಿಯಾ ಯೋಜನೆಯಡಿ ಗಂಗಾ ನದಿಯನ್ನು ಸ್ವಚ್ಛಗೊಳಿಸಲು ಬಳಸಬೇಕಾಗಿದ್ದು, ಬಿಜೆಪಿಯು ಎಂವಿ ಗಂಗಾ ವಿಲಾಸದಂತಹ ಕಾರ್ಯಕ್ರಮಗಳಲ್ಲಿ ಹಣವನ್ನು ವ್ಯರ್ಥ ಮಾಡುತ್ತಿದೆ ಎಂದು ಯಾದವ್ ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿಶ್ವದಲ್ಲೇ ಅತಿ ಉದ್ದದ ನದೀಯಾನವನ್ನು ಜ.13ಕ್ಕೆ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದು, ಅದಕ್ಕೂ ಮುನ್ನ ಅಖಿಲೇಶ್ ಈ ಪ್ರತಿಕ್ರಿಯೆ ನೀಡಿದ್ದಾರೆ.
”ಜನರು ತಮ್ಮ ಜೀವನದ ಕೊನೆಯ ಹಂತದಲ್ಲಿ ಅಥವಾ ಆಧ್ಯಾತ್ಮಿಕತೆ ಮತ್ತು ಜ್ಞಾನವನ್ನು ಪಡೆಯಲು ವಾರಾಣಸಿಗೆ ಭೇಟಿ ನೀಡುತ್ತಾರೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ಮೂಲಕ ಹಣ ಗಳಿಸಲು ಬಿಜೆಪಿ ಈ ವ್ಯವಸ್ಥೆ ಮಾಡುತ್ತಿದೆ. ದೋಣಿಗಳನ್ನು ಓಡಿಸುತ್ತಿದ್ದ ನಿಷದರು ಅಲ್ಲಿಂದ ಹೊರಬರುತ್ತಾರೆ. ದೊಡ್ಡ ಕೈಗಾರಿಕೋದ್ಯಮಿಗಳು ಮತ್ತು ಇತರ ವ್ಯಾಪಾರಿಗಳಿಗೆ ಮಾತ್ರ ಸೌಲಭ್ಯಗಳು ಸಿಗುತ್ತವೆ ಎಂದು ಕಿಡಿ ಕಾರಿದ್ದಾರೆ.
ಎಂವಿ ಗಂಗಾ ವಿಲಾಸ ಹೆಸರಿನ ಯಾತ್ರೆ ಭಾರತ ಮತ್ತು ಬಾಂಗ್ಲಾ ದೇಶಗಳ ನಡುವೆ 27 ನದಿಮಾರ್ಗಗಳ ಮೂಲಕ ಹಾದುಹೋಗಲಿದ್ದು, ವಾರಾಣಸಿಯ ಗಂಗಾನದಿ ತಟಾಕದಲ್ಲಿರುವ “ಟೆಂಟ್ ಸಿಟಿ’ಯನ್ನು, 1000 ಕೋಟಿ ರೂ. ವೆಚ್ಚದ ಒಳನಾಡು ಜಲಮಾರ್ಗಗಳ ಯೋಜನೆಗಳಿಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ.